ಡೇವಿಡ್ ಡಿಸೋಜ ಶೂಟೌಟ್ ಪ್ರಕರಣ: ಉಡುಪಿಗೆ ಕರೆ ತರುವ ವೇಳೆ ತಪ್ಪಿಸಿಕೊಳ್ಳಲು ಯತ್ನ; ನಟೋರಿಯಸ್ ಗ್ಯಾಂಗ್ ಸ್ಟಾರ್ ಕಾಲಿಗೆ ಗುಂಡೇಟು

ಉಡುಪಿ: ಮದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಗುತ್ತಿಗೆದಾರ ಡೇವಿಡ್ ಡಿಸೋಜ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ವಶಕ್ಕೆ ಪಡೆದು ಉಡುಪಿಗೆ ಕರೆ ತರುತ್ತಿದ್ದ ಆರೋಪಿಯೋರ್ವ ತಪ್ಪಿಸಲು ಯತ್ನಿಸಿದ್ದು ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡುಹಾರಿಸಿ ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಆರೋಪಿಯನ್ನು ಮುಂಬೈನ ನಟೋರಿಯಸ್ ಗ್ಯಾಂಗ್‌ಸ್ಟರ್, ಬಿಹಾರ ರಾಜ್ಯದ ನಳಂದ ನಿವಾಸಿ ಅನುಜ್ ಪಾಟೀಲ್(35) ಎಂದು ಗುರುತಿಸಲಾಗಿದೆ. ಈತ ಡೇವಿಡ್ ಕೊಲೆ ಪ್ರಕರಣದಲ್ಲಿ ನೇರವಾಗಿ‌ ಭಾಗಿಯಾಗಿರುವ ರಾಜು ಸಹಿತ ಮೂವರು ಶೂಟರ್‌ಗಳನ್ನು ಕಳುಹಿಸಿದ ಆರೋಪಿಯಾಗಿದ್ದಾನೆ.

ಈ ಪ್ರಕರಣದ ತನಿಖೆ ಸಂಬಂಧ ಕುಂದಾಪುರ ಠಾಣೆಯ ಪೊಲೀಸ್ ಉಪನಿರೀಕ್ಷಕ ನಂಜ ನಾಯಕ್ ಮತ್ತು ಕೊಲ್ಲೂರು ಠಾಣೆಯ ಪೊಲೀಸ್ ಉಪನಿರೀಕ್ಷಕ ವಿನಯ್ ಮತ್ತು ತಂಡ ಇಂದು ಬೆಳಿಗ್ಗೆ 6.30ರ ವೇಳೆಗೆ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಜ್ ಪಾಟೀಲ್‌ನನ್ನು ಬಂಧಿಸಿದ್ದರು.

ಆರೋಪಿಯನ್ನು ಉಡುಪಿಗೆ ಕರೆದುಕೊಂಡು ಬರುವಾಗ ಆತ ಪೊಲೀಸ್ ಸಿಬ್ಬಂದಿಯವರ ಮೇಲೆ ಹಲ್ಲೆ ನಡೆಸಿ, ಕೊಲ್ಲೂರು ಠಾಣೆ ಎಸ್ಸೈ ವಿನಯ್ ರವರ ಆಯುಧವನ್ನು ಕಸಿದು, ಫೈಯರ್ ಮಾಡಿದನು. ಈ ವೇಳೆ ಕುಂದಾಪುರ ಪೊಲೀಸ್ ಉಪನಿರೀಕ್ಷಕ ನಂಜ ನಾಯ್ಕ್ ಆತ್ಮ ರಕ್ಷಣೆಗಾಗಿ ಆರೋಪಿಯ ಕಾಲಿಗೆ ಫೈಯರ್ ಮಾಡಿದರು. ಇದರಿಂದ ತೀವ್ರವಾಗಿ ಗಾಯಗೊಂಡಿರುವ ಆರೋಪಿಯನ್ನು ಚಿಕಿತ್ಸೆಗಾಗಿ ಉಡುಪಿಯ ಅಜ್ಜರ ಕಾಡು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಈತ ಮುಂಬೈ ನಲ್ಲಿ ಕಾರ್ಯಾಚರಿಸುತ್ತಿದ್ದು 2017 ರಿಂದ ತಲೆಮರಿಸಿಕೊಂಡಿದ್ದನು. ಈತನ ವಿರುದ್ಧ ಮಹಾರಾಷ್ಟ್ರದಲ್ಲಿ MCOCA ಕಾಯ್ದೆ ದಾಖಲಿಸಲಾಗಿದ್ದು, ಒಟ್ಟು 11 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 10 ಪ್ರಕರಣಗಳಲ್ಲಿ 10 ಪ್ರಕರಣಗಳು ಸಶಸ್ತ್ರ ಕಾಯ್ದೆ ಪ್ರಕರಣಗಳಾಗಿವೆ.

ಮಹಾರಾಷ್ಟ್ರದಲ್ಲಿ ನಾಲ್ಕು, ಗುಜರಾತ್ ನಲ್ಲಿ ಐದು, ದಾಮನ್ ಮತ್ತು ದಿಯುನಲ್ಲಿ ಒಂದು, ಕರ್ನಾಟಕದಲ್ಲಿ ಒಂದು ಪ್ರಕರಣ ದಾಖಲಾಗಿದೆ ಎಂದು ಉಡುಪಿ ಎಸ್‌ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.