ರೌಡಿಗಳೊಂದಿಗೆ ನೆಂಟಸ್ತಿಕೆ ಬೆಳೆಸುವುದು, ಸಮಪರ್ಕವಿಟ್ಟುಕೊಳ್ಳಬೇಡಿ; ಪೊಲೀಸರಿಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಎಚ್ಚರಿಕೆ

ಬೆಂಗಳೂರು: ಕಾನೂನಿನ ಚೌಕಟ್ಟಿನೊಳಗೆ ಪ್ರಾಮಾಣಿಕವಾಗಿ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡುವ ಪ್ರತಿಯೊಬ್ಬ ಪೊಲೀಸ್‌ ಸಿಬ್ಬಂದಿಯ ಬೆನ್ನಿಗೆ ಸರ್ಕಾರ ಹಾಗೂ ಗೃಹ ಸಚಿವರು ನಿಲ್ಲಲಿದ್ದಾರೆ. ಆದರೆ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಯಾವುದೇ ಕಾರಣಕ್ಕೂ ರಕ್ಷಣೆ ನೀಡುವುದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಎಚ್ಚರಿಸಿದ್ದಾರೆ. 

ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್‌ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ʼಗೃಹ ಸಚಿವರೊಂದಿಗೆ ಸಂವಾದʼ ಕಾರ್ಯಕ್ರಮದಲ್ಲಿ ಗೃಹ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್‌ ಖರ್ಗೆ ಪಾಲ್ಗೊಂಡು, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 800ಕ್ಕೂ ಹೆಚ್ಚು ಪೊಲೀಸ್‌ ಕಾನ್ಸ್‌ಟೇಬಲ್‌ಗಳು, ಹೆಡ್‌ ಕಾನ್ಸ್‌ಟೇಬಲ್‌ಗಳು, ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌ಗಳು ಹಾಗೂ ಸಬ್‌ ಇನ್ಸ್‌ಪೆಕ್ಟರ್‌ಗಳನ್ನು ಉದ್ದೇಶಿಸಿ ಮಾತನಾಡಿದರು.

ರೌಡಿ ಚಟುವಟಿಕೆಗಳನ್ನು ನಿಯಂತ್ರಿಸುವ ವಿಚಾರದಲ್ಲಿ ಪೊಲೀಸರು ಅತ್ಯಂತ ಕಠಿಣ ನಿಲುವು ತೆಗೆದುಕೊಳ್ಳಬೇಕು. ತಮ್ಮ ಠಾಣೆ ವ್ಯಾಪ್ತಿಯಲ್ಲಿ ಯಾರು ರೌಡಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಪೊಲೀಸರ ಬಳಿ ಇರುತ್ತದೆ, ಕೆಲವೊಮ್ಮೆ ಪೊಲೀಸರೇ ಇಂತಹ ವ್ಯಕ್ತಿಗಳನ್ನು ಬೆಳೆಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.

ರೌಡಿಗಳೊಂದಿಗೆ ನೆಂಟಸ್ತಿಕೆ ಬೆಳೆಸುವುದು, ಅವರಿಗೆ ಮಾಹಿತಿ ನೀಡುವುದು, ಅವರ ಹುಟ್ಟುಹಬ್ಬದ ಕಾರ್ಯಕ್ರಮಗಳಿಗೆ ಹೋಗುವುದು, ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವುದು ಅಥವಾ ಯಾವುದೇ ರೀತಿಯಲ್ಲಿ ಅವರನ್ನು ಪ್ರೋತ್ಸಾಹಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಅವರು ಕಟ್ಟುನಿಟ್ಟಾಗಿ ಹೇಳಿದರು.

“ರೌಡಿಗಳು ಪೊಲೀಸರಿಗೆ ಹೆದರಬೇಕೇ ಹೊರತು, ಸಾರ್ವಜನಿಕರು ಪೊಲೀಸರಿಗೆ ಹೆದರಬಾರದು. ತಪ್ಪು ಮಾಡುವವರಿಗಷ್ಟೇ ಪೊಲೀಸರ ಭಯ ಇರಬೇಕು” ಎಂದು ಪ್ರಿಯಾಂಕ್‌ ಖರ್ಗೆ ಹೇಳಿದರು. ರೌಡಿಗಳಿಂದ ನಮ್ಮ ಮಕ್ಕಳು ಮತ್ತು ಯುವಕರು ಹಾಳಾಗುತ್ತಿದ್ದಾರೆ. ಆದ್ದರಿಂದ ರೌಡಿಗಳೊಂದಿಗೆ ಯಾವುದೇ ರೀತಿಯ ಹೊಂದಾಣಿಕೆಯನ್ನು ಪೊಲೀಸರು ಬೆಳೆಸಬಾರದು. ಪೊಲೀಸ್‌ ಸಿಬ್ಬಂದಿಯ ಕೈ ಸ್ವಚ್ಛವಾಗಿದ್ದರೆ ರೌಡಿಗಳು ಪೊಲೀಸರಿಗೆ ಹೆದರುತ್ತಾರೆ ಎಂದರು.

ಪೊಲೀಸ್‌ ಸಿಬ್ಬಂದಿಯ ಸೇವೆ, ಕರ್ತವ್ಯದ ಸಂದರ್ಭದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಆರೋಗ್ಯ ಮತ್ತು ಮಾನಸಿಕ ಒತ್ತಡ, ವರ್ಗಾವಣೆ ಹಾಗೂ ಬಡ್ತಿ, ಕುಟುಂಬ ಮತ್ತು ಮಕ್ಕಳ ಕೌಶಲ್ಯಾಭಿವೃದ್ಧಿ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಚಿವರು ಸಿಬ್ಬಂದಿಯೊಂದಿಗೆ ನೇರವಾಗಿ ಸಂವಾದ ನಡೆಸಿದರು.=

ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್‌ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪೊಲೀಸ್‌ ಇಲಾಖೆಯ ಜವಾಬ್ದಾರಿ ಕೇವಲ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಸೀಮಿತವಲ್ಲ. ರಾಜ್ಯದ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಮತ್ತು ಕರ್ನಾಟಕದ ಸುರಕ್ಷಿತ ಹೂಡಿಕೆ ತಾಣ ಎಂಬ ಹೆಗ್ಗಳಿಕೆಯಲ್ಲಿಯೂ ಪೊಲೀಸ್‌ ಇಲಾಖೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.