ಫಾರಂ-7 ದುರ್ಬಳಕೆ ಆರೋಪ: ಕಾಂಗ್ರೆಸ್​​ ಹೋರಾಟದ ಬೆನ್ನಲ್ಲೇ ಕಾನೂನು ಕ್ರಮಕ್ಕೆ ಚು.ಆಯೋಗ ಸೂಚನೆ

ನಮ್ಮ ಹೋರಾಟಕ್ಕೆ ಮುಖ್ಯ ಚುನಾವಣಾಧಿಕಾರಿ ಕಚೇರಿ ಮಣಿದಿದೆ: ಡಿಕೆ ಶಿವಕುಮಾರ್

ಬೆಂಗಳೂರು: SIR ನೆಪದಲ್ಲಿ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಷಡ್ಯಂತ್ರ ಖಂಡಿಸಿ ನಡೆಸಿದ ನಮ್ಮ ಹೋರಾಟಕ್ಕೆ ಮುಖ್ಯ ಚುನಾವಣಾಧಿಕಾರಿ ಕಚೇರಿ ಮಣಿದಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 


ಮತದಾರರ ಹೆಸರನ್ನು ಅಳಿಸುವ ಉದ್ದೇಶದಿಂದ ಫಾರ್ಮ್‌ 6, ಫಾರ್ಮ್‌ 6ಎ, ಫಾರ್ಮ್ 7 ಬಳಸಿ ಸುಳ್ಳು ಅರ್ಜಿಗಳನ್ನು ಸಲ್ಲಿಸಿರುವವರ ವಿರುದ್ಧ ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಸೂಚನೆ ನೀಡಿದೆ ಎಂದು ತಿಳಿಸಿದ್ದಾರೆ. 

ಡಿ.ಕೆ.ಶಿವಕುಮಾರ್ ಹೇಳಿಕೆ... 

ಮತದಾರರ ಪಟ್ಟಿಯಿಂದ ಅರ್ಹ ಮತದಾರರನ್ನು ತೆಗೆದುಹಾಕುವವರ ವಿರುದ್ಧ ಪ್ರಕರಣ ದಾಖಲಿಸಲು ಚುನಾವಣಾಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ.

ಮರಣ ಹಾಗೂ ಎರಡು ಬಾರಿ ನೋಂದಣಿಯಾದ ಪ್ರಕರಣಗಳನ್ನು ಹೊರತುಪಡಿಸಿ ಬೇರೆ ಯಾವುದೇ ಫಾರ್ಮ್‌ 7 ಅನ್ನು ಅನುಮೋದಿಸುವಂತಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತರು ರಾಜ್ಯದ ಎಲ್ಲಾ ತಹಶೀಲ್ದಾರ್‌ ಅವರಿಗೆ ನಿರ್ದೇಶನ ನೀಡಿದ್ದಾರೆ. ಮರಣ ಪ್ರಕರಣಗಳಲ್ಲಿ ಮರಣ ಪ್ರಮಾಣ ಪತ್ರ ಕಡ್ಡಾಯವಾಗಿ ಸಲ್ಲಿಕೆಯಾಗಬೇಕು. ಎರಡು ಬಾರಿ ನೋಂದಣಿಯಾಗಿದ್ದರೆ ಎರಡನೇ ಎಪಿಕ್ ಸಂಖ್ಯೆಯನ್ನು ನಮೂದಿಸಬೇಕು ಎಂದು ಸೂಚನೆ ನೀಡಲಾಗಿದೆ.

ಎಸ್‌ಐಆರ್‌ ಅಕ್ರಮದ ಕುರಿತು ಹಲವು ಪ್ರಕರಣಗಳು ಗಮನಕ್ಕೆ ಬಂದಿದ್ದು, ಇದರಲ್ಲಿ ವಿಪಕ್ಷಗಳ ಕುತಂತ್ರವಿದೆ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ದಲಿತರು ಹಾಗೂ ಆರ್ಥಿಕವಾಗಿ ದುರ್ಬಲ ವರ್ಗಗಳ ಮತದಾರರನ್ನು ಗುರಿಯಾಗಿಸಿಕೊಂಡು ಈ ಪ್ರಕ್ರಿಯೆ ನಡೆಸಲಾಗಿದೆ. ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಹೆಸರುಗಳನ್ನು ಅಳಿಸಲು ಅರ್ಜಿಗಳನ್ನು ಸಲ್ಲಿಸಿರುವ ಪ್ರಕರಣಗಳು ವರದಿಯಾಗಿದ್ದು, ಕೆಲವು ಕ್ಷೇತ್ರಗಳಲ್ಲಿ ಇಂತಹ ಅರ್ಜಿಗಳು ಸಾವಿರಾರು ಸಂಖ್ಯೆಯಲ್ಲಿವೆ.

ಈ ಬಗ್ಗೆ ಹಲವು ಜಿಲ್ಲೆಗಳಲ್ಲಿ ಮತದಾರರು ಈಗಾಗಲೇ ದೂರುಗಳನ್ನು ಸಲ್ಲಿಸಿದ್ದು, ಕೆಲವು ಪ್ರಕರಣಗಳಲ್ಲಿ ಎಫ್‌ಐಆರ್‌ಗಳೂ ದಾಖಲಾಗಿವೆ. ತಮ್ಮ ಹೆಸರು ಅಥವಾ ಮತದಾನದ ಹಕ್ಕಿನ ಮೇಲೆ ಪರಿಣಾಮ ಬೀರಿರುವುದನ್ನು ಗಮನಿಸಿದ ಬಳಿಕ ಮತದಾರರು ದೂರು ನೀಡಿದ್ದಾರೆ. ಕೆಲವು ರಾಜಕೀಯ ನಾಯಕರು ಹಿರಿಯ ನಾಯಕರಿಂದ ಫಾರ್ಮ್‌-7 ಅರ್ಜಿಗಳನ್ನು ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ.

ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಗಳು ಹಾಗೂ ಕಾನೂನು ತಜ್ಞರು ಸಭೆ ನಡೆಸಿ ಕೆಲವು ತೀರ್ಮಾನಗಳನ್ನು ಕೈಗೊಂಡಿದ್ದಾರೆ. ನಮ್ಮ ಹೋರಾಟಕ್ಕೆ ಮುಖ್ಯ ಚುನಾವಣಾಧಿಕಾರಿ ಕಚೇರಿ ಮಣಿದಿದೆ. ಅರ್ಹ ಮತದಾರರಿಗೆ ನ್ಯಾಯ ಒದಗಿಸುವ ಭರವಸೆ ಸಿಕ್ಕಿದೆ. ಸೂಕ್ತ ತನಿಖೆ ಆಗದಿದ್ದರೆ ಮತ್ತೆ ಹೋರಾಟ ಮಾಡುತ್ತೇವೆ. ಇದರಲ್ಲಿ ವಿರೋಧ ಪಕ್ಷಗಳ ಕುತಂತ್ರವಿದೆ. ನಮ್ಮ ದಾಖಲೆಗಳನ್ನು ನೋಡಿ ಮುಖ್ಯ ಚುನಾವಣಾಧಿಕಾರಿ ಕಚೇರಿ ಅಚ್ಚರಿ ವ್ಯಕ್ತಪಡಿಸಿದೆ. ಇದು ನಾಡಿನ ಜನತೆ ನಮಗೆ ಕೊಟ್ಟಿರುವ ಹಕ್ಕು. 136 ಮಂದಿಯನ್ನು ಗೆಲ್ಲಿಸಿ ಇಡೀ ಜನರ ರಕ್ಷಣೆ ಮಾಡುವಂತೆ ಸೂಚಿಸಿದ್ದಾರೆ. ಆ ಪ್ರಕಾರ ನಾವು ಈ ನಾಡಿನ ಜನರ ಹಕ್ಕನ್ನು ರಕ್ಷಿಸಲು ಇಂದು ಹೋರಾಟ ಮಾಡಿದ್ದೇವೆ.

ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆದಿರುವ ಅತಿದೊಡ್ಡ ವಂಚನೆ. ಮುಖ್ಯ ಚುನಾವಣಾಧಿಕಾರಿ ಕಚೇರಿಯು ನಮ್ಮನ್ನು ಮನವೊಲಿಸಲು ಬಂದರೂ ನಾವು ಜಗ್ಗಲಿಲ್ಲ. ಮಹಾತ್ಮ ಗಾಂಧೀಜಿ ನಮಗೆ ಹೇಳಿಕೊಟ್ಟ ಮಾರ್ಗದಲ್ಲಿ ಚುನಾವಣಾ ಅಧಿಕಾರಿಗಳಿಗೆ ಅವರ ಕಚೇರಿಯಲ್ಲಿ ಕುಳಿತು ಅಕ್ರಮದ ಬಗ್ಗೆ ಮನದಟ್ಟು ಮಾಡಿಕೊಟ್ಟಿದ್ದೇವೆ. ಅವರಿಗೆ ಅಗತ್ಯ ದಾಖಲೆಗಳನ್ನು ನೀಡಿ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ.

ವಿಪಕ್ಷ ನಾಯಕರಾದ ಆರ್‌. ಅಶೋಕ್‌ ಅವರು 25,000 ಫಾರ್ಮ್‌-7 ಅರ್ಜಿಗಳನ್ನು ವಿತರಿಸಲಾಗಿದೆ ಎಂದು ಹೇಳಿದ್ದಾರೆ. ಅದು ಒಂದಾಗಿರಲಿ, ಹತ್ತಾಗಿರಲಿ, 25 ಸಾವಿರವಾಗಿರಲಿ ಅಥವಾ 25 ಲಕ್ಷವಾಗಿರಲಿ, ತನಿಖೆ ತನ್ನದೇ ಆದ ರೀತಿಯಲ್ಲಿ ನಡೆಯಲಿದೆ. ಈ ಅರ್ಜಿಗಳನ್ನು ಎಲ್ಲಿಂದ ಮುದ್ರಿಸಲಾಯಿತು..? ಹೇಗೆ ಮುದ್ರಿಸಲಾಯಿತು..? ಯಾರು ವಿತರಿಸಿದರು..? ಎಂಬುದು ನಮ್ಮ ಪ್ರಶ್ನೆ.

ನಾವು ಜನರ ಮತದಾನದ ಹಕ್ಕನ್ನು ರಕ್ಷಿಸಲು ಬದ್ಧರಾಗಿದ್ದೇವೆ. ಮುಖ್ಯ ಚುನಾವಣಾಧಿಕಾರಿ ಕಚೇರಿ ನೋಟಿಸ್‌ ನೀಡಿರುವ ಬಾಕಿ 35 ಲಕ್ಷ ಮತದಾರರಿಗೆ ಅಗತ್ಯ ದಾಖಲೆ ಒದಗಿಸಲು ಸರ್ಕಾರ ಬದ್ಧವಾಗಿದೆ. ರಾಜ್ಯದ ಪ್ರತಿಯೊಬ್ಬ ಅರ್ಹ ಮತದಾರನಿಗೂ ಮತದಾನದ ಹಕ್ಕು ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ.