ರಾಮನಗರದಲ್ಲಿ ಖೋಟಾ ನೋಟು ಜಾಲ ಪತ್ತೆ; ಏಳು ಮಂದಿ ಬಂಧನ

ರಾಮನಗರ: ರಾಮನಗರದಲ್ಲಿ ಖೋಟಾ ನೋಟು ಜಾಲವೊಂದು ಪತ್ತೆ ಆಗಿದೆ. ಸಾರ್ವಜನಿಕರ ಕಣ್ಣುತಪ್ಪಿಸಿ ನಿರ್ಮಾಣ ಹಂತದ ಮನೆಯೊಂದರಲ್ಲೇ ಅಕ್ರಮವಾಗಿ ಖೋಟಾ ನೋಟುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಅಂತರಜಿಲ್ಲಾ ಖದೀಮರ ಜಾಲವನ್ನು ಐಜೂರು ಪೊಲೀಸರು ಬಯಲಿಗೆಳೆದಿದ್ದು, ಏಳು ಜನರನ್ನು ವಶಕ್ಕೆ ಪಡೆದಿದ್ದಾರೆ.

ದಾಳಿ ವೇಳೆ ಸಂತೋಷ್, ಸಂಪತ್, ಗೋವಿಂದಾರಾಜ್, ರೇಣುಕಾರಾಜ್, ರಾಜೇಶ್, ಶಿವರಾಜ್ ಮತ್ತು ಸತೀಶ್ ಎಂಬ ಏಳು ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಪೇಪರ್ ಬಂಡಲ್, ಕೆಮಿಕಲ್ ಸೇರಿದಂತೆ ಹಲವು ಅನುಮಾನಸ್ಪದ ವಸ್ತುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ರಾಮನಗರದ ಶಾಂತಿಲಾಲ್ ಲೇಔಟ್‌ನಲ್ಲಿರುವ ಸಂತೋಷ್ ಎಂಬುವವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದಲ್ಲಿ ಈ ಅಕ್ರಮ ದಂಧೆ ನಡೆಯುತ್ತಿತ್ತು. ಯಾರಿಗೂ ಸಂಶಯ ಬಾರದಂತೆ ಆ ಕಟ್ಟಡವನ್ನು ಅಡ್ಡೆ ಮಾಡಿಕೊಂಡಿದ್ದ ಗ್ಯಾಂಗ್, ನೋಟು ಮುದ್ರಣ ಮಾಡುತ್ತಿದ್ದರು. ಖಚಿತ ಮಾಹಿತಿ ಬೆನ್ನತ್ತಿದ ಐಜೂರು ಪೊಲೀಸರು ದಿಢೀರ್ ದಾಳಿ ನಡೆಸಿ ಜಾಲವನ್ನು ಭೇದಿಸಿದ್ದಾರೆ.

ವಿಶೇಷ ಪೇಪರ್ ಮತ್ತು ಕೆಮಿಕಲ್ ಬಳಕೆ

ಹೊರಗಿನಿಂದ ವಿಶೇಷ ಕಾಗದದ ಶೀಟ್‌ಗಳನ್ನು ತರಿಸಿ, ಅವುಗಳಿಗೆ ನಿರ್ದಿಷ್ಟ ಕೆಮಿಕಲ್ ಲೇಪಿಸಿ ಅಸಲಿ ನೋಟಿನಂತೆ ಕಾಣುವ 200 ಹಾಗೂ 500 ರೂ ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸಲಾಗುತ್ತಿತ್ತು. ಮುದ್ರಿತ ಶೀಟ್‌ಗಳನ್ನು ಅಚ್ಚುಕಟ್ಟಾಗಿ ಕತ್ತರಿಸಿ, ಬಂಡಲ್‌ಗಳನ್ನಾಗಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದ್ದರು.

ಇನ್ನು ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಮತ್ತು ಬೆರಳಚ್ಚು ತಜ್ಞರನ್ನೊಳಗೊಂಡ SOCO ತಂಡ ಭೇಟಿ ನೀಡಿ, ನೋಟು ಮುದ್ರಣಕ್ಕೆ ಬಳಸಿದ್ದ ರಾಸಾಯನಿಕ, ಕಾಗದ ಹಾಗೂ ಇತರೆ ಮಹತ್ವದ ಸಾಕ್ಷ್ಯಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದೆ.

ಬೆಂಗಳೂರು ದಕ್ಷಿಣ SP ರೋಹನ್ ಜಗದೀಶ್ ಪ್ರತಿಕ್ರಿಯಿಸಿದ್ದು, ‘ ಶಾಂತಿಲಾಲ್ ಲೇಔಟ್​ನ ಮನೆಯೊಂದರಲ್ಲಿ ನಕಲಿ ನೋಟು ತಯಾರು ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಐಜೂರು ಪೊಲೀಸರು ದಾಳಿ ಮಾಡಿದ್ದಾರೆ. 

ಮನೆ ಮಾಲೀಕ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ. ಮನೆ ಮಾಲೀಕ ಸಂತೋಷ್​ಗೆ ಸಂಪತ್ ಪರಿಚಯ ಇರುತ್ತದೆ. ದಂಧೆ ಬಗ್ಗೆ ಸಂತೋಷ್​ಗೆ ಹೇಳಿ ಕಮಿಷನ್ ಆಮಿಷ ತೋರಿಸಿದ್ದಾರೆ. ಇನ್ನು ದಾಳಿ ವೇಳೆ ಐದು ಲಕ್ಷ ರೂ ಮೌಲ್ಯದ 10 ಬಂಡಲ್ ನೋಟು ಸಿಕ್ಕಿದೆ. ಜಾಲದ ಹಿಂದೆ ಯಾರಿದ್ದಾರೆಂದು ತನಿಖೆ ನಡೆಯುತ್ತಿದೆ. ಟೇಬಲ್, ಪೇಪರ್ ಬಂಡಲ್, ಕೆಮಿಕಲ್ ಸಲ್ಯೂಷನ್ ಹಚ್ಚುವ ಬಟ್ಟೆ, ಗ್ಲ್ಯಾಸ್ ಫಿಲ್ಮ್‌ ದೊರೆತಿದೆ ಎಂದು ಮಾಹಿತಿ ನೀಡಿದರು.