ಪಂಚಮ ವರ್ಷದ ಸಂಭ್ರಮಕ್ಕೆ ಸಜ್ಜಾದ ‘ಉಡುಪಿ-ಉಚ್ಚಿಲ ದಸರಾ’; ಅ.11ರಂದು ವಿದ್ಯುಕ್ತ ಚಾಲನೆ; ಅ.12ರಂದು ಮಹಿಳಾ ದಸರಾ ಉದ್ಘಾಟಿಸಲಿರುವ ಸಿಎಂ ಡಿ.ಕೆ.ಶಿವಕುಮಾರ್: ಡಾ.ಜಿ. ಶಂಕರ್

ಉಚ್ಚಿಲ: ದ. ಕ ಮೊಗವೀರ ಮಹಾಜನ ಸಂಘ ಉಚ್ಚಿಲ ವ್ಯವಸ್ಥಾಪನೆಯ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ ದಲ್ಲಿ 5ನೇ ಬಾರಿಗೆ (ಪಂಚಮ ವರ್ಷ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಹಾಗೂ ಭಕ್ತಾಭಿಮಾನಿಗಳ ಸಹಕಾರದೊಂದಿಗೆ ಉಡುಪಿ ಉಚ್ಚಿಲ ದಸರಾ-2026 ಅ.11 ರಿಂದ ಅ.21ರವರೆಗೆ ಶ್ರೀ ಕ್ಷೇತ್ರದ ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಉಡುಪಿ-ಉಚ್ಚಿಲ ದಸರಾ ರೂವಾರಿ, ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ.ಜಿ. ಶಂಕರ್  ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಉಚ್ಚಿಲ ಮೊಗವೀರ ಭವನದಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಆಕರ್ಷಕವಾಗಿ ನಿರ್ಮಿಸಲಾಗಿರುವ ಮಂಟಪದಲ್ಲಿ ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ 11 ದಿನಗಳ ಕಾಲ ಶಾಸ್ತ್ರೋಕ್ತವಾಗಿ ಪೂಜಾ ಪುರಸ್ಕಾರದ ವಿಧಿವಿಧಾನಗಳು ವಿದ್ಯುಕ್ತವಾಗಿ ನೆರವೇರಲಿದೆ ಎಂದರು.

ಪಡುಬಿದ್ರಿಯಿಂದ ಕಾಪು ಸಮುದ್ರತೀರದವರೆಗೆ ವಿದ್ಯುದ್ದೀಪಾಲಂಕಾರ

ದಸರಾ ಪ್ರಯುಕ್ತ ಪಡುಬಿದ್ರಿಯಿಂದ ಕಾಪು ಸಮುದ್ರತೀರದವರೆಗೆ ವಿದ್ಯುದ್ದೀಪಾಲಂಕಾರವನ್ನು ಮಾಡಲಾಗಿದೆ. ದೇವಳದ ಸುತ್ತಲೂ ದೀಪಾಲಂಕಾರದಿಂದ ಸಿಂಗರಿಸಲಾಗಿದೆ. ಅ.10ರಂದು ಸಂಜೆ ಗಂಟೆ 6:30ಕ್ಕೆ ವಿದ್ಯುತ್ ದೀಪಾಲಂಕಾರದ ಉದ್ಘಾಟನೆ ನಡೆಯಲಿದೆ.

11ರಂದು ಬೆಳಗ್ಗೆ ದಸರಾಗೆ ವಿದ್ಯುಕ್ತ ಚಾಲನೆ 

11ರಂದು ಬೆಳಿಗ್ಗೆ ಗಂಟೆ 9ಕ್ಕೆ ನವದುರ್ಗೆಯರ ಮತ್ತು ಶ್ರೀ ಶಾರದಾ ಮಾತೆಯ ವಿಗ್ರಹಗಳನ್ನು ಕ್ಷೇತ್ರದ ತಂತ್ರಿಗಳಾದ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತರಾದ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಗುವುದು. 10:30ಕ್ಕೆ ಮುಜರಾಯಿ, ಬಂದರು, ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಸಚಿವ ಕೆ. ಎಸ್. ಬಸವಂತಪ್ಪ ದಸರಾ ಉದ್ಘಾಟನೆ ನೆರವೇರಿಸಲಿರುವರು. ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್, ಸಚಿವರಾದ ಯು.ಟಿ. ಖಾದರ್, ರುದ್ರಪ್ಪ ಎಂ. ಲಮಾಣಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಸ್ತು ಪ್ರದರ್ಶನ, ಮಾಹಿತಿ ಶಿಬಿರ, ಮನೋರಂಜನಾ ಮತ್ತು ಜಾತ್ರಾ ಮೈದಾನದ ಉದ್ಘಾಟನೆ ನಡೆಯಲಿದೆ.

ಅ.12ರಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ 

ಅ.12ರಂದು ಮಧ್ಯಾಹ್ನ 3 ಗಂಟೆಗೆ ಈ ಭಾರಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ನಡೆಯಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಲಿರುವರು. ಇದೇ ವೇಳೆ ತುಳು ಭಾಷೆಗೆ ರಾಜ್ಯದ ೨ನೇ ಆಡಳಿತ ಭಾಷೆಯ ಸ್ಥಾನಮಾನ ದೊರಕಿಸಿಕೊಟ್ಟ ಮುಖ್ಯಮಂತ್ರಿ ಅಭಿನಂದನಾ ಸಮಾರಂಭ ನಡೆಯಲಿದೆ.

ಧಾರ್ಮಿಕ ವಿಧಿವಿಧಾನಗಳು 

ಶರನ್ನವರಾತ್ರಿಯ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ನಡೆಯುವ ಪ್ರತೀ ದಿನ ಬೆಳಿಗ್ಗೆ ಗಂಟೆ 9ರಿಂದ 12ರ ವರೆಗೆ ಚಂಡಿಕಾಹೋಮ, ಮಧ್ಯಾಹ್ನ ಗಂಟೆ 12ರಿಂದ 3ಗಂಟೆ ಯವರೆಗೆ ಅನ್ನಸಂತರ್ಪಣೆ, ಸಂಜೆ ಗಂಟೆ 6:30ರಿಂದ ಭಕ್ತರಿಗೆ ಪ್ರಸಾದ ವಿತರಣೆ, ಸಂಜೆ ಗಂಟೆ 5:30ರಿಂದ 6:15ರವರೆಗೆ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಪ್ರತೀ ದಿನ ಬೆಳಿಗ್ಗೆ ಗಂಟೆ 9ರಿಂದ ಭಜನಾ ಕಾರ್ಯಕ್ರಮ, ಪ್ರತೀ ದಿನ ಸಂಜೆ ಗಂಟೆ 5ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ, ಪ್ರತೀ ದಿನ ರಾತ್ರಿ ಗಂಟೆ 8:30ರಿಂದ ಕಲ್ಪೋಕ್ತ ಪೂಜೆ, ವಿಜಯದಶಮಿಯಂದು ಸಾಮೂಹಿಕ ಮಹಾಚಂಡಿಕಾಯಾಗ ಹಾಗೂ ಮಹಾಪೂರ್ಣಾಹುತಿ ನಡೆಯಲಿದೆ.

ಹುಲಿವೇಷ, ನೃತ್ಯ, ದೇಹದಾರ್ಢ್ಯ ಸೇರಿದಂತೆ ವಿವಿಧ ಸ್ಪರ್ಧೆ

ವಿವಿಧ ಸ್ಪರ್ಧೆಗಳು: ರಾಜ್ಯ ಮಟ್ಟದ ಆಹ್ವಾನಿತ ತಂಡಗಳಿಂದ ನೃತ್ಯೋತ್ಸವ - ನೃತ್ಯ ಸ್ಪರ್ಧೆ, ಮುದ್ದುಮಕ್ಕಳಿಗಾಗಿ ಶ್ರೀಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ, ಮಹಿಳೆಯರ ಹುಲಿಕುಣಿತ ಸ್ಪರ್ಧೆ, ಸಣ್ಣ ಮಕ್ಕಳಿಂದ ಕಿನ್ನಿ ಪಿಲಿ ನಲಿಕೆ ಸ್ಪರ್ಧೆ, ಪುರುಷರ ಹುಲಿಕುಣಿತ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಉಡುಪಿ ಮತ್ತು ದ.ಕ. ಜಿಲ್ಲಾ ಮಟ್ಟದ ಕುಸ್ತಿ ಸ್ಪರ್ಧೆ, ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ನಡೆಯಲಿದೆ.

ಪ್ರತೀ ವರ್ಷದಂತೆ ಸಾಮೂಹಿಕ ಕುಣಿತ ಭಜನೆ, ಸಾಮೂಹಿಕ ದಾಂಡಿಯಾ ನೃತ್ಯ ಹಾಗೂ ಈ ಭಾರಿ ವಿಶೇಷವಾಗಿ ದಸರಾ ಕವಿಗೋಷ್ಠಿ ನಡೆಯಲಿದೆ.

ಅಕ್ಟೋಬರ್ 21ರಂದು ಭವ್ಯ ಶೋಭಾಯಾತ್ರೆ

ಶೋಭಾಯಾತ್ರೆ ಮೆರುಗು: ಅಕ್ಟೋಬರ್ 21ರಂದು ಅಪರಾಹ್ನ 2:30ಕ್ಕೆ ವಿಸರ್ಜನಾ ಪೂಜೆ ನಡೆಯಲಿದ್ದು, ಬಳಿಕ ಉಡುಪಿ ಉಚ್ಚಿಲ ದಸರಾದ ಪ್ರಮುಖ ಆಕರ್ಷಣೆಯಾದ ಭವ್ಯ ಶೋಭಾಯಾತ್ರೆಯು ಶ್ರೀ ಕ್ಷೇತ್ರ ಉಚ್ಚಿಲದಿಂದ ಹೊರಡಲಿದೆ.

ಶ್ರೀ ಕ್ಷೇತ್ರ ಉಚ್ಚಿಲದಿಂದ ಶೋಭಾಯಾತ್ರೆ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಎರ್ಮಾಳ್- ಉಚ್ಚಿಲ - ಮೂಳೂರು ಮಾರ್ಗವಾಗಿ ಕಾಪು ಬೀಚ್ (ದೀಪಸ್ತಂಭ) ಆಗಮಿಸಲಿದೆ. ಬಳಿಕ ಕಾಪು ದೀಪಸ್ತಂಭದ ಸಮೀಪ ಸಮುದ್ರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಬೋಟುಗಳ ಮೂಲಕ ಸಮುದ್ರ ಮಧ್ಯೆ ಭವ್ಯ ವಿದ್ಯುದ್ದೀಪಾಲಂಕಾರ, ಆಕರ್ಷಕ ಸುಡುಮದ್ದು ಪ್ರದರ್ಶನ, ಸುಮಂಗಲೆಯರಿಂದ ಸಾಮೂಹಿಕ ಮಂಗಳಾರತಿ, ಕಾಶಿಯ ಪಂಡಿತರಿಂದ ನವದುರ್ಗೆಯರು, ಶ್ರೀ ಶಾರದಾ ಮಾತೆ ಹಾಗೂ ಸಮುದ್ರರಾಜನಿಗೆ ವಿಶೇಷ ಗಂಗಾರತಿ, ಡ್ರೋನ್ ಮೂಲಕ ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಗೆ ಪುಷ್ಪಾರ್ಚನೆ ನಡೆಯಲಿದೆ ಎಂದು ಜಿ ಶಂಕರ್ ತಿಳಿಸಿದರು.

ವಿಶೇಷ ಆಕರ್ಷಣೆಯಾಗಿ ಮೂಡಿಬರಲಿದೆ ವಸ್ತುಪ್ರದರ್ಶನ 

ದಸರಾ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿರುವ ಮತ್ಸ್ಯದ್ವಾರ, ದವಸ ದಾನ್ಯಗಳಿಂದ ಮಹಾಮಾತೆಯರು, ಜನಜಾಗೃತಿ ಕಲಾಕೃತಿಗಳು, ಕಲ್ಪವೃಕ್ಷ ಉತ್ಪನ್ನಗಳಿಂದ ವಿವಿಧ ಕಲಾಕೃತಿಗಳು, ವಿಶೇಷ ಚೇತನರಿಂದ ಕಲಾ ಕೃತಿಗಳು, ಪುಷ್ಪ ಪ್ರದರ್ಶನ, ಪಕ್ಷಿಗಳ ಪ್ರದರ್ಶನ, ಕೃಷಿಕರ ಪ್ರಾಚೀನ ಮನೆಯ ಮಾದರಿ, ಚರ್ಮ ವಾದ್ಯ ಪರಿಕರ ತಯಾರಿ, ಅಲಂಕಾರಿಕ ಕಲಾಕೃತಿಗಳ ವಿಶೇಷ ಪ್ರದರ್ಶನ, ಯಕ್ಷಗಾನ ಕಲಾಕೃತಿ, ಎತ್ತಿನ ಗಾಣ, ಸಮುದ್ರದ ಜೀವಂತ ಮೀನು ಹಾಗೂ ಹೊಳೆ ಮೀನುಗಳ ಪ್ರದರ್ಶನ, ಕರಕುಶಲ ವಸ್ತುಗಳ ತಯಾರಿಕೆ, ಚನ್ನಪಟ್ಟಣ ಬೊಂಬೆ ತಯಾರಿಕೆ ಸೇರಿದಂತೆ ವಿವಿಧ ಪ್ರದರ್ಶನಗಳ ಉದ್ಘಾಟನೆಯೂ ನಡೆಯಲಿದೆ ಎಂದು ಜಿ ಶಂಕರ್ ಮಾಹಿತಿ ನೀಡಿದರು. 

ಸುದ್ದಿಗೋಷ್ಠಿಯಲ್ಲಿ ದಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಉಡುಪಿ-ಉಚ್ಚಿಲ ದಸರಾ ಸಮಿತಿಯ ಅಧ್ಯಕ್ಷ ವಿನಯ ಕರ್ಕೇರ, ಮೋಹನ್ ಬೇಂಗ್ರೆ, ಗಿರಿಧರ ಸುವರ್ಣ, ಕವಿತಾ ಶರತ್, ಸುಗುಣ ಕರ್ಕೇರಾ, ಮಜೋಜ್ ಕಾಂಚನ್, ಶರಣ್ ಕುಮಾರ್ ಮಟ್ಟು, ಸತೀಶ್ ಕುಂದರ್ ಮಲ್ಪೆ, ಸಂಧ್ಯಾದೀಪ ಸನಿಲ್, ರತ್ನಾಕರ ಸಾಲ್ಯಾನ್ ಮಲ್ಪೆ, ಮನೋಜ್ ಕಾಂಚನ್ ಉಪಸ್ಥಿರಿದ್ದರು. 

ವಾಹನ ನಿಲುಗಡೆಗೆ ವಿಶೇಷ ವ್ಯವಸ್ಥೆ

ದಸರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ವಿಶೇಷ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಂಗಳೂರು ಕಡೆಯಿಂದ ಬರುವ ವಾಹನಗಳಿಗೆ ಸರಸ್ವತಿ ಶಾಲೆಯ ಮೈದಾನ ಹಾಗೂ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಉಡುಪಿ ಕಡೆಯಿಂದ ಬರುವ ವಾಹನಗಳಿಗೆ ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಶಾಲೆಯ ಪಕ್ಕದ ಮೈದಾನದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಇರಲಿದೆ.