ದುಬೈ ಉದ್ಯಮ ಲೋಕದಲ್ಲಿ ಕನ್ನಡಿಗನ ಯಶೋಗಾಥೆ: ಇಬ್ರಾಹಿಂ ಗಡಿಯಾರ್ ಅವರ ಪ್ರೇರಣಾದಾಯಕ ಪಯಣ

►ಹರಿದ ಅಂಗಿ–ಸ್ಲಿಪ್ಪರ್ ಚಪ್ಪಲಿಯೊಂದಿಗೆ ಮುಂಬೈ ಪಯಣ
►‘ಇಬ್ಬಿ’ ಹೆಸರಿನಿಂದ ಉದ್ಯಮಕ್ಕೆ ಮೊದಲ ಹೆಜ್ಜೆ
►ನಷ್ಟದಲ್ಲಿದ್ದ ಕಂಪನಿ ಉಳಿಸಲು ಗಲ್ಫ್ ಪಯಣ
►ಒಂದರ ಹಿಂದೆ ಒಂದರಂತೆ ಎಂಟು ಕಂಪನಿಗಳ ಸ್ಥಾಪನೆ
►ಕಠಿಣ ಪರಿಶ್ರಮವೇ ಯಶಸ್ಸಿನ ಹಿಂದಿನ ಗುಟ್ಟು
►Hard Work, Honesty, Dedication — ಯಶಸ್ಸಿನ ಮೂರು ಮಂತ್ರ
►15 ದಿನಕ್ಕೊಮ್ಮೆ ವಿದೇಶ ಪ್ರವಾಸ; ಪತ್ನಿಯೊಂದಿಗೆ 133 ದೇಶಗಳ ಸುತ್ತಾಟ
►ನೂರಾರು ದೇಶ ನೋಡಿದರೂ ಯುಎಇಯೇ ಅಚ್ಚುಮೆಚ್ಚು
►ಪ್ರತಿಷ್ಠಿತ ‘ಇಬ್ನ್ ಬತೂತಾ ಪ್ರಶಸ್ತಿ’, ‘ಕರ್ನಾಟಕ ರತ್ನ’ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನ
►ಬಡತನದ ನೋವು ಮರೆಯದೆ ಸಮಾಜಸೇವೆಯ ಹಾದಿ
►ಗಡಿಯಾರ್ ಚಾರಿಟೇಬಲ್ ಫೌಂಡೇಶನ್ ಮೂಲಕ ಸೇವೆ
►UAEಯಲ್ಲಿ ಎಂಜಿನಿಯರಿಂಗ್‌, ನಿರ್ಮಾಣ, ಮೂಲಸೌಕರ್ಯ ಕ್ಷೇತ್ರದವರೆಗೆ ಉದ್ಯಮ ವಿಸ್ತರಣೆ

Headlineskannada.com ಜೊತೆಗಿನ ವಿಶೇಷ ಸಂದರ್ಶನದಲ್ಲಿ ಮನದಾಳದ ಮಾತು




ವಿಶೇಷ ಸಂದರ್ಶನ: ಸಾರಾ ದುಬೈ 

ದುಬೈ: ಕರ್ನಾಟಕದ ಕರಾವಳಿಯ ಮಂಗಳೂರಿನ ಮಣ್ಣಿನಿಂದ ಹುಟ್ಟಿ, ದುಬೈಯ ಉದ್ಯಮ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಇಬ್ರಾಹಿಂ ಗಡಿಯಾರ್ ಅವರು ಸತತ ಪರಿಶ್ರಮ, ದೂರದೃಷ್ಟಿ ಹಾಗೂ ಉದ್ಯಮಶೀಲತೆಯ ಮೂಲಕ ಯಶಸ್ಸಿನ ಶಿಖರಕ್ಕೇರಿದ ಸಾಧಕ.

ಕಡುಬಡತನದ ಹಿನ್ನೆಲೆಯಿಂದ ಬಂದ ಅವರು, ಜೀವನದಲ್ಲಿ ಎದುರಾದ ಹಲವು ಸಂಕಷ್ಟಗಳು ಹಾಗೂ ಸವಾಲುಗಳನ್ನು ಧೈರ್ಯದಿಂದ ಮೆಟ್ಟಿನಿಂತು ದುಬೈನಲ್ಲಿ ಯಶಸ್ವಿ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದ್ದಾರೆ. ತಮ್ಮ ಸಾಧನೆಯ ಮೂಲಕ ಇಂದು ಅಸಂಖ್ಯಾತ ಕನ್ನಡಿಗರಿಗೆ ಪ್ರೇರಣೆಯಾಗಿದ್ದಾರೆ.

ವ್ಯವಹಾರ ಕ್ಷೇತ್ರದ ಯಶಸ್ಸಿನೊಂದಿಗೆ ಸಮಾಜಮುಖಿ ಚಿಂತನೆ, ವೃತ್ತಿಪರ ಮೌಲ್ಯಗಳು ಹಾಗೂ ಕನ್ನಡಿಗರೊಂದಿಗೆ ನಿಕಟ ಬಾಂಧವ್ಯವನ್ನು ಹೊಂದಿರುವ ಇಬ್ರಾಹಿಂ ಗಡಿಯಾರ್ ಅವರು, UAEಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಕನ್ನಡಿಗ ಉದ್ಯಮಿಗಳ ಸಾಲಿನಲ್ಲಿ ಗಮನಾರ್ಹ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

ಅವರ ನೇತೃತ್ವದಲ್ಲಿ ‘Gadiyar Group of Companies’ ಇಂದು ಎಂಜಿನಿಯರಿಂಗ್, ಪೈಲಿಂಗ್, ಫೌಂಡೇಶನ್, ಸ್ಟೀಲ್ ಸ್ಟ್ರಕ್ಚರ್ಸ್, ರೆಡಿಮಿಕ್ಸ್ ಕಾಂಕ್ರೀಟ್, ಎಂಜಿನಿಯರಿಂಗ್ ಕನ್ಸಲ್ಟೆನ್ಸಿ ಹಾಗೂ ಫೈರ್ ಸೇಫ್ಟಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿಕೊಂಡಿದೆ.

ಉದ್ಯಮ ಕ್ಷೇತ್ರದಲ್ಲಿ ಯಶಸ್ಸಿನ ಹೆಜ್ಜೆಗುರುತು ಮೂಡಿಸಿರುವ ಇಬ್ರಾಹಿಂ ಗಡಿಯಾರ್ ಅವರು, ದಾನಧರ್ಮ ಹಾಗೂ ಸಮಾಜಸೇವೆಯಲ್ಲಿಯೂ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಸಮಾಜದ ಒಳಿತಿಗಾಗಿ ಸದಾ ಸ್ಪಂದಿಸುವ ಅವರು, ವಿವಿಧ ಸಾಮಾಜಿಕ ಸಂಘಟನೆಗಳ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.



Headlineskannada.com ನಡೆಸಿದ ವಿಶೇಷ ಸಂದರ್ಶನದಲ್ಲಿ ಇಬ್ರಾಹಿಂ ಗಡಿಯಾರ್ ಅವರು ತಮ್ಮ ಜೀವನದಲ್ಲಿ ಎದುರಿಸಿದ ಸವಾಲುಗಳು, ದುಬೈನಲ್ಲಿ ಯಶಸ್ವಿ ಉದ್ಯಮವನ್ನು ಕಟ್ಟಿದ ಪಯಣ, ತಮ್ಮ ನಾಯಕತ್ವವನ್ನು ರೂಪಿಸಿದ ಮೌಲ್ಯಗಳು ಹಾಗೂ ಸಮಾಜಸೇವೆ ಮತ್ತು ದಾನಧರ್ಮದ ಬದ್ಧತೆಯ ಕುರಿತು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಬಡತನದಿಂದ ಆರಂಭಗೊಂಡು ಯಶಸ್ಸಿನ ಶಿಖರದವರೆಗೆ ಸಾಗಿದ ಅವರ ಈ ಪಯಣ, ಕಠಿಣ ಪರಿಶ್ರಮ, ಪ್ರಾಮಾಣಿಕತೆ, ದೂರದೃಷ್ಟಿ ಮತ್ತು ಸಮರ್ಪಣಾ ಮನೋಭಾವ ಇದ್ದರೆ ಯಾವುದೇ ಸವಾಲನ್ನೂ ಮೆಟ್ಟಿನಿಂತು ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಪ್ರೇರಣಾದಾಯಕ ಉದಾಹರಣೆಯಾಗಿದೆ.



ಪ್ರಶ್ನೆ: ನಿಮ್ಮ ಬಾಲ್ಯ, ಶಿಕ್ಷಣ ಮತ್ತು ಕುಟುಂಬದ ಹಿನ್ನೆಲೆ ಬಗ್ಗೆ ಹೇಳಬಹುದೇ?

ಇಬ್ರಾಹಿಂ ಗಡಿಯಾರ್: ನಾನೊಬ್ಬ ರೈತ ಕುಟುಂಬದ ಹಿನ್ನೆಲೆಯಿಂದ ಬಂದವನು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜಿಲಮೊಗರು–ಕಡೇಶ್ವಾಲ್ಯದಲ್ಲಿ ನನ್ನ ಜನನ. ನನಗೆ ಕೇವಲ ಮೂರು ವರ್ಷ ವಯಸ್ಸಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡೆ. ಬಳಿಕ ಅಜಿಲಮೊಗರು–ಕಡೇಶ್ವಾಲ್ಯದಿಂದ ನಾವು ಬುಡೋಳಿ ಗಡಿಯಾರಕ್ಕೆ ಬಂದು ನೆಲೆಸಿದೆವು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ನೋವು ಮತ್ತು ಕುಟುಂಬದ ಪರಿಸ್ಥಿತಿಗಳು ನನ್ನ ಜೀವನದ ಮೇಲೆ ಗಾಢವಾದ ಪರಿಣಾಮ ಬೀರಿದವು.

ಬಡತನದ ನಡುವೆ ಶಿಕ್ಷಣದ ಹಂಬಲ

ನಾವು ಕಡುಬಡತನದಲ್ಲಿದ್ದ ಕುಟುಂಬ. ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇತ್ತು. ಶಾಲೆಯಲ್ಲಿ ಮಧ್ಯಾಹ್ನ ಸಜ್ಜಿಗೆ ಮತ್ತು ಹಾಲು ನೀಡುತ್ತಾರೆ ಎಂಬ ಆಸೆಯಿಂದಲೇ ಶಾಲೆಗೆ ಹೋಗುತ್ತಿದ್ದೆ. ಆದರೂ ಕಲಿಕೆಯಲ್ಲಿ ನಾನು ಮುಂದಿದ್ದೆ. ಆದರೆ ಬಡತನದ ಕಾರಣ ಪ್ರಾಥಮಿಕ ಶಿಕ್ಷಣದ ಬಳಿಕ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

ನನಗೆ 13 ವರ್ಷ ವಯಸ್ಸಾಗಿದ್ದಾಗ ಉದ್ಯೋಗ ಅರಸಿ ಸಕಲೇಶಪುರಕ್ಕೆ ತೆರಳಿದೆ. ಅಲ್ಲಿ ಮರದ ದಿಮ್ಮಿಗಳನ್ನು ತುಂಬುವ ಕೆಲಸ ಸೇರಿದಂತೆ ವಿವಿಧ ಕೂಲಿ ಕೆಲಸಗಳನ್ನು ಕಷ್ಟಪಟ್ಟು ಮಾಡಿದೆ. 



ಒಂದು ಜೊತೆ ಹರಿದ ಅಂಗಿ- ಸ್ಲಿಪ್ಪರ್ ಚಪ್ಪಲಿ ಜೊತೆ ಮುಂಬೈಗೆ ಪ್ರಯಾಣ

1973ರಲ್ಲಿ ನನ್ನ ಸಹೋದರ ನನ್ನನ್ನು ಮುಂಬೈಗೆ ಕರೆದುಕೊಂಡು ಹೋದರು. ಆ ಸಂದರ್ಭದಲ್ಲಿ ನನ್ನ ಬಳಿ ಇದ್ದದ್ದು ಒಂದು ಹರಿದ ಅಂಗಿ ಹಾಗೂ ಯಾರೋ ನೀಡಿದ್ದ ಒಂದು ಜೋಡಿ ಸ್ಲಿಪ್ಪರ್ ಚಪ್ಪಲಿ ಮಾತ್ರ. ಮುಂಬೈನಲ್ಲಿ ರಾತ್ರಿ ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡಿ, ಬೆಳಗ್ಗೆ ಶಾಲೆಗೆ ಹೋಗುತ್ತಿದ್ದೆ. ಹೀಗೆ ಕೆಲಸದ ಜತೆಗೆ ಶಿಕ್ಷಣವನ್ನೂ ಮುಂದುವರಿಸಿದೆ.

ನಂತರ ಊರಿಗೆ ಮರಳಿ ಉಪ್ಪಿನಂಗಡಿಯಲ್ಲಿರುವ ಟ್ಯುಟೋರಿಯಲ್‌ಗೆ ಸೇರಿಕೊಂಡು ವ್ಯಾಸಂಗ ಮುಂದುವರಿಸಿದೆ. ಅಲ್ಲಿಂದಲೇ ನಾನು SSLC ಪರೀಕ್ಷೆ ಬರೆದು ಉತ್ತೀರ್ಣನಾದೆ. ಬಡತನ ನನ್ನ ಶಿಕ್ಷಣಕ್ಕೆ ಅಡ್ಡಿಯಾಗಿದ್ದರೂ, ಕಲಿಯಬೇಕೆಂಬ ಹಂಬಲವನ್ನು ಮಾತ್ರ ಅದು ನನ್ನಿಂದ ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ.

SSLC ಮುಗಿಸಿದ ಬಳಿಕ ಮತ್ತೆ ಮುಂಬೈ ನನ್ನನ್ನು ಸೆಳೆಯಿತು. ಅಲ್ಲಿ ವಿದ್ಯಾಭ್ಯಾಸ ಮುಂದುವರಿಸುವುದರ ಜೊತೆಗೆ ಖಾಸಗಿಯಾಗಿ ಟೆಕ್ನಿಕಲ್ ಎಂಜಿನಿಯರಿಂಗ್ ಶಿಕ್ಷಣ ಪಡೆದೆ. ಇದೇ ವೇಳೆ ನನ್ನ ಸಹೋದರನ ವರ್ಕ್‌ಶಾಪ್‌ನ ಜವಾಬ್ದಾರಿಯನ್ನೂ ವಹಿಸಿಕೊಂಡು ಅದನ್ನು ಮುಂದುವರಿಸಿದೆ.

ನನ್ನ ನಿಕ್‌ನೇಮ್ ‘ಇಬ್ಬಿ’ ಎಂಬ ಹೆಸರನ್ನೇ ಆಧಾರವಾಗಿಟ್ಟುಕೊಂಡು 1979ರಲ್ಲಿ ‘ಇಬ್ಬಿ ಪ್ರಾಡಕ್ಟ್ಸ್’ ಹಾಗೂ ‘ಇಬ್ಬಿ ಅಂಡ್ ಇಬ್ಬಿ’ ಸೇರಿದಂತೆ ನಾಲ್ಕು ಕಂಪನಿಗಳನ್ನು ಆರಂಭಿಸಿದೆ. ಉದ್ಯಮ ಕ್ಷೇತ್ರದಲ್ಲಿ ನನ್ನದೇ ಆದ ಹೆಜ್ಜೆ ಗುರುತು ಮೂಡಿಸಲು ಇದು ಆರಂಭಿಕ ಹೆಜ್ಜೆಯಾಯಿತು.

1982ರ ಆಗಸ್ಟ್ 15ರಂದು ನನ್ನ ವಿವಾಹವಾಯಿತು. ಇದೇ ಸಂದರ್ಭದಲ್ಲಿ ಮಂಗಳೂರಿನಲ್ಲಿ ‘ಆಶಾ ಆಟೋಮೊಬೈಲ್ ಎಂಜಿನಿಯರಿಂಗ್’ ಎಂಬ ಕಂಪನಿಯನ್ನು ಆರಂಭಿಸಿದೆ. ಆರಂಭದಲ್ಲಿ ವ್ಯವಹಾರ ಉತ್ತಮವಾಗಿದ್ದರೂ, ಕೆಲವೇ ಸಮಯದ ಬಳಿಕ ಕಂಪನಿಯಲ್ಲಿ ವಿದ್ಯುತ್ ಕಡಿತ, ಕಾರ್ಮಿಕರ ಮುಷ್ಕರ ಸೇರಿದಂತೆ ಹಲವು ಸಮಸ್ಯೆಗಳು ಎದುರಾದವು. ಕಂಪನಿಯ ನಿರ್ವಹಣೆಗಾಗಿ ಮಂಗಳೂರು–ಮುಂಬೈ ನಡುವೆ ನಿರಂತರವಾಗಿ ಓಡಾಡಬೇಕಾದ ಪರಿಸ್ಥಿತಿಯೂ ಮತ್ತಷ್ಟು ಸಂಕಷ್ಟ ತಂದೊಡ್ಡಿತು.




1988ರಲ್ಲಿ ಉದ್ಯೋಗ ಅರಸಿ ಸೌದಿಗೆ ಪಯಣ

ಕಂಪನಿಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ 1988ರಲ್ಲಿ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದೆ. ದಮ್ಮಾಮ್‌ನಲ್ಲಿ ಫೋರ್‌ಮ್ಯಾನ್ ಆಗಿ ಕೆಲಸಕ್ಕೆ ಸೇರಿದೆ. ಕಠಿಣ ಪರಿಶ್ರಮ ಮತ್ತು ಕೆಲಸದ ಮೇಲಿನ ಬದ್ಧತೆಯ ಫಲವಾಗಿ ಕೇವಲ ನಾಲ್ಕೇ ತಿಂಗಳಲ್ಲಿ ಏರಿಯಾ ಮ್ಯಾನೇಜರ್ ಆಗಿ ಬಡ್ತಿ ಪಡೆದೆ.

ಸೌದಿಯಲ್ಲಿ ದುಡಿದು ಗಳಿಸಿದ ಹಣವನ್ನು ನನ್ನ ಸ್ವಂತ ಸುಖಕ್ಕಾಗಿ ಬಳಸದೆ, ಮಂಗಳೂರಿನಲ್ಲಿದ್ದ ಕಂಪನಿಯ ಕಾರ್ಮಿಕರಿಗೆ ಸಂಬಳ ನೀಡಲು ಬಳಸುತ್ತಿದ್ದೆ. ಹೀಗೆ ವಿದೇಶದಲ್ಲಿ ಉದ್ಯೋಗ ಮಾಡುತ್ತಲೇ ಮಂಗಳೂರು ಮತ್ತು ಮುಂಬೈಯಲ್ಲಿದ್ದ ಕಂಪನಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ.

1989ರಲ್ಲಿ ಸೌದಿಯಿಂದ ವಾಪಸು ಬಂದು ಕಂಪನಿಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದೆ. ಆದರೆ ನಿರಂತರ ನಷ್ಟದಿಂದ ಕಂಪನಿಯನ್ನು ಮುಂದುವರಿಸುವುದು ಕಷ್ಟವಾಯಿತು. 1992ರಲ್ಲಿ ಮುಂಬೈನಲ್ಲಿದ್ದ ಕಂಪನಿಯನ್ನು ಬಂದ್ ಮಾಡಿದೆ. ಕೊನೆಗೆ ನಷ್ಟದಲ್ಲಿದ್ದ ಮಂಗಳೂರು ಕಂಪನಿಯನ್ನು ಮಾರಾಟ ಮಾಡಿದೆ. ಈ ಅನುಭವ ನನ್ನ ಉದ್ಯಮ ಜೀವನದಲ್ಲಿ ದೊಡ್ಡ ಪಾಠವಾಯಿತು. ಸೋಲು ನನ್ನನ್ನು ಕುಗ್ಗಿಸಲಿಲ್ಲ; ಬದಲಾಗಿ ಮುಂದಿನ ಹೆಜ್ಜೆಯನ್ನು ಇನ್ನಷ್ಟು ದೃಢವಾಗಿ ಇಡಲು ಪ್ರೇರೇಪಿಸಿತು.



1997ರಲ್ಲಿ ದುಬೈಗೆ ಪಯಣ

ಮುಂಬೈ ಹಾಗೂ ಸೌದಿ ಅರೇಬಿಯಾದ ಅನುಭವಗಳ ಬಳಿಕ 1992ರಿಂದ  1997ರ ವರಗೆ ರಿಯಲ್ ಎಸ್ಟೇಟ್ ಮತ್ತು ಟಿಂಬರ್ ಉದ್ಯಮದಲ್ಲೂ ತೊಡಗಿಸಿಕೊಂಡೆ. ಆದರೆ ಆ ಪ್ರಯತ್ನಗಳು ಕೈಗೂಡಲಿಲ್ಲ. ಬಳಿಕ ಬಂಗಾರಪ್ಪ ಅವರೊಂದಿಗೆ ರಾಜಕೀಯ ಕ್ಷೇತ್ರಕ್ಕೂ ಪ್ರವೇಶಿಸಿದೆ. ಆದರೆ ಅಲ್ಲಿಯೂ ಹೆಚ್ಚು ಕಾಲ ನೆಲೆ ನಿಲ್ಲಲು ಸಾಧ್ಯವಾಗಲಿಲ್ಲ.

ಈ ಸಂದರ್ಭದಲ್ಲಿ ನಮ್ಮ ಊರಿನ ಮಸೀದಿಯ ಅಧ್ಯಕ್ಷನಾಗಿದ್ದೆ. ನನ್ನ ಅವಧಿಯಲ್ಲಿ ಮಸೀದಿ ಕಟ್ಟಡದ ಕಾಮಗಾರಿಯನ್ನು ಸಂಪೂರ್ಣಗೊಳಿಸುವ ಕಾರ್ಯ ಕೈಗೊಂಡೆ. ಆ ಜವಾಬ್ದಾರಿಯನ್ನು ಪೂರ್ಣಗೊಳಿಸಿದ ಬಳಿಕ 1997ರ ಡಿಸೆಂಬರ್‌ನಲ್ಲಿ ದುಬೈಗೆ ವಿಮಾನ ಹತ್ತಿದೆ. ನನ್ನ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು ಅಲ್ಲಿಂದಲೇ.

ಯುಎಇಗೆ ಬಂದ ಬಳಿಕ ಸಾಕಷ್ಟು ಪರಿಶ್ರಮಪಟ್ಟು 1998ರಲ್ಲಿ ಅಲ್‌ಕೂಸ್‌ನಲ್ಲಿರುವ ಕನ್ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಫೋರ್‌ಮ್ಯಾನ್ ಆಗಿ ಕೆಲಸಕ್ಕೆ ಸೇರಿದೆ. ಕೆಲಸದ ಮೇಲಿನ ಬದ್ಧತೆ ಹಾಗೂ ಕಠಿಣ ಪರಿಶ್ರಮದ ಫಲವಾಗಿ ಕೇವಲ ಮೂರು ತಿಂಗಳಲ್ಲೇ ಪ್ಲಾಂಟ್ ಮ್ಯಾನೇಜರ್ ಆಗಿ ಬಡ್ತಿ ಪಡೆದೆ.

2006ರಲ್ಲಿ ‘ಅನ್ಮೋಲ್ ಸ್ಟೀಲ್ ಸ್ಟ್ರಕ್ಚರ್ಸ್’ ಕಂಪನಿಗೆ ಜನರಲ್ ಮ್ಯಾನೇಜರ್ ಆಗಿ ಸೇರಿದೆ. ಅಲ್ಲಿ ಪೈಲಿಂಗ್ ವಿಭಾಗವನ್ನೂ ಆರಂಭಿಸಿದೆ. ಆದರೆ ಕೆಲವೊಂದು ಸಮಸ್ಯೆಗಳ ಹಿನ್ನೆಲೆಯಲ್ಲಿ ಆ ಕೆಲಸವನ್ನು ತೊರೆಯಬೇಕಾಯಿತು. ಆ ಸಂದರ್ಭದಲ್ಲಿ ನನ್ನ ಕುಟುಂಬವೂ ನನ್ನೊಂದಿಗೇ ಇತ್ತು. ಸಂಬಳವಿಲ್ಲದೆ ಮಕ್ಕಳ ಶಾಲಾ ಶುಲ್ಕ, ಕುಟುಂಬದ ಊಟ ಸೇರಿದಂತೆ ದಿನನಿತ್ಯದ ಅಗತ್ಯಗಳನ್ನು ಪೂರೈಸುವುದೇ ದೊಡ್ಡ ಸವಾಲಾಗಿತ್ತು.

2023ರಲ್ಲಿ ‘ಅನ್ಮೋಲ್ ಪೈಲಿಂಗ್ & ಸ್ಟೀಲ್ ಸ್ಟ್ರಕ್ಚರ್ಸ್’ ಕಂಪನಿಯ ಒಡೆಯನಾದೆ

ಆ ಸಂಕಷ್ಟದ ನಡುವೆಯೂ ಉದ್ಯಮದ ಕನಸನ್ನು ಕೈಬಿಡಲಿಲ್ಲ. 2015 ಮತ್ತು 2020ರಲ್ಲಿ ಎರಡು ಕಂಪನಿಯನ್ನು ಆರಂಭಿಸಿದೆ. ಬಳಿಕ ಮತ್ತೆ ‘ಅನ್ಮೋಲ್ ಪೈಲಿಂಗ್ & ಸ್ಟೀಲ್ ಸ್ಟ್ರಕ್ಚರ್ಸ್’ ಕಂಪನಿಗೆ ಮರಳಿದೆ. 2018ರಲ್ಲಿ ಅದರ ಮ್ಯಾನೇಜಿಂಗ್ ಪಾರ್ಟ್ನರ್ ಆಗಿ ಜವಾಬ್ದಾರಿ ವಹಿಸಿಕೊಂಡೆ. 2023ರಲ್ಲಿ ಕಂಪನಿ ಸಂಪೂರ್ಣವಾಗಿ ನನ್ನ ಸ್ವಾಧೀನಕ್ಕೆ ಬಂದಿದ್ದು, ಅದರ ಅಧಿಕೃತ ಮಾಲೀಕತ್ವವೂ ನನಗೆ ದೊರೆಯಿತು.

ಈ ನಡುವೆ ನನ್ನ ಮಗ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿ ಬೇರೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಬಳಿಕ ಆತನೊಂದಿಗೆ ಸೇರಿ ಎಂಜಿನಿಯರಿಂಗ್ ಕನ್ಸಲ್ಟೆನ್ಸಿ ಕಂಪನಿಯನ್ನು ಆರಂಭಿಸಿದೆ. ನಂತರ ಸ್ಟೀಲ್ ಸ್ಟ್ರಕ್ಚರ್ಸ್ ಕಂಪನಿ, ಗಡಿಯಾರ್ ರೆಡಿಮಿಕ್ಸ್ ಕಾಂಕ್ರೀಟ್ ಟ್ರೇಡಿಂಗ್ ಹಾಗೂ ಗಡಿಯಾರ್ ಡೆವಲಪರ್ಸ್ ಸೇರಿದಂತೆ ಹಲವು ಉದ್ಯಮಗಳನ್ನು ಆರಂಭಿಸಿದೆ.

ಹೀಗೆ ಸುಮಾರು 6–7 ವರ್ಷಗಳ ಅವಧಿಯಲ್ಲಿ ಉದ್ಯಮ ಕ್ಷೇತ್ರ ನನ್ನ ಕೈಹಿಡಿಯಿತು. ಒಂದರ ಹಿಂದೆ ಒಂದರಂತೆ ಹೊಸ ಅವಕಾಶಗಳು ತೆರೆದುಕೊಂಡವು. ಹಿಂದೆ ಎದುರಿಸಿದ್ದ ಸೋಲು, ನಷ್ಟ ಹಾಗೂ ಸಂಕಷ್ಟಗಳೇ ಮುಂದಿನ ಯಶಸ್ಸಿಗೆ ಪಾಠಗಳಾದವು. ಪ್ರಸಕ್ತ ‘Gadiyar Group of Companies’ ಚೀನಾದ Zoomlion ನಿರ್ಮಾಣ, ಗಣಿಗಾರಿಕೆ ಹಾಗೂ ಕೃಷಿ ಯಂತ್ರೋಪಕರಣಗಳ ಪ್ರಮುಖ ಜಾಗತಿಕ ತಯಾರಕ ಸಂಸ್ಥೆಯ ಗ್ಲೋಬಲ್ ಆಪರೇಟಿವ್ ಪಾಟ್ನೆರ್ ಆಗಿದೆ. 

ನನಗೆ ಒಟ್ಟು ನಾಲ್ವರು ಮಕ್ಕಳು. ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು. ಎಲ್ಲರೂ ಮದುವೆಯಾಗಿದ್ದು, ದುಬೈಯಲ್ಲೇ ನೆಲೆಸಿದ್ದಾರೆ. ಇಂದು ಕುಟುಂಬದೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿರುವುದಕ್ಕೆ ನನ್ನ ಹಿಂದಿನ ಹೋರಾಟಗಳೇ ಕಾರಣವೆಂದು ಭಾವಿಸುತ್ತೇನೆ.




ಪ್ರಶ್ನೆ: ಉದ್ಯಮ ಕ್ಷೇತ್ರಕ್ಕೆ ಬರಲು ನಿಮಗೆ ಪ್ರೇರಣೆ ನೀಡಿದ್ದು ಏನು?

ಇಬ್ರಾಹಿಂ ಗಡಿಯಾರ್: ನನಗೆ ಯಾರಿಂದಲೂ ವಿಶೇಷ ಪ್ರೇರಣೆ ಸಿಕ್ಕಿಲ್ಲ. ಆರಂಭದಿಂದಲೂ ಉದ್ಯಮಿಯಾಗಬೇಕು ಎಂಬ ಆಸೆ ನನ್ನೊಳಗಿತ್ತು. ನಾನು ಆರಂಭಿಸಿದ ವರ್ಕ್‌ಶಾಪ್ ಕೂಡ ಆ ಆಸೆಗೆ ಮತ್ತಷ್ಟು ಪುಷ್ಟಿ ನೀಡಿತು. ಅದಕ್ಕಾಗಿಯೇ ಜೀವನದಲ್ಲಿ ಕಠಿಣ ಪರಿಶ್ರಮಕ್ಕೆ ಹೆಚ್ಚಿನ ಮಹತ್ವ ನೀಡಿದೆ.

ಹಗಲು–ರಾತ್ರಿ ಎನ್ನದೆ ದುಡಿದೆ. ಉದ್ಯಮಿಯಾಗಿದ್ದರೂ ಇಂದಿಗೂ ದಿನಕ್ಕೆ ಸುಮಾರು 18 ಗಂಟೆಗಳ ಕಾಲ ಕೆಲಸ ಮಾಡುತ್ತೇನೆ. ನಾನು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಲ್ಲ. ಸದಾ ಏನಾದರೂ ಕೆಲಸ ಮಾಡುತ್ತಲೇ ಇರಬೇಕು ಎಂಬ ಮನೋಭಾವ ನನ್ನದು.

ನನ್ನ ಜೀವನದಲ್ಲಿ ಇಂದು ಕಾಣುತ್ತಿರುವ ಬೆಳವಣಿಗೆ ಮತ್ತು ಯಶಸ್ಸಿನ ಹಿಂದೆ ಯಾವುದೇ ಶಾರ್ಟ್‌ಕಟ್ ಇಲ್ಲ. ಕಠಿಣ ಪರಿಶ್ರಮವೇ ನನ್ನ ಹಿಂದಿನ ಬೆಳವಣಿಗೆಯ ಪ್ರಮುಖ ಗುಟ್ಟು.

ಪ್ರಶ್ನೆ: ನಿಮ್ಮ ಯಶಸ್ವಿ ಉದ್ಯಮದ ಹಿಂದಿನ ಗುಟ್ಟೇನು...?

ಇಬ್ರಾಹಿಂ ಗಡಿಯಾರ್: ಮೊದಲನೆಯದಾಗಿ ಯುಎಇ ಸರಕಾರದ ಎಲ್ಲ ರೀತಿಯ ಬೆಂಬಲ, ಸಹಕಾರದಿಂದಲೇ ನಾನು ಇಲ್ಲಿ ಉದ್ಯಮವನ್ನು ಆರಂಭಿಸಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಇಲ್ಲಿನ ಸರಕಾರ ಎಲ್ಲ ರೀತಿಯ ಸಹಕಾರವನ್ನು ನನಗೆ ನೀಡಿದೆ. ಅದಕ್ಕೆ ನಾನು ಚಿರಋಣಿ. 

ನಾನು ಇಂದು ಈ ಮಟ್ಟಕ್ಕೆ ಬೆಳೆಯುವವರೆಗೆ ಹಲವು ಸಂಕಷ್ಟಗಳು, ಸಮಸ್ಯೆಗಳು ಹಾಗೂ ಸವಾಲುಗಳನ್ನು ಎದುರಿಸಿದ್ದೇನೆ. ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ನಾನು ಎಂದಿಗೂ ಧೃತಿಗೆಡಲಿಲ್ಲ. ಪ್ರತಿಯೊಂದು ಸವಾಲನ್ನೂ ಧೈರ್ಯದಿಂದ ಎದುರಿಸಿ, ಅದನ್ನು ಮೆಟ್ಟಿನಿಂತು ಇಂದು ಉದ್ಯಮ ಕ್ಷೇತ್ರದಲ್ಲಿ ಈ ಮಟ್ಟಕ್ಕೆ ಬೆಳೆದಿದ್ದೇನೆ.

ಇಂದು ನನ್ನ ಬಳಿ ಐಷಾರಾಮಿ ಮನೆ, ಕಾರು ಸೇರಿದಂತೆ ಸುಖ–ಸಮೃದ್ಧಿಯ ಜೀವನವಿದೆ. ಆದರೆ ಇವೆಲ್ಲವೂ ಒಂದೇ ದಿನದಲ್ಲಿ ಬಂದಿದ್ದಲ್ಲ. ಇದರ ಹಿಂದೆ ವರ್ಷಗಳ ಕಠಿಣ ಪರಿಶ್ರಮವಿದೆ. ಏನನ್ನಾದರೂ ಸಾಧಿಸಬೇಕೆಂಬ ಛಲ, ಪ್ರಾಮಾಣಿಕತೆ, ಬದ್ಧತೆ ಹಾಗೂ ನಿರಂತರ ಪರಿಶ್ರಮವೇ ನನ್ನ ಯಶಸ್ಸಿನ ಹಿಂದಿರುವ ಪ್ರಮುಖ ಶಕ್ತಿ.

ಯಾವುದೇ ಯಶಸ್ವಿ ಉದ್ಯಮಿ ಅಥವಾ ಯಶಸ್ವಿ ವ್ಯಕ್ತಿಯ ಹಿಂದೆ Hard Work(ಕಠಿಣ ಪರಿಶ್ರಮ), Honesty(ಪ್ರಾಮಾಣಿಕತೆ) ಮತ್ತು Dedication(ಸಮರ್ಪಣಾ ಮನೋಭಾವ) ಇದ್ದೇ ಇರುತ್ತದೆ. ಈ ಮೂರು ಗುಣಗಳೇ ಒಬ್ಬ ವ್ಯಕ್ತಿಯನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯುತ್ತವೆ. ಇದೇ ಮೌಲ್ಯಗಳು ನನ್ನ ಜೀವನದಲ್ಲಿಯೂ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿವೆ.

ಪ್ರಶ್ನೆ: ನಿಮ್ಮ ಉದ್ಯಮದ ಒತ್ತಡದ ಮಧ್ಯೆ ನೀವು ಪ್ರತಿ 15 ದಿನಕ್ಕೊಮ್ಮೆ ವಿದೇಶ ಸುತ್ತುವ ಹವ್ಯಾಸವನ್ನು ಹೇಗೆ ಬೆಳೆಸಿಕೊಂಡಿದ್ದೀರಿ...? ಈ ವರಗೆ ಎಷ್ಟು ದೇಶ ಸುತ್ತಿದ್ದೀರಿ..?

ಇಬ್ರಾಹಿಂ ಗಡಿಯಾರ್: ಬಾಲ್ಯದಿಂದಲೇ ನನಗೆ ಬೇರೆ ಬೇರೆ ದೇಶಗಳನ್ನು ನೋಡಬೇಕು, ಅಲ್ಲಿನ ಜನಜೀವನ ಹಾಗೂ ಸಂಸ್ಕೃತಿಯನ್ನು ತಿಳಿದುಕೊಳ್ಳಬೇಕು ಎಂಬ ಹಂಬಲವಿತ್ತು. ನಾನು ಉದ್ಯಮಿಯಾದ ಬಳಿಕ ಆ ಆಸೆ ಈಡೇರಿತು. ಆದರೆ ಉದ್ಯಮ ಬೆಳೆದಂತೆ ಕೆಲಸದ ಒತ್ತಡವೂ ಹೆಚ್ಚುತ್ತಾ ಹೋಯಿತು.

ಪತ್ನಿಯೊಂದಿಗೆ ಒಟ್ಟು 133 ದೇಶಗಳನ್ನು ಸುತ್ತಾಟ

ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಆರಂಭದಲ್ಲಿ ಪತ್ನಿಯೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಲು ಶುರುಮಾಡಿದೆ. ಕ್ರಮೇಣ ಅದು ನನ್ನ ಜೀವನದ ಒಂದು ಭಾಗವಾಗಿಬಿಟ್ಟಿತು. ಈಗ ಸುಮಾರು ಪ್ರತಿ 15 ದಿನಕ್ಕೊಮ್ಮೆ ಪತ್ನಿಯೊಂದಿಗೆ ಯಾವುದಾದರೂ ಒಂದು ವಿದೇಶಕ್ಕೆ ಪ್ರವಾಸ ಕೈಗೊಳ್ಳುತ್ತೇನೆ.

ಸಾಮಾನ್ಯವಾಗಿ ಎರಡು ದಿನಗಳ ಕಾಲ ಅಲ್ಲಿದ್ದು, ಅಲ್ಲಿನ ವಿಶೇಷತೆಗಳು, ಜನಜೀವನ ಹಾಗೂ ಸಂಸ್ಕೃತಿಯನ್ನು ಅರಿಯಲು ಪ್ರಯತ್ನಿಸುತ್ತೇನೆ. ಇದುವರೆಗೆ ಒಟ್ಟು 133 ದೇಶಗಳನ್ನು ಸುತ್ತಾಡಿದ್ದೇನೆ.

ಪ್ರವಾಸದ ವೇಳೆ ಬೆಳಗ್ಗೆಯೇ ಹೊರಟು ಸಾಧ್ಯವಾದಷ್ಟು ಪ್ರವಾಸಿ ತಾಣಗಳನ್ನು ವೀಕ್ಷಿಸುತ್ತೇವೆ. ಹೊಸ ದೇಶ, ಹೊಸ ಸಂಸ್ಕೃತಿ ಹಾಗೂ ಹೊಸ ಅನುಭವಗಳನ್ನು ಪರಿಚಯಿಸಿಕೊಳ್ಳುವುದು ನನಗೆ ತುಂಬಾ ಸಂತೋಷ ನೀಡುತ್ತದೆ. ಆರಂಭದಲ್ಲಿ ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಲು ಆರಂಭಿಸಿದ ಈ ಪ್ರವಾಸ, ಇದೀಗ ನನ್ನ ನೆಚ್ಚಿನ ಹವ್ಯಾಸವಾಗಿ ಮಾರ್ಪಟ್ಟಿದೆ.

ಪ್ರಶ್ನೆ: ನೂರಾರು ದೇಶ ಸುತ್ತಿದ ನಿಮಗೆ ಯಾವ ದೇಶ ಇಷ್ಟ ? ಹೇಗೆ...?

ಇಬ್ರಾಹಿಂ ಗಡಿಯಾರ್: ನಾನು ಹಲವು ಐಷಾರಾಮಿ ಹಾಗೂ ಅಭಿವೃದ್ಧಿ ಹೊಂದಿದ ದೇಶಗಳಿಗೆ ಪ್ರವಾಸ ಮಾಡಿದ್ದೇನೆ. ಅಲ್ಲಿನ ಜನರೊಂದಿಗೆ ಬೆರೆತು, ಅವರ ಜೀವನಶೈಲಿಯನ್ನು ಅರಿತುಕೊಂಡು, ಅಲ್ಲಿನ ವಾತಾವರಣವನ್ನು ಅನುಭವಿಸಿದ್ದೇನೆ. ಆದರೆ ಇಷ್ಟೆಲ್ಲ ದೇಶಗಳನ್ನು ನೋಡಿದ ಬಳಿಕವೂ ನನಗೆ ಎಲ್ಲಕ್ಕಿಂತ ಹೆಚ್ಚು ಇಷ್ಟವಾದ ದೇಶ ಯುಎಇ.

ಯುಎಇಯಲ್ಲಿರುವ ವಾತಾವರಣವೇ ವಿಭಿನ್ನ. ಇಲ್ಲಿ ಸುಮಾರು 175 ದೇಶಗಳ ಜನರು ಒಟ್ಟಾಗಿ ಬದುಕುತ್ತಿದ್ದಾರೆ. ವಿವಿಧ ದೇಶ, ಭಾಷೆ, ಸಂಸ್ಕೃತಿ ಹಾಗೂ ಹಿನ್ನೆಲೆಯ ಜನರು ಪರಸ್ಪರ ಗೌರವದಿಂದ ಬದುಕುತ್ತಿರುವ ರೀತಿಯನ್ನು ಬೇರೆಡೆ ಕಾಣುವುದು ಕಷ್ಟ.

ಇಲ್ಲಿನ ಭದ್ರತೆ, ಉತ್ತಮ ರಸ್ತೆ ವ್ಯವಸ್ಥೆ, ಮೂಲಭೂತ ಸೌಕರ್ಯಗಳು ಹಾಗೂ ಕಾನೂನು ವ್ಯವಸ್ಥೆ ಅತ್ಯುತ್ತಮವಾಗಿದೆ. ಇಂತಹ ವ್ಯವಸ್ಥೆ ಮತ್ತು ಸುರಕ್ಷಿತ ವಾತಾವರಣವನ್ನು ನಾನು ಪ್ರವಾಸ ಮಾಡಿದ ಹಲವು ದೇಶಗಳಲ್ಲಿ ನೋಡಿಲ್ಲ.

ಅದಕ್ಕಾಗಿಯೇ ನಾನು ಹಲವು ದೇಶಗಳನ್ನು ಸುತ್ತಾಡಿದ್ದರೂ, ಯುಎಇಯೇ ನನಗೆ ಅತ್ಯಂತ ಇಷ್ಟವಾದ ದೇಶ. ಈ ದೇಶ ನನಗೆ ಉದ್ಯಮಿಯಾಗಿ ಬೆಳೆಯಲು ಅವಕಾಶ ನೀಡಿದುದರ ಜೊತೆಗೆ, ನೆಮ್ಮದಿಯ ಜೀವನಕ್ಕೂ ಉತ್ತಮ ವಾತಾವರಣ ಕಲ್ಪಿಸಿದೆ.


ಪ್ರಶ್ನೆ: ದುಬೈಯಲ್ಲಿ ವ್ಯವಹಾರ ಆರಂಭಿಸಲು ಬಯಸುವ ಹೊಸ ಉದ್ಯಮಿಗಳಿಗೆ ನೀವು ಏನು ಸಲಹೆ ನೀಡುತ್ತೀರಿ?

ಇಬ್ರಾಹಿಂ ಗಡಿಯಾರ್: ಕಠಿಣ ಪರಿಶ್ರಮ (Hard Work), ಪ್ರಾಮಾಣಿಕತೆ (Honesty) ಮತ್ತು ಸಮರ್ಪಣಾ ಮನೋಭಾವ (Dedication) — ಈ ಮೂರು ಗುಣಗಳು ನಿಮ್ಮಲ್ಲಿದ್ದರೆ ಯುಎಇಯಲ್ಲಿ ಖಂಡಿತವಾಗಿಯೂ ಯಶಸ್ವಿ ಉದ್ಯಮಿಯಾಗಬಹುದು.

ನಾನು ಈ ಮೂರು ಮೌಲ್ಯಗಳನ್ನು ಪ್ರಾಮಾಣಿಕವಾಗಿ ಪಾಲಿಸಿಕೊಂಡು ಬಂದಿದ್ದೇನೆ. ಅದೇ ಕಾರಣದಿಂದ ಉದ್ಯಮ ಕ್ಷೇತ್ರದಲ್ಲಿ ಹಂತ ಹಂತವಾಗಿ ಬೆಳೆಯಲು ಸಾಧ್ಯವಾಯಿತು. ನನ್ನ ಅನುಭವದಲ್ಲಿ ಉದ್ಯಮವೆಂದರೆ ಕೇವಲ ಹಣ ಹೂಡಿಕೆ ಮಾಡಿ ಹಣ ಗಳಿಸುವುದಲ್ಲ. ಅದರ ಹಿಂದೆ ಅಪಾರ ಪರಿಶ್ರಮ, ಸಮಯ, ತಾಳ್ಮೆ ಹಾಗೂ ಬದ್ಧತೆ ಇರಲೇಬೇಕು.

ಯಾವುದೇ ಉದ್ಯಮ ಯಶಸ್ವಿಯಾಗಬೇಕಾದರೆ ಹಣಕ್ಕಿಂತ ಮುಖ್ಯವಾಗಿ ಪರಿಶ್ರಮ ಮತ್ತು ಪ್ರಾಮಾಣಿಕತೆ ಅಗತ್ಯ. ಇವುಗಳನ್ನು ಬದ್ಧತೆಯಿಂದ ಪಾಲಿಸಿದಾಗ ಮಾತ್ರ ಒಬ್ಬ ವ್ಯಕ್ತಿ ನಿಜವಾದ ಯಶಸ್ವಿ ಉದ್ಯಮಿಯಾಗಲು ಸಾಧ್ಯ.



ಪ್ರಶ್ನೆ: ಗಡಿಯಾರ್ ಗ್ರೂಪ್ ಯುಎಇಯಲ್ಲಿ ಮಾಡಿರುವ ಪ್ರಮುಖ ಕಾಮಗಾರಿಗಳು ?

ಇಬ್ರಾಹಿಂ ಗಡಿಯಾರ್: ಯುಎಇಯಲ್ಲಿ ಹಲವು ಪ್ರಮುಖ ಕಾಮಗಾರಿಗಳು ಹಾಗೂ ಯೋಜನೆಗಳನ್ನು ಕೈಗೊಂಡಿದ್ದೇವೆ. ಶಾರ್ಜಾ ಏರ್‌ಪೋರ್ಟ್ ಫ್ರೀಝೋನ್‌ನ ಪ್ರಮುಖ ಕನ್ಸಲ್ಟೆನ್ಸಿ ಸಂಸ್ಥೆಗಳಲ್ಲೊಂದು ನಮ್ಮದೇ ಆಗಿದೆ. ಯುಎಇಯ ವಿವಿಧೆಡೆ ಪೈಲಿಂಗ್ ಕಾಮಗಾರಿಗಳನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದೇವೆ.

ಇದರ ಜೊತೆಗೆ ಎಕ್ಸ್‌ಪೋ 2020 ಸೇರಿದಂತೆ ಹಲವು ಪ್ರಮುಖ ಯೋಜನೆಗಳಲ್ಲಿ ಸ್ಟೀಲ್ ಸ್ಟ್ರಕ್ಚರ್ಸ್ ಹಾಗೂ ಪೆವಿಲಿಯನ್ ನಿರ್ಮಾಣದ ಕೆಲಸಗಳನ್ನು ಕೈಗೊಂಡಿದ್ದೇವೆ. ಯುಎಇಯ ವಿವಿಧ ಪ್ರಮುಖ ಯೋಜನೆಗಳಲ್ಲಿ ನಮ್ಮ ಸಂಸ್ಥೆಯ ಕೊಡುಗೆ ನೀಡಿರುವುದು ಹೆಮ್ಮೆಯ ಸಂಗತಿಯಾಗಿದೆ. 






ಪ್ರಶ್ನೆ: ನಿಮ್ಮ 'ಗಡಿಯಾರ್ ಗ್ರೂಪ್ ಆಫ್ ಕಂಪನೀಸ್' ಬಗ್ಗೆ ಹೇಳುವುದಾದರೆ...?

ಇಬ್ರಾಹಿಂ ಗಡಿಯಾರ್: ಕಳೆದ 10 ವರ್ಷಗಳ ಅವಧಿಯಲ್ಲಿ ಒಂದೊಂದಾಗಿ ಒಟ್ಟು ಎಂಟು ಕಂಪನಿಗಳನ್ನು ಆರಂಭಿಸಿದ್ದೇವೆ. ಪ್ರತಿಯೊಂದು ಸಂಸ್ಥೆಯೂ ವಿಭಿನ್ನ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಂದು ನಮ್ಮ ಉದ್ಯಮ ವಿಸ್ತರಣೆಯ ಪ್ರಮುಖ ಭಾಗವಾಗಿವೆ

ನಮ್ಮ ಕಂಪನಿಗಳು...

1.ಅನ್ಮೋಲ್ ಪೈಲಿಂಗ್ & ಸ್ಟೀಲ್ ಸ್ಟ್ರಕ್ಚರ್ಸ್ LLC(Anmol Piling & Steel Structures LLC)

2. GVM ಸ್ಟೀಲ್ ಸ್ಟ್ರಕ್ಚರ್ಸ್ LLC(GVM Steel Structures LLC)

3. ಗಡಿಯಾರ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್(Gadiyar Engineering Consultants)

4. RAQ (ರುಕ್ನ್ ಅಲ್ ಖಿಯಾದಾ) ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್(RAQ (Rukn Al Qiyada) Engineering Consultants)

5. ಗಡಿಯಾರ್ ರೆಡಿಮಿಕ್ಸ್ ಕಾಂಕ್ರೀಟ್ ಟ್ರೇಡಿಂಗ್ LLC(Gadiyar Readymix Concrete Trading LLC)

6. ಸಾಫ್ಕೋ ಸೇಫ್ಟಿ ಎಕ್ವಿಪ್‌ಮೆಂಟ್ LLC(Safco Safety Equipment LLC)

7. ಗಡಿಯಾರ್ ಡೆವಲಪರ್ಸ್(Gadiyar Developers)

8. ಐರನ್ ಮ್ಯಾನ್ ಇಂಡಸ್ಟ್ರೀಸ್ LLC(Iron Man Industries LLC)








ಪ್ರಶ್ನೆ: ನಿಮ್ಮ ಜೀವನದಲ್ಲಿ ನಿಮ್ಮನ್ನು ಹೆಚ್ಚು ಪ್ರಭಾವಿಸಿದ ವ್ಯಕ್ತಿ ಯಾರು? 

ಇಬ್ರಾಹಿಂ ಗಡಿಯಾರ್: ನನ್ನ ಜೀವನದಲ್ಲಿ ಹೆಚ್ಚು ಪ್ರಭಾವ ಬೀರಿದ ವ್ಯಕ್ತಿ 'Emsquare Engineering Consultants'ನ ಮೊಹಮ್ಮದ್ ಮುಸ್ತಫಾ. ನನ್ನ ಉದ್ಯಮ ಜೀವನದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ನಮ್ಮ ಉದ್ಯಮದ ಬೆಳವಣಿಗೆಯ ಸಂದರ್ಭದಲ್ಲಿ ಹಲವು ರೀತಿಯಲ್ಲಿ ಸಹಕಾರ ಹಾಗೂ ಬೆಂಬಲ ನೀಡಿದ್ದಾರೆ.

ನನ್ನ ಬೆಳವಣಿಗೆಯ ಪಯಣದಲ್ಲಿ ಅವರ ಮಾರ್ಗದರ್ಶನ ಹಾಗೂ ಸಹಕಾರವನ್ನು ನಾನು ಸದಾ ಗೌರವದಿಂದ ಸ್ಮರಿಸುತ್ತೇನೆ. ನನ್ನ ಉದ್ಯಮವನ್ನು ಬೆಳೆಸುವಲ್ಲಿ ಅವರು ನೀಡಿದ ಕೊಡುಗೆ ಅಪಾರ. ಅವರು ನೀಡಿದ ಸಹಕಾರವನ್ನು ನಾನು ಎಂದಿಗೂ ಮರೆಯುವುದಿಲ್ಲ.

ಪ್ರಶ್ನೆ: ಈವರಗೆ ನಿಮಗೆ ಸಿಕ್ಕ ಪ್ರಶಸ್ತಿ, ಪುರಸ್ಕಾರಗಳ ಬಗ್ಗೆ ?

ಇಬ್ರಾಹಿಂ ಗಡಿಯಾರ್: 133 ದೇಶಗಳ ವಿಶ್ವ ಪ್ರವಾಸಕ್ಕಾಗಿ ಪ್ರತಿಷ್ಠಿತ 'ಇಬ್ನ್ ಬತೂತಾ' ಪ್ರಶಸ್ತಿ ಸಿಕ್ಕಿದೆ. ಸಾಧಕರಿಗೆ ನೀಡಲಾಗುವ 'ಕರ್ನಾಟಕ ರತ್ನ' ಪ್ರಶಸ್ತಿ ಸೇರಿದಂತೆ ನೂರಾರು ಪುರಸ್ಕಾರಗಳು ನೀಡಿ ಜನ ನನ್ನನ್ನು ಗೌರವಿಸಿದ್ದಾರೆ. ಆದರೆ ನಾನೆಂದು ಪ್ರಶಸ್ತಿ, ಪುರಸ್ಕಾರಗಳ  ಹಿಂದೆ ಹೋದವನು ಅಲ್ಲ. 

ಪ್ರಶ್ನೆ: ನೀವೊಬ್ಬ ಬ್ಯಾರಿಯಾಗಿ ನಿಮ್ಮ ಸಮುದಾಯಕ್ಕೆ ಏನು ಹೇಳಬಯಸುತ್ತೀರಿ..?

ಇಬ್ರಾಹಿಂ ಗಡಿಯಾರ್: ಬ್ಯಾರಿ ಸಮುದಾಯದವರು ಪ್ರಮುಖವಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಶಿಕ್ಷಣವು ಕೇವಲ ಒಬ್ಬ ವ್ಯಕ್ತಿಯ ವೈಯಕ್ತಿಕ ಅಭಿವೃದ್ಧಿಗೆ ಮಾತ್ರ ಸೀಮಿತವಾಗುವುದಿಲ್ಲ; ಅದು ಇಡೀ ಸಮುದಾಯವನ್ನು ಮತ್ತಷ್ಟು ಬಲಿಷ್ಠಗೊಳಿಸುವ ಶಕ್ತಿಯಾಗಿದೆ. ಸಂತಸದ ಸಂಗತಿಯೆಂದರೆ, ಇತ್ತೀಚಿನ ದಿನಗಳಲ್ಲಿ ನಮ್ಮ ಸಮುದಾಯದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ವಿಶೇಷವಾಗಿ ನಮ್ಮ ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

ಇದರೊಂದಿಗೆ ಗಂಡು ಮಕ್ಕಳೂ ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸಬೇಕು. ಶಿಕ್ಷಣದ ಮೂಲಕ ಜ್ಞಾನ, ಕೌಶಲ್ಯ ಹಾಗೂ ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು. ಶಿಕ್ಷಣಕ್ಕೆ ನಾವು ನೀಡುವ ಆದ್ಯತೆಯೇ ನಮ್ಮ ಸಮುದಾಯದ ಭವಿಷ್ಯವನ್ನು ಇನ್ನಷ್ಟು ಬಲಿಷ್ಠಗೊಳಿಸಲಿದೆ.

ಹಿಂದೆ ಹೆಚ್ಚಿನ ವಿದ್ಯಾಭ್ಯಾಸ ಇಲ್ಲದವರಿಗೂ ಗಲ್ಫ್ ರಾಷ್ಟ್ರಗಳಿಗೆ ಬಂದು ಉದ್ಯೋಗ ಹಾಗೂ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಸಾಕಷ್ಟು ಅವಕಾಶಗಳಿದ್ದವು. ಆದರೆ ಇಂದು ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಸ್ಪರ್ಧೆ ಹೆಚ್ಚಾಗಿದ್ದು, ಉನ್ನತ ಶಿಕ್ಷಣದ ಜೊತೆಗೆ ಕೌಶಲ್ಯ ಹೊಂದಿರುವವರಿಗೆ ಹೆಚ್ಚಿನ ಅವಕಾಶಗಳು ಲಭಿಸುತ್ತಿವೆ.

ಹೀಗಾಗಿ ನಮ್ಮ ಸಮುದಾಯದ ಯಾರೂ ಶಿಕ್ಷಣದಿಂದ ವಂಚಿತರಾಗಬಾರದು. ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆಯುವುದರ ಜೊತೆಗೆ, ಕಾಲಕ್ಕೆ ತಕ್ಕ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಮತ್ತು ಕೌಶಲ್ಯವೇ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪ್ರಮುಖ ಆಧಾರವಾಗಿದೆ.

ಕಠಿಣ ಪರಿಶ್ರಮವೇ ನಮ್ಮ ಬೆಳವಣಿಗೆಯ ಅಸ್ತ್ರ; ಯುವಪೀಳಿಗೆ ಇದನ್ನು ಮರೆಯಬಾರದು

ಒಂದು ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದಾಗ ಅಲ್ಲಿನ ಕೆಲಸದ ಬಗ್ಗೆ ನಿಷ್ಠೆ, ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವವನ್ನು ಹೊಂದಿರಬೇಕು. ಕೇವಲ ಹೆಚ್ಚಿನ ಸಂಬಳದ ಆಸೆಗಾಗಿ ಒಂದೊಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಜಿಗಿಯುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬಾರದು. ಕಷ್ಟಪಟ್ಟು, ನಿಷ್ಠೆಯಿಂದ ಕೆಲಸ ಮಾಡಿದರೆ ಮುಂದೊಂದು ದಿನ ನಮ್ಮ ಕೆಲಸವೇ ನಮ್ಮನ್ನು ಕೈಹಿಡಿಯುತ್ತದೆ. ನಾವು ಗಳಿಸಿದ ಅನುಭವ ಮತ್ತು ಜ್ಞಾನವನ್ನು ಆಧಾರವಾಗಿಸಿಕೊಂಡು ಮುಂದೆ ಸ್ವಂತ ಕಂಪನಿಯನ್ನೂ ಆರಂಭಿಸಬಹುದು.

ಜೀವನದಲ್ಲಿ ಕಷ್ಟ, ನಷ್ಟಗಳು ಎದುರಾದರೂ ಕಠಿಣ ಪರಿಶ್ರಮ, ಛಲ ಮತ್ತು ಪ್ರಾಮಾಣಿಕತೆಯಿಂದ ಮುನ್ನಡೆದರೆ ಎಲ್ಲವನ್ನೂ ಸಾಧಿಸಲು ಸಾಧ್ಯ. ಅದಕ್ಕೆ ನಾನೇ ಜೀವಂತ ಉದಾಹರಣೆ. ಇದನ್ನು ನಮ್ಮ ಯುವಪೀಳಿಗೆ ಎಂದಿಗೂ ಮರೆಯಬಾರದು.

ಯಶಸ್ಸಿಗೆ ಅಡ್ಡದಾರಿ ಇಲ್ಲ; ಕಠಿಣ ಪರಿಶ್ರಮವೇ ದಾರಿ

ಇಂದು ನಮ್ಮ ಯುವಕರು ಕೆಲವೇ ದಿನಗಳಲ್ಲಿ ಮಿಲಿಯನೇರ್ ಆಗಬೇಕು ಎಂಬ ಹಗಲು ಕನಸು ಕಾಣುತ್ತಾ, ಕೆಲವೊಮ್ಮೆ ಯಶಸ್ಸಿಗೆ ಅಡ್ಡದಾರಿ ಹಿಡಿಯಲು ಪ್ರಯತ್ನಿಸುತ್ತಾರೆ. ಆದರೆ ಇಂತಹ ಪ್ರಯತ್ನಗಳು ಅವರನ್ನು ಯಶಸ್ಸಿನತ್ತ ಕೊಂಡೊಯ್ಯುವ ಬದಲು ಮತ್ತಷ್ಟು ದೊಡ್ಡ ಸಂಕಷ್ಟಗಳಿಗೆ ಸಿಲುಕಿಸಬಹುದು. ಆದ್ದರಿಂದ ನಮ್ಮ ಯುವಪೀಳಿಗೆ ಈ ಬಗ್ಗೆ ಎಚ್ಚರಿಕೆಯಿಂದಿರಬೇಕು.

ಕಠಿಣ ಪರಿಶ್ರಮವೇ ನಮ್ಮ ಬೆಳವಣಿಗೆಯ ನಿಜವಾದ ಅಸ್ತ್ರ ಎಂಬುದನ್ನು ಎಂದಿಗೂ ಮರೆಯಬಾರದು. ನಾವು ಕಷ್ಟಪಟ್ಟು ಮಾಡುವ ಕೆಲಸಕ್ಕೆ ತಕ್ಷಣವೇ ಫಲ ಸಿಗುತ್ತದೆ ಎಂದು ನಿರೀಕ್ಷಿಸಬಾರದು. ಯಶಸ್ಸು ಒಂದು ವರ್ಷದಲ್ಲಿ ಬರಬಹುದು, ಇಲ್ಲವೇ ಅದಕ್ಕಿಂತಲೂ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. ಆದರೆ ಯಾವುದೇ ಸಂದರ್ಭದಲ್ಲೂ ಸೋಲನ್ನು ಒಪ್ಪಿಕೊಂಡು ಹಿಂದೆ ಸರಿಯಬಾರದು.

ಸತತ ಪ್ರಯತ್ನ, ತಾಳ್ಮೆ ಮತ್ತು ಆತ್ಮವಿಶ್ವಾಸದೊಂದಿಗೆ ಮುನ್ನಡೆಯಬೇಕು. ಜೀವನದಲ್ಲಿ ಎಷ್ಟೇ ಅಡೆತಡೆಗಳು ಎದುರಾದರೂ ನಮ್ಮ ಗುರಿಯತ್ತ ಸಾಗುವುದನ್ನು ನಿಲ್ಲಿಸಬಾರದು. ಪರಿಶ್ರಮಕ್ಕೆ ಫಲ ತಡವಾಗಬಹುದು, ಆದರೆ ಸತತ ಪ್ರಯತ್ನ ಎಂದಿಗೂ ವ್ಯರ್ಥವಾಗುವುದಿಲ್ಲ. ಒಂದು ದಿನ ಖಂಡಿತವಾಗಿಯೂ ನಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ.



ಪ್ರಶ್ನೆ: ನಿಮ್ಮ ಸಾಮಾಜಸೇವೆ, ಚಾರಿಟಿ ಬಗ್ಗೆ ಮಾತನಾಡುವುದಾದರೆ...?

ಇಬ್ರಾಹಿಂ ಗಡಿಯಾರ್: ನಾನು ಹುಟ್ಟಿನಿಂದ ಇಂದಿನವರೆಗೂ ಎದುರಿಸಿದ ಕಷ್ಟಗಳನ್ನು ಎಂದಿಗೂ ಮರೆತಿಲ್ಲ. ಬಡತನದಲ್ಲಿರುವ ವ್ಯಕ್ತಿ ಯಾವ ರೀತಿಯ ಕಷ್ಟ–ಕಾರ್ಪಣ್ಯಗಳನ್ನು ಅನುಭವಿಸುತ್ತಾನೆ, ಅದು ಆತನ ಬೆಳವಣಿಗೆಗೆ ಹೇಗೆ ಅಡ್ಡಿಯಾಗುತ್ತದೆ ಎಂಬುದನ್ನು ನಾನು ಸ್ವತಃ ಅನುಭವಿಸಿದ್ದೇನೆ.

ಆ ಕಾರಣದಿಂದಲೇ ಕಷ್ಟದಲ್ಲಿರುವ ಜನರ ನೋವು–ನಲಿವುಗಳಿಗೆ ಸ್ಪಂದಿಸಬೇಕು, ಸಾಧ್ಯವಾದಷ್ಟು ಆರ್ಥಿಕವಾಗಿ ನೆರವಿನ ಹಸ್ತ ಚಾಚಬೇಕು ಎಂಬ ತುಡಿತ ನನ್ನಲ್ಲಿ ಇಂದಿಗೂ ಇದೆ. ಈ ಉದ್ದೇಶದಿಂದ ಕಷ್ಟದಲ್ಲಿರುವವರಿಗೆ ಹಾಗೂ ಆರ್ಥಿಕ ಕಾರಣಗಳಿಂದ ಅರ್ಧದಲ್ಲೇ ವಿದ್ಯಾಭ್ಯಾಸ ಮೊಟಕುಗೊಳಿಸಿದವರಿಗೆ ಈಗಲೂ ಸಹಾಯ ಮಾಡುತ್ತಿದ್ದೇನೆ.

ಬಡತನದಿಂದ ಶಿಕ್ಷಣ ಪಡೆಯಲು ಸಾಧ್ಯವಾಗದ ಮಕ್ಕಳಿಗೆ ನೆರವು ನೀಡಲು ನಾನು ಸದಾ ಸಿದ್ಧನಿದ್ದೇನೆ. ನಾನು ವಿದ್ಯಾಭ್ಯಾಸ ಮಾಡಿದ ನನ್ನ ಊರಿನ ಶಾಲೆಗೂ ಇಂದಿಗೂ ಸಾಧ್ಯವಾದಷ್ಟು ಸಹಾಯ–ಸಹಕಾರ ನೀಡುತ್ತಿದ್ದೇನೆ.

ಇದರ ಜೊತೆಗೆ ನಮ್ಮ ಊರಿನಲ್ಲಿ ‘ಗಡಿಯಾರ್ ಚಾರಿಟೇಬಲ್ ಫೌಂಡೇಶನ್’ ಆರಂಭಿಸಿದ್ದು, ಬಡ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯ ಸೇವೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಮಾಜಸೇವೆಯನ್ನು ಮುಂದುವರಿಸುತ್ತಿದ್ದೇನೆ.

ಯುಎಇಯಲ್ಲಿಯೂ BCFನೊಂದಿಗೆ ಕೈಜೋಡಿಸಿ ಸಮುದಾಯದ ಜನರ ಅಗತ್ಯಗಳು ಹಾಗೂ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ. ನಾನು ಅನುಭವಿಸಿದ ಬಡತನದ ನೋವು ಮತ್ತೊಬ್ಬರ ಜೀವನದಲ್ಲಿ ಅಡ್ಡಿಯಾಗಬಾರದು ಎಂಬುದೇ ನನ್ನ ಸಮಾಜಸೇವೆಯ ಹಿಂದಿರುವ ಪ್ರಮುಖ ಆಶಯ.