ಉಡುಪಿ: ಪಿಕಪ್ ವಾಹನದ ಹಿಂಭಾಗದಲ್ಲಿ ಸುಮಾರು 8ರಿಂದ 10 ಮಕ್ಕಳನ್ನು ನಿಲ್ಲಿಸಿಕೊಂಡು ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸಿದ ಆರೋಪದ ಮೇಲೆ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಸೆ.10ರಂದು ಸಂಜೆ 7.30ರ ಸುಮಾರಿಗೆ ಕಟಪಾಡಿ ಅಂಡರ್‌ಪಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ KL-33-B-7463 ನೋಂದಣಿ ಸಂಖ್ಯೆಯ ಪಿಕಪ್ ವಾಹನದಲ್ಲಿ ಮಕ್ಕಳನ್ನು ವಾಹನದ ಹಿಂಬದಿಯ ಬಾಡಿಯಲ್ಲಿ ನಿಲ್ಲಿಸಿಕೊಂಡು ಕರೆದೊಯ್ಯಲಾಗುತ್ತಿತ್ತು ಎನ್ನಲಾಗಿದೆ.
ವಾಹನದ ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ, ಮಕ್ಕಳ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯದಿಂದ ಚಾಲನೆ ಮಾಡುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಈ ಹಿನ್ನೆಲೆಯಲ್ಲಿ ಕಾಪು ಪೊಲೀಸರು ಸೆ.11ರಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಾಲಕನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಕಲಂ 281, 125 ಹಾಗೂ ಮೋಟಾರು ವಾಹನ ಕಾಯ್ದೆಯ ಕಲಂ 66 ಜೊತೆಗೆ 192(ಎ), ಕಲಂ 100 ಜೊತೆಗೆ 177ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪೊಲೀಸರು ಸಂಬಂಧಪಟ್ಟ ಪಿಕಪ್ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
