ಬೆಳಕಿಗೆ ಮುತ್ತಿಗೆ ಹಾಕಿದ ಸಾವಿರಾರು ರೆಕ್ಕೆ ಗೆದ್ದಲುಗಳು; ಉಡುಪಿಯಲ್ಲಿ ಮಳೆ ಬಳಿಕ ಕಂಡುಬಂದ ‘ಟರ್ಮೈಟ್ ಸ್ವಾರ್ಮಿಂಗ್’ ದೃಶ್ಯ

ಉಡುಪಿ: ನಗರದ ಗೀತಾಂಜಲಿ ಸಿಲ್ಕ್ಸ್ ರಸ್ತೆಯ ಅಂಗಡಿಗಳಲ್ಲಿ ಬೆಳಕಿಗೆ ಆಕರ್ಷಿತಗೊಂಡು ಸಾವಿರಾರು ರೆಕ್ಕೆ ಹೊಂದಿರುವ ಗೆದ್ದಲುಗಳು ಏಕಕಾಲದಲ್ಲಿ ಹಾರಾಡಿದ್ದು, ಸಾರ್ವಜನಿಕರ ಗಮನ ಸೆಳೆಯಿತು.

ರಸ್ತೆಯ ಇಕ್ಕೆಲಗಳಲ್ಲಿರುವ ಅಂಗಡಿ ಮುಂಗಟ್ಟುಗಳ ವಿದ್ಯುತ್ ದೀಪಗಳು ಹಾಗೂ ದಾರಿದೀಪಗಳಿಗೆ ಆಕರ್ಷಿತಗೊಂಡ ಗೆದ್ದಲುಗಳು ಗುಂಪು ಗುಂಪಾಗಿ ಹಾರಾಡುತ್ತಿದ್ದವು. ಕೆಲ ಸಮಯದ ಬಳಿಕ ರೆಕ್ಕೆಗಳನ್ನು ಕಳಚಿಕೊಂಡ ಗೆದ್ದಲುಗಳು ಹಾಗೂ ಉದುರಿದ ಸಾವಿರಾರು ರೆಕ್ಕೆಗಳು ದೀಪಗಳ ಕೆಳಗೆ ಹಾಗೂ ರಸ್ತೆಯಂಚಿನಲ್ಲಿ ಕಂಡುಬಂದವು.

ಮಳೆ ಹಾಗೂ ತೇವಾಂಶದ ವಾತಾವರಣದ ಬಳಿಕ ಗೆದ್ದಲುಗಳ ಕಾಲೋನಿಯಿಂದ ಸಂತಾನೋತ್ಪತ್ತಿ ಹಂತದಲ್ಲಿರುವ ರೆಕ್ಕೆ ಗೆದ್ದಲುಗಳು ಹೊರಬಂದು ಗುಂಪಾಗಿ ಹಾರಾಡುವುದು ಸಾಮಾನ್ಯ. ರಾತ್ರಿ ವೇಳೆ ಬೆಳಕಿನತ್ತ ಆಕರ್ಷಿತವಾಗುವ ಇವುಗಳಲ್ಲಿ ಜೋಡಿಗಳು ಸೂಕ್ತ ಸ್ಥಳವನ್ನು ಆಯ್ಕೆ ಮಾಡಿಕೊಂಡು ಹೊಸ ಕಾಲೋನಿ ಸ್ಥಾಪಿಸುವುದು ನೈಸರ್ಗಿಕ ಪ್ರಕ್ರಿಯೆಯ ಭಾಗವಾಗಿದೆ.

ಮಳೆಗಾಲದಲ್ಲಿ ಕಂಡುಬರುವ ಈ ‘ಟರ್ಮೈಟ್ ಸ್ವಾರ್ಮಿಂಗ್’ ಗೆದ್ದಲುಗಳ ನೈಸರ್ಗಿಕ ಸಂತಾನೋತ್ಪತ್ತಿ ಚಕ್ರದ ಪ್ರಮುಖ ಹಂತವಾಗಿದ್ದು, ಪರಿಸರದಲ್ಲಿ ಸಹಜವಾಗಿ ನಡೆಯುವ ಪ್ರಕ್ರಿಯೆಯಾಗಿದೆ ಎಂದು ಕೀಟ ತಜ್ಞರು ತಿಳಿಸಿದ್ದಾರೆ.