ಪ್ರಿಯತಮೆಗೆ ಆಸ್ತಿ ನೀಡಬಹುದೆಂಬ ಭಯ: ಉತ್ತರ ಪ್ರದೇಶದ ಉದ್ಯಮಿಯನ್ನು ಕೊಂದ ಪುತ್ರ!

ಲಕ್ನೋ: ಪ್ರೇಯಸಿಗೆ ತನ್ನೆಲ್ಲಾ ಆಸ್ತಿ ಬರೆಯುತ್ತಾನೆಂಬ ಭೀತಿಯಿಂದ ತಂದೆಯನ್ನು ಮಗನೇ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಔಷಧಿ ವ್ಯಾಪಾರಿ ವಿನೀತ್‌ ಮನೋಚಾ (60) ಕೊಲೆಯಾದ ವ್ಯಕ್ತಿ. ಇಂದಿರಾನಗರ ಪ್ರದೇಶದಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಮನೋಚಾ ಮೃತದೇಹ ಪತ್ತೆಯಾಗಿತ್ತು. ಪುತ್ರನೇ ತನ್ನ ತಂದೆಯನ್ನು ಹತ್ಯೆ ಮಾಡಿರುವ ವಿಚಾರ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. 

ವಿನೀತ್‌ ಅವರ ಮತ್ತೊಬ್ಬ ಪುತ್ರ ಸುಬ್ರತ್‌ ಮತ್ತು ಪತ್ನಿ ಶಾಲು ಪಾರ್ಟಿಯೊಂದಕ್ಕೆ ತೆರಳಿದ್ದರು. ಈ ವೇಳೆ ವಿನೀತ್‌ ಒಬ್ಬರೇ ಮನೆಯಲ್ಲಿದ್ದರು. ಆಗ ಸಂಚು ರೂಪಿಸಿ ಪುತ್ರ ವಿಶಾಲ್‌ ತನ್ನ ತಂದೆಯ ಹತ್ಯೆ ಮಾಡಿದ್ದಾನೆ.

ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ, ವಿನೀತ್ ಅವರ ಸೊಸೆಯೇ ಈ ಸಂಚಿನ ರೂವಾರಿ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯನ್ನು, ಹಾಗೆಯೇ ಅವರ ಮಾಜಿ ಉದ್ಯೋಗಿ ವಿಶಾಲ್ ಗೌತಮ್ ಹಾಗೂ ಆತನ ಸಹಚರ ರಾಜ್‌ಕಿಶೋರ್ ಅವರನ್ನು ಬಂಧಿಸಿದ್ದಾರೆ.

ತಂದೆಯ ಕೊಲೆ ಬಗ್ಗೆ ಸುಬ್ರತ್‌ ನೀಡಿದ ದೂರಿನಲ್ಲಿ, ತನ್ನ ತಂದೆ ಹಲವು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ತನ್ನೆಲ್ಲಾ ಆಸ್ತಿಯನ್ನು ಬೇರೊಬ್ಬ ಮಹಿಳೆಗೆ ನೀಡಲು ತಂದೆ ಸಿದ್ಧರಾಗಿದ್ದರು. ಈ ಕಾರಣಕ್ಕೆ ನನ್ನ ಸಹೋದರ ಕೊಲೆ ಮಾಡಿದ್ದಾನೆಂದು ಸುಬ್ರತ್‌ ಪೊಲೀಸರಿಗೆ ತಿಳಿಸಿದ್ದಾರೆ. 

ಕರೆ ವಿವರಗಳ ದಾಖಲೆಗಳು (CDRs), ಸಿಸಿಟಿವಿ ದೃಶ್ಯಾವಳಿಗಳು, ಡಿಜಿಟಲ್ ಹಾಗೂ ವೈಜ್ಞಾನಿಕ ಸಾಕ್ಷ್ಯಗಳು, ವಶಪಡಿಸಿಕೊಳ್ಳಲಾದ ವಸ್ತುಗಳು ಮತ್ತು ಇತರ ಪರೋಕ್ಷ ಸಾಕ್ಷ್ಯಗಳ ವಿಶ್ಲೇಷಣೆಯ ಮೂಲಕ ಈ ಪಿತೂರಿಯು ಬೆಳಕಿಗೆ ಬಂದಿದೆ ಎಂದು ಕಾನ್ಪುರದ ಪೊಲೀಸ್ ಆಯುಕ್ತ ರಘುಬೀರ್ ಲಾಲ್ ತಿಳಿಸಿದ್ದಾರೆ.