ಸಿ.ಟಿ.ರವಿ ಸೇರಿದಂತೆ ಬಿಜೆಪಿಗರ ಎದೆ ಸೀಳಿದರೆ ನಾಲ್ಕಕ್ಷರ ಸಿಗುವುದಿಲ್ಲ; ಉಪ್ಪು ತಿಂದಿದ್ದೀರಿ, ನೀರು ಕುಡಿಯಲು ತಯಾರಾಗಿರಿ: ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ಬಿಜೆಪಿ ನಾಯಕ ಸಿಟಿ ರವಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ‘ಕಾನೂನಿಗೆ ಸವಾಲು ಹಾಕುತ್ತೇನೆ ಎನ್ನುವ ನಿಮ್ಮ ಧಾರ್ಷ್ಟ್ಯ ನಡೆಯುವುದಿಲ್ಲ. ಉಪ್ಪು ತಿಂದಿದ್ದೀರಿ, ನೀರು ಕುಡಿಯಲು ತಯಾರಾಗಿರಿ’ ಎಂದು ಸೋಮವಾರ ಖಡಕ್ ಎಚ್ಚರಿಕೆ ನೀಡಿದ್ದಾರೆ.

ತಮ್ಮ ದ್ವೇಷದ ಹೇಳಿಕೆಯನ್ನು ಸಮರ್ಥಿಸಲು ಒಂದು ಸುಳ್ಳಿಗೆ ಮತ್ತೊಂದು ಸುಳ್ಳನ್ನು ಪೋಣಿಸುತ್ತಾ ಸುಳ್ಳಿನ ಹಾರವನ್ನೇ ಹಾಕಿಕೊಳ್ಳುವ ಸಿ.ಟಿ ರವಿಯಂತಹವರು ರಾಜಕೀಯ ವ್ಯವಸ್ಥೆಗೆ ಅಂಟಿರುವ ಕಳಂಕ ಎಂದು ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ.

ಸಿ.ಟಿ ರವಿ ಸೇರಿದಂತೆ ಬಿಜೆಪಿಗರ ಎದೆ ಸೀಳಿದರೆ ನಾಲ್ಕಕ್ಷರಗಳೂ ಸಿಗುವುದಿಲ್ಲ, ಜೊತೆಗೆ ನೈತಿಕತೆ, ಲಜ್ಜೆ, ಸತ್ಯ, ಬದ್ಧತೆ, ಆತ್ಮಸಾಕ್ಷಿಗಳೂ ಕಾಣುವುದಿಲ್ಲ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಯಾವುದೇ ಒಂದು ದೊಡ್ಡ ಮಟ್ಟದ ಕೋಮು ಕಲಹ ಸೃಷ್ಟಿಸಲು ಸಾಧ್ಯವಾಗದ ಕಾರಣ ಬಿಜೆಪಿಯವರು ಅಸಹನೀಯರಾಗಿ ವರ್ತಿಸುತ್ತಿದ್ದಾರೆ.

ಯಾವುದೇ ವಿಷಯವಿರಲಿ, ಅದಕ್ಕೆ ಪಾಕಿಸ್ತಾನ ಮತ್ತು ಹಿಂದೂ - ಮುಸ್ಲಿಂ ವಿಷಯವನ್ನು ಜೋಡಿಸುವುದು ದ್ವೇಷಸಂಜಾತ ಬಿಜೆಪಿಯ ಹುಟ್ಟುಗುಣ, ಬಿಜೆಪಿಯವರ ಅಸ್ತಿತ್ವ ಇರುವುದೇ ಸಮಾಜ ವಿಭಜನೆಯಲ್ಲಿ ಎನ್ನುವುದನ್ನು ಪದೇ ಪದೇ ಹೇಳಬೇಕಿಲ್ಲ.

NEET ವಿದ್ಯಾರ್ಥಿಗಳ ಹೋರಾಟದ ವಿಷಯದಲ್ಲೂ ಧರ್ಮಗಳನ್ನು ಎಳೆದುತಂದ ಸಿ.ಟಿ ರವಿಯವರು ತಮ್ಮ ದ್ವೇಷದ ಹೇಳಿಕೆಯನ್ನು ಸಮರ್ಥಿಸಲು NEET ಹೋರಾಟಕ್ಕೆ ಸಂಬಂಧವೇ ಇಲ್ಲದ ವಿಡಿಯೋ ಒಂದನ್ನ ತೋರಿಸಿ ದಿಕ್ಕು ತಪ್ಪಿಸುವ ವಿಫಲ ಯತ್ನ ಮಾಡಿದ್ದಾರೆ.

ಸಿಟಿ ರವಿ ಅವರೇ, ಸತ್ಯ ಹೇಳಲು ಹಿಂಜರಿಕೆ ಬೇಕಿಲ್ಲ, ಆದರೆ ಸುಳ್ಳು ಹೇಳಲು ಹಿಂಜರಿಕೆ, ನೈತಿಕ ಭಯ, ಸಾಮಾಜಿಕ ಭಯ ಇರಬೇಕಾಗುತ್ತದೆ, ಅಂತಹದ್ದು ಯಾವುದೂ ತಮಗೆ ಇಲ್ಲ ಎನ್ನುವುದನ್ನು ನಿರೂಪಿಸುತ್ತಲೇ ಇದ್ದೀರಿ..

ಈ ಹಿಂದೆ ಸದನದಲ್ಲಿ ತಾವು ಆಡಿದ ಮಾತಿನಿಂದಲೇ ನಿಮ್ಮ ಗುಣ ಏನೆಂದು ರಾಜ್ಯಕ್ಕೆ ತಿಳಿದಿದೆ, ಅಂದು ತಾವು ಆಡಿದ್ದ ಮಾತಿನ ತನಿಖೆಗೆ ಇಂದಿಗೂ ಧ್ವನಿ ಸ್ಯಾಂಪಲ್ ಕೊಡದಿರುವುದು ತಮ್ಮ ಪಲಾಯನವಾದ ಮತ್ತು ಅನೈತಿಕತೆಯನ್ನು ತೋರಿಸುತ್ತದೆ.

"ಕಾನೂನಿಗೆ ಸವಾಲು ಹಾಕುತ್ತೇನೆ" ಎಂಬ ನಿಮ್ಮ ದ್ರಾಷ್ಟ್ಯ ನಡೆಯುವುದಿಲ್ಲ, ಉಪ್ಪು ತಿಂದಿದ್ದೀರಿ, ನೀರು ಕುಡಿಯಲು ತಯಾರಾಗಿರಿ ಎಂದು ಖರ್ಗೆ ಎಚ್ಚರಿಕೆ ನೀಡಿದ್ದಾರೆ.