SIR: ವಾಸ್ತವ್ಯ ದೃಢೀಕರಣ ಪತ್ರಕ್ಕೆ ಅರ್ಜಿ ಸಲ್ಲಿಸಿದ ತಕ್ಷಣವೇ ನೀಡುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಒತ್ತಾಯ

ಉಡುಪಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನೈಜ ಮತದಾರರಿಗೆ ವಾಸ್ತವ್ಯ ದೃಢೀಕರಣ ಪತ್ರ ಪಡೆಯುವಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರಿಗೆ ಮನವಿ ಸಲ್ಲಿಸಲಾಯಿತು.

ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ ಮತದಾರರ ವಿವರಗಳಲ್ಲಿನ ವ್ಯತ್ಯಾಸ ಸೇರಿದಂತೆ ವಿವಿಧ ಕಾರಣಗಳಿಂದ ಹಲವರಿಗೆ ನೋಟಿಸ್ ಜಾರಿಯಾಗಿದೆ. ನೋಟಿಸ್‌ನಲ್ಲಿ ಸೂಚಿಸಿರುವ ದಾಖಲೆಗಳು ತಮ್ಮ ಬಳಿ ಇಲ್ಲದ ಸಂದರ್ಭದಲ್ಲಿ, ಚುನಾವಣಾ ಆಯೋಗ ಮಾನ್ಯ ಮಾಡುವ ವಾಸ್ತವ್ಯ ದೃಢೀಕರಣ ಪತ್ರಕ್ಕಾಗಿ ಸ್ಥಳೀಯ ಕಂದಾಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ವಿವಿಧ ಕಾರಣಗಳನ್ನು ನೀಡಿ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪವನ್ನು ಕಾಂಗ್ರೆಸ್ ಮುಖಂಡರು ಮಾಡಿದ್ದಾರೆ.

ಬಾಡಿಗೆ ಮನೆಗಳಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವವರು, ಸೂಕ್ತ ದಾಖಲೆಗಳನ್ನು ಹೊಂದಿರದವರು ಹಾಗೂ ಹಳೆಯ ದಾಖಲೆಗಳಲ್ಲಿ ವಿಳಾಸ ವ್ಯತ್ಯಾಸ ಹೊಂದಿರುವವರು ವಾಸ್ತವ್ಯ ದೃಢೀಕರಣ ಪತ್ರಕ್ಕಾಗಿ ಪ್ರತಿನಿತ್ಯ ಕಂದಾಯ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಯಾವುದೇ ಅರ್ಹ ನಾಗರಿಕರು ತಮ್ಮ ಸಾಂವಿಧಾನಿಕ ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗದಂತೆ, SIRಗೆ ಸಂಬಂಧಿಸಿದಂತೆ ಅರ್ಹ ಮತದಾರರು ವಾಸ್ತವ್ಯ ದೃಢೀಕರಣ ಪತ್ರಕ್ಕೆ ಅರ್ಜಿ ಸಲ್ಲಿಸಿದ ಕೂಡಲೇ ನಿಯಮಾನುಸಾರ ಪತ್ರ ನೀಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಜಿಲ್ಲಾಧಿಕಾರಿಯನ್ನು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಹಾಬಲ ಕುಂದರ್, ಕೃಷ್ಣ ಹೆಬ್ಬಾರ್, ಹರಿಪ್ರಸಾದ್ ರೈ, ಗಣೇಶ್ ನೆರ್ಗಿ, ಸತೀಶ್ ಕೊಡವೂರು, ಸುಕೇಶ್ ಕುಂದರ್, ಸತೀಶ್ ಕುಮಾರ್ ಮಂಚಿ, ಶಶಿರಾಜ್ ಕುಂದರ್, ಲಕ್ಷ್ಮಣ್ ಪೂಜಾರಿ, ಮಮತಾ ಶೆಟ್ಟಿ, ಆಶಾ ಚಂದ್ರಶೇಖರ್, ಸಂಧ್ಯಾ ತಿಲಕ್‌ರಾಜ್, ಸದಾನಂದ್ ಕುಲಾಲ್, ಆರೀಫ್, ಬೋನಿಫಾಸ್, ಭರತ್ ಕುಮಾರ್, ಶಕುಂತಲಾ, ದಯಾನಂದ್ ಹಾಗೂ ಸಂಜಯ್ ಆಚಾರ್ಯ ಉಪಸ್ಥಿತರಿದ್ದರು.