ಈಜಲು ತೆರಳಿದ್ದ ಸ್ನೇಹಿತರ ಪೈಕಿ ಇಬ್ಬರ ದುರಂತ ಅಂತ್ಯ; ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ಮೃತದೇಹ ಪತ್ತೆ
ಉಡುಪಿ: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಇಬ್ಬರು ಯುವಕರು ಸುವರ್ಣ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ಹಿರ್ಗಾನ ಗ್ರಾಮದ ಹೆರ್ಮುಂಡೆ ಬಳಿ ನಡೆದಿದೆ.
ಮೃತರನ್ನು ಹಿರ್ಗಾನದ ಭರತ್ ಪೂಜಾರಿ (29) ಹಾಗೂ ಹರ್ಷನ್ ಆಚಾರ್ಯ (23) ಎಂದು ಗುರುತಿಸಲಾಗಿದೆ. ಕೆಲಸಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ ಐವರು ಸ್ನೇಹಿತರು ಮಂಗಿಲಾರು ಮೂಲಕ ಸುಮಾರು ಎರಡು ಕಿ.ಮೀ. ದುರ್ಗಮ ದಾರಿಯಲ್ಲಿ ನಡೆದು ಸುವರ್ಣ ನದಿಗೆ ತೆರಳಿದ್ದರು. ಈ ವೇಳೆ ಆಳವಾದ ನೀರಿಗೆ ತೆರಳಿದ ಭರತ್ ಹಾಗೂ ಹರ್ಷನ್ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ಕೂಡಲೇ ಸ್ನೇಹಿತರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ. ವಾಹನ ಸಂಚಾರಕ್ಕೆ ದಾರಿ ಇಲ್ಲದ ಕಾರಣ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಮೂರು ಕಿ.ಮೀ. ನಡೆದು ಘಟನಾ ಸ್ಥಳಕ್ಕೆ ತಲುಪಿದರು. ಸ್ಥಳೀಯರ ಸಹಕಾರದೊಂದಿಗೆ ಮೂರು ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ಮೇಲಕ್ಕೆತ್ತಲಾಯಿತು. ಠಾಣಾಧಿಕಾರಿ ಸಂಜೀವ ದೇವಾಡಿಗ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ಭರತ್ ಪೇಂಟಿಂಗ್ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದರು. ಸ್ವಂತ ಮನೆ ನಿರ್ಮಿಸುವ ಕನಸು ಕಂಡಿದ್ದ ಅವರ ಮನೆಯ ಕಾಮಗಾರಿ ಸ್ಲಾಬ್ ಹಂತ ತಲುಪಿತ್ತು. ಶೀಘ್ರದಲ್ಲೇ ಗೃಹ ಪ್ರವೇಶ ಮಾಡುವ ನಿರೀಕ್ಷೆಯಲ್ಲಿದ್ದ ಭರತ್ ಅವರನ್ನು ದುರಂತ ಬಲಿ ಪಡೆದಿರುವುದು ಕುಟುಂಬಸ್ಥರಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.
