ಹೊಸದಿಲ್ಲಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರಿಗೆ ಬಿಜೆಪಿ ಸೇರದಿದ್ದರೆ ಕುಟುಂಬವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯ ವೀಡಿಯೊ ಬೆದರಿಕೆ ಬಂದಿತ್ತು. ಇದರ ಬೆನ್ನಲ್ಲೇ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ತಮ್ಮ ನಿವಾಸವನ್ನು ತಾತ್ಕಾಲಿಕವಾಗಿ ತೊರೆಯುವಂತೆ ಪುತ್ರ ಒತ್ತಾಯಿಸಿದ್ದ ಎಂದು ಅವರ ತಾಯಿ ಅನಿತಾ ದೀಪ್ಕೆ ಆರೋಪಿಸಿದ್ದಾರೆ.
ಬುಧವಾರ ಮರಾಠಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಅಭಿಜೀತ್ ದೀಪ್ಕೆ ತಮ್ಮ ವಿಡಂಬನಾತ್ಮಕ ರಾಜಕೀಯ ಚಳುವಳಿಯನ್ನು ಆರಂಭಿಸಿದ ಕೆಲವೇ ದಿನಗಳಲ್ಲಿ ಈ ಬೆದರಿಕೆ ಬಂದಿತ್ತು ಎಂದು ಹೇಳಿದರು.
ಆರಂಭದಲ್ಲಿ ಈ ವಿಷಯವನ್ನು ಕುಟುಂಬದವರಿಗೆ ತಿಳಿಸದಿದ್ದ ಅಭಿಜೀತ್ ದೀಪ್ಕೆ, ಬಳಿಕ ಬಿಜೆಪಿ ಸೇರಲು ನಿರಾಕರಿಸಿದರೆ ತಮ್ಮ ಪೋಷಕರನ್ನೇ ಗುರಿಯಾಗಿಸಲಾಗುವುದು ಎಂಬ ಎಚ್ಚರಿಕೆಯನ್ನು ಒಳಗೊಂಡ ವೀಡಿಯೊ ಬಂದಿರುವುದಾಗಿ ತಿಳಿಸಿದ್ದ ಎಂದು ಅನಿತಾ ದೀಪ್ಕೆ ಹೇಳಿದರು.
ಆ ವೀಡಿಯೊವನ್ನು ನೋಡದಂತೆ ಪುತ್ರ ಸಲಹೆ ನೀಡಿದ್ದ. ಅಲ್ಲದೆ, ತಮ್ಮ ಸುರಕ್ಷತೆಯ ದೃಷ್ಟಿಯಿಂದ ತಾವು ಕೆಲ ದಿನಗಳ ಕಾಲ ಮನೆಯಿಂದ ದೂರವಿರಬೇಕೆಂದು ಒತ್ತಾಯಿಸಿದ್ದ ಎಂದು ಅವರು ಹೇಳಿದರು.
"ಅಂತಹ ಬೆದರಿಕೆಗಳಿಗೆ ತಾನು ಹೆದರುವುದಿಲ್ಲ ಎಂದು ಆತ ನಮಗೆ ಹೇಳಿದ್ದ. ಆದರೆ ನಾವು ಇಂತಹ ಸಂದರ್ಭಗಳನ್ನು ಎದುರಿಸಲು ಒಗ್ಗಿಕೊಂಡಿಲ್ಲ ಎಂಬ ಕಾರಣಕ್ಕೆ ಆತ ಆತಂಕ ವ್ಯಕ್ತಪಡಿಸಿದ್ದ. ಕೆಲವು ದಿನಗಳ ಕಾಲ ಮನೆಯಿಂದ ದೂರವಿರುವಂತೆ ನಮ್ಮನ್ನು ಕೇಳಿಕೊಂಡಿದ್ದ" ಎಂದು ಅನಿತಾ ದೀಪ್ಕೆ ಹೇಳಿದರು.
ಮಗನ ಸಲಹೆಯಂತೆ ನಾನು ಮತ್ತು ಪತಿ ಕೊಂಕಣ ಪ್ರದೇಶದಲ್ಲಿರುವ ಸಂಬಂಧಿಕರ ಮನೆಗೆ ತೆರಳಿ ಸುಮಾರು 16 ದಿನಗಳ ಕಾಲ ಅಲ್ಲೇ ತಂಗಿದ್ದೆವು ಎಂದು ಅವರು ತಿಳಿಸಿದರು.
ಆ ಸಂದರ್ಭದಲ್ಲಿ ಅಭಿಜೀತ್ ದೀಪ್ಕೆ ಮನೆಯಲ್ಲಿರಲಿಲ್ಲ. ಅವರ ತಂದೆ ಭಗವಾನ್ ದೀಪ್ಕೆ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದ ಕಾರಣ ಪರಿಸ್ಥಿತಿಯ ಬಗ್ಗೆ ಆತ ವಿಶೇಷವಾಗಿ ಕಳವಳಗೊಂಡಿದ್ದ ಎಂದು ಅನಿತಾ ದೀಪ್ಕೆ ಹೇಳಿದರು.
ವಿವಿಧ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೊಸದಿಲ್ಲಿಯಲ್ಲಿ 36 ದಿನಗಳ ಕಾಲ ನಡೆದ ಪ್ರತಿಭಟನೆಗೆ ನೇತೃತ್ವ ವಹಿಸಿದ್ದ ಅಭಿಜೀತ್ ದೀಪ್ಕೆ, ಛತ್ರಪತಿ ಸಂಭಾಜಿನಗರಕ್ಕೆ ಮರಳುವ ಮುನ್ನ ಅವರ ಪೋಷಕರು ಸುದ್ದಿ ವಾಹಿನಿಯೊಂದಿಗೆ ಮಾತನಾಡಿದರು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯೊಂದಿಗೆ ಆಂದೋಲನ ಅಂತ್ಯಗೊಂಡಿತು ಎಂದು ಅವರು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಅಭಿಜೀತ್ ದೀಪ್ಕೆ ಅವರ ತಂದೆ ಭಗವಾನ್ ದೀಪ್ಕೆ, ಸಾರ್ವಜನಿಕ ಜೀವನ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವವರಿಗೆ ಟೀಕೆ ಅನಿವಾರ್ಯ ಎಂದು ಹೇಳಿದರು.
"ಸಮಾಜಕ್ಕಾಗಿ ಕೆಲಸ ಮಾಡುವಾಗ ಕೆಲವರು ನಿಮ್ಮನ್ನು ಟೀಕಿಸುತ್ತಾರೆ. ಇನ್ನು ಕೆಲವರು ನಿಮ್ಮ ಪ್ರಯತ್ನಗಳನ್ನು ಮೆಚ್ಚುತ್ತಾರೆ. ಕೆಲವರು ಪೂರ್ವಗ್ರಹಪೀಡಿತ ಮನೋಭಾವದಿಂದ ಪ್ರತಿಕ್ರಿಯಿಸುತ್ತಾರೆ. ಮತ್ತೂ ಕೆಲವರು ಘಟನೆಗಳನ್ನು ಅರ್ಥಮಾಡಿಕೊಂಡ ಬಳಿಕವೇ ತಮ್ಮ ಅಭಿಪ್ರಾಯ ರೂಪಿಸಿಕೊಳ್ಳುತ್ತಾರೆ" ಎಂದು ಅವರು ಹೇಳಿದರು.
