ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ನಾಯಕರ ಆಡಿಯೋ ವೈರಲ್: ಏನೆಲ್ಲ ಆಗಿದೆ ನೋಡಿ....

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಬಂಡಾಯ ಭುಗಿಲೆದ್ದಿದೆ. ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ನಾಯಕರ ವಿರುದ್ಧವೇ ಮಾಜಿ ಸಚಿವ, ಶಾಸಕ ಆರ್‌.ಬಿ. ತಿಮ್ಮಾಪುರ ಮತ್ತು ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅಸಮಾಧಾನ ಹೊರಹಾಕಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರಿ ಬಿರುಗಾಳಿ ಎಬ್ಬಿಸಿದೆ.

ವೈರಲ್ ಆಗಿರುವ ಆಡಿಯೋ ಸಂಭಾಷಣೆಯಲ್ಲಿ, ಸಚಿವ ಸ್ಥಾನ ಹಂಚಿಕೆ ಹಾಗೂ ಜಿಲ್ಲಾ ಉಸ್ತುವಾರಿ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರೂ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿರುವುದು ದೊಡ್ಡ ದುರಂತ. ಹೈಕಮಾಂಡ್‌ನವರು ಹುಚ್ಚರಿದ್ದಾರೆ. ಶೇಕಡಾ 70 ರಿಂದ 80 ರಷ್ಟು ಹಣದ ಮೇಲೆಯೇ ಸಚಿವ ಸ್ಥಾನಗಳು ಮಾರಾಟವಾಗಿವೆ ಎಂದು ಜಿಲ್ಲಾಧ್ಯಕ್ಷ ನಂಜಯ್ಯನಮಠ ಆರೋಪಿಸಿದ್ದಾರೆ.

ಎಚ್. ಕೆ. ಪಾಟೀಲ್ ಅವರಂತಹ ಹಿರಿಯ, ಪ್ರಾಮಾಣಿಕ ನಾಯಕರಿಗೆ ಸಚಿವ ಸ್ಥಾನ ತಪ್ಪಿಸಲಾಗಿದೆ. ಹೈಕಮಾಂಡ್ ನಾಯಕರು ಬಂದು ಜಾತ್ರೆ ಮಾಡಿ ಹೋಗುತ್ತಾರೆ, ಮುಂದೆ ನಾವೇ ಕಷ್ಟ ಎದುರಿಸಬೇಕಾಗುತ್ತದೆ ಎಂದು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕೆ. ಸಿ. ವೇಣುಗೋಪಾಲ್, ಸಿಎಂ ಮತ್ತು ಡಿಸಿಎಂ ಡಿ. ಕೆ. ಶಿವಕುಮಾರ್ ಅವರ ಕುರಿತು ಏಕವಚನದಲ್ಲೇ ಹಗುರವಾಗಿ ಮಾತನಾಡಿದ್ದಾರೆ.

ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಅವರಿಗೆ ಸಚಿವ ಸ್ಥಾನ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ನಾಯಕರು, ಯಾವುದೇ ಕಾರಣಕ್ಕೂ ಕಾಶಪ್ಪನವರ್ ಅವರಿಗೆ ಉಸ್ತುವಾರಿ ಸಿಗಬಾರದು. ಈ ನಿಟ್ಟಿನಲ್ಲಿ ಶಾಸಕರಿಂದ ಸಹಿ ಸಂಗ್ರಹಿಸಿ ಉಸ್ತುವಾರಿಯನ್ನು ತಪ್ಪಿಸಬೇಕು ಎಂದು ಚರ್ಚಿಸಿದ್ದಾರೆ. 

ಹಣಕ್ಕಾಗಿ ಪೇಮೆಂಟ್ ಸೀಟ್; ಬಿಜೆಪಿ ಆಕ್ರೋಶ

ಈ ಆಡಿಯೋವನ್ನು ರಿಲೀಸ್ ಮಾಡಿದ ಬಿಜೆಪಿ ನಾಯಕ ಚಲವಾದಿ ನಾರಾಯಣಸ್ವಾಮಿ, “ಕಾಂಗ್ರೆಸ್ಸಿಗರು ಸಚಿವ ಸ್ಥಾನಗಳನ್ನು ಹರಾಜಿಗಿಟ್ಟಿದ್ದಾರೆ, ಹಣಕ್ಕಾಗಿ ಪೇಮೆಂಟ್ ಸೀಟ್ ಮಾಡಿಕೊಂಡಿದ್ದಾರೆ” ಎಂದು ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.

ಕಾಶಪ್ಪನವರ್ ಹೇಳಿದ್ದೇನು...?

ಆಡಿಯೋ ವಿಚಾರವಾಗಿ ತೀವ್ರ ಆಕ್ರೋಶ ಹೊರಹಾಕಿದ ನೂತನ ಸಚಿವ ಕಾಶಪ್ಪನವರ್, ನಮ್ಮ ಕುಟುಂಬದ ವಿರುದ್ಧ ಹಿಂದಿನಿಂದಲೂ ಕುತಂತ್ರ, ಷಡ್ಯಂತ್ರ ನಡೆಯುತ್ತಲೇ ಬಂದಿದೆ. ಪಕ್ಷ ಇಷ್ಟೆಲ್ಲಾ ಅಧಿಕಾರ ನೀಡಿದ್ದರೂ ಹೈಕಮಾಂಡ್ ನಾಯಕರನ್ನೇ ಹುಚ್ಚರು ಎನ್ನುತ್ತಾ ಪಕ್ಷಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಆಡಿಯೋದಲ್ಲಿರುವುದು ನನ್ನ ಧ್ವನಿಯಲ್ಲ: ಆರ್‌.ಬಿ. ತಿಮ್ಮಾಪುರ ಸ್ಪಷ್ಟನೆ:

ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಆರ್‌.ಬಿ. ತಿಮ್ಮಾಪುರ, “ನಾನು ಪಕ್ಷದ ಶಿಸ್ತಿನ ಸಿಪಾಯಿ. ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವಿರುವುದು ನಿಜ, ಆದರೆ ನಾನು ಹೈಕಮಾಂಡ್ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಆ ಆಡಿಯೋದಲ್ಲಿರುವುದು ನನ್ನ ಧ್ವನಿಯಲ್ಲ,” ಎಂದು ಸಮರ್ಥಿಸಿಕೊಂಡಿದ್ದಾರೆ.

ಪ್ರತಿಭಟನೆ...ಪ್ರತಿಭಟನೆ

ಇಳಕಲ್ ನಗರದಲ್ಲಿ ಸಚಿವ ವಿಜಯಾನಂದ ಕಾಶಪ್ಪನವರ್ ಅಭಿಮಾನಿಗಳು ತಿಮ್ಮಾಪುರ ಹಾಗೂ ನಂಜಯ್ಯನಮಠ ವಿರುದ್ಧ ಪ್ರತಿಭಟನೆ ನಡೆಸಿದರು. ಮತ್ತೊಂದೆಡೆ, ಮುಧೋಳ ಪಟ್ಟಣದಲ್ಲಿ ಆರ್‌.ಬಿ. ತಿಮ್ಮಾಪುರ ಬೆಂಬಲಿಗರು ಬೆಳಗಾವಿ-ಬಾಗಲಕೋಟೆ ಹೆದ್ದಾರಿ ತಡೆದು ತಮ್ಮ ನಾಯಕನಿಗೆ ಸಚಿವ ಸ್ಥಾನ ತಪ್ಪಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ಸಚಿವ ಸಂಪುಟ ವಿಸ್ತರಣೆಯ ನಂತರ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಈ ಮುಸುಕಿನ ಗುದ್ದಾಟ ಮತ್ತು ನಾಯಕರ ಬಹಿರಂಗ ಅಸಮಾಧಾನವು ಬಾಗಲಕೋಟೆ ಮಾತ್ರವಲ್ಲದೆ ರಾಜ್ಯ ಕಾಂಗ್ರೆಸ್ ಪಾಳಯದಲ್ಲೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ.