ದುಬೈ; ನ.22ರಂದು ಅರಬ್ಬರ ನಾಡಲ್ಲಿ 'ಐಕ್ಯತೆಯ ಕರ್ನಾಟಕ ರಾಜ್ಯೋತ್ಸವ -2026': ಕರ್ನಾಟಕ ಸಂಘ ದುಬೈ–ಕನ್ನಡಿಗರ ಕೂಟ ದುಬೈ ಜಂಟಿ ಆಯೋಜನೆ; ಡಾ. ರೊನಾಲ್ಡ್ ಕೊಲಾಸೊ ಸಮನ್ವಯ ಸಾರಥ್ಯ

ದುಬೈ: ದುಬೈಯ ಕನ್ನಡಿಗರ ಐಕ್ಯತೆಗೆ ಹೊಸ ಅಧ್ಯಾಯ ಬರೆಯುವ ನಿಟ್ಟಿನಲ್ಲಿ ಕರ್ನಾಟಕ ಸಂಘ ದುಬೈ ಹಾಗೂ ಕನ್ನಡಿಗರ ಕೂಟ ದುಬೈ ಇದೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲು ಮುಂದಾಗಿವೆ. ಉಭಯ ಸಂಘಟನೆಗಳ ಜಂಟಿ ಆಶ್ರಯದಲ್ಲಿ ‘ದುಬೈ ಕನ್ನಡಿಗರ ಐಕ್ಯತೆಯ ಕರ್ನಾಟಕ ರಾಜ್ಯೋತ್ಸವ 2026’ ಕಾರ್ಯಕ್ರಮವು ನವೆಂಬರ್ 22ರಂದು ದುಬೈ ಅಲ್ ಖಿಸೈಸ್‌ನ ನ್ಯೂ ಡಾನ್ ಪ್ರೈವೇಟ್ ಸ್ಕೂಲ್‌ನಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಸಮಾಜಸೇವಕ ಡಾ. ರೊನಾಲ್ಡ್ ಕೊಲಾಸೊ ತಿಳಿಸಿದ್ದಾರೆ.

ದುಬೈಯ ಕರಾಮದಲ್ಲಿರುವ ಫಾರ್ಚೂನ್ ಆಟ್ರಿಯಂ ಹೋಟೆಲ್‌ನಲ್ಲಿ ರವಿವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಷಗಳಿಂದ ಪ್ರತ್ಯೇಕವಾಗಿ ರಾಜ್ಯೋತ್ಸವ ಆಚರಿಸುತ್ತಿದ್ದ ಎರಡು ಪ್ರಮುಖ ಕನ್ನಡಪರ ಸಂಘಟನೆಗಳು ಈ ಬಾರಿ ಒಂದೇ ವೇದಿಕೆಯಲ್ಲಿ ಕೈಜೋಡಿಸಿರುವುದು ದುಬೈ ಕನ್ನಡಿಗರ ಪಾಲಿಗೆ ಮಹತ್ವದ ಬೆಳವಣಿಗೆಯಾಗಿದೆ ಎಂದರು.

ಡಾ. ರೊನಾಲ್ಡ್ ಕೊಲಾಸೊ ಅವರ ಸಮನ್ವಯದ ಸಾರಥ್ಯದಲ್ಲಿ ನಡೆದ ಮಾತುಕತೆ ಹಾಗೂ ಸಮಾಲೋಚನೆಯ ಬಳಿಕ ಕರ್ನಾಟಕ ಸಂಘ ದುಬೈ ಮತ್ತು ಕನ್ನಡಿಗರ ಕೂಟ ದುಬೈ ಪರಸ್ಪರ ಒಮ್ಮತದಿಂದ ಈ ನಿರ್ಧಾರಕ್ಕೆ ಬಂದಿವೆ.


‘ದುಬೈ ಕನ್ನಡಿಗರ ಐಕ್ಯತೆ ಜಗತ್ತಿಗೆ ಸಂದೇಶವಾಗಲಿ’

“ದುಬೈ ಕನ್ನಡಿಗರಲ್ಲಿರುವ ಐಕ್ಯತೆಯನ್ನು ಈ ಬಾರಿ ಜಗತ್ತಿಗೆ ತೋರಿಸಬೇಕಿದೆ. ರಾಜ್ಯೋತ್ಸವ ಕೇವಲ ಒಂದು ಆಚರಣೆಯಾಗದೆ, ಕನ್ನಡಿಗರ ಒಗ್ಗಟ್ಟು ಮತ್ತು ಸಹಬಾಳ್ವೆಯ ಪ್ರತೀಕವಾಗಬೇಕು” ಎಂದು ಡಾ. ರೊನಾಲ್ಡ್ ಕೊಲಾಸೊ ಹೇಳಿದರು.

ಕನ್ನಡಿಗರೆಲ್ಲರೂ ಒಗ್ಗಟ್ಟು ಹಾಗೂ ಐಕ್ಯತೆಯೊಂದಿಗೆ ಕಾರ್ಯಕ್ರಮದಲ್ಲಿ ಕೈಜೋಡಿಸಿ ಹೊಸ ಇತಿಹಾಸ ನಿರ್ಮಿಸಬೇಕು ಎಂದು ಕರೆ ನೀಡಿದ ಅವರು, *“ಒಗ್ಗಟ್ಟಿನ ಒಲವಿನಿಂದ ಒಮ್ಮೂಡಿದ ಒಮ್ಮತದ ಉತ್ಸವ”*ವಾಗಿ ಈ ಬಾರಿಯ ರಾಜ್ಯೋತ್ಸವ ರೂಪುಗೊಳ್ಳಬೇಕು ಎಂದರು.

ಈ ಹಿಂದೆ ಪ್ರತ್ಯೇಕವಾಗಿ ರಾಜ್ಯೋತ್ಸವ ಆಯೋಜಿಸುವ ಸಂದರ್ಭದಲ್ಲಿ ಸಮಯದ ಅಭಾವ, ಕಲಾವಿದರನ್ನು ಆಹ್ವಾನಿಸುವುದು, ಕಾರ್ಯಕ್ರಮದ ವಿವಿಧ ವ್ಯವಸ್ಥೆಗಳನ್ನು ಸಂಘಟಿಸುವುದು ಸೇರಿದಂತೆ ಹಲವು ಸವಾಲುಗಳು ಎದುರಾಗುತ್ತಿದ್ದವು. ಇದೀಗ ಎರಡು ಸಂಘಟನೆಗಳು ಒಂದೇ ವೇದಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಇಂತಹ ಅಡಚಣೆಗಳನ್ನು ನಿವಾರಿಸಿ, ಕಾರ್ಯಕ್ರಮವನ್ನು ಇನ್ನಷ್ಟು ಅದ್ದೂರಿಯಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಸಹಕಾರ ಮತ್ತು ನೆರವನ್ನು ಘೋಷಿಸಿದ ಡಾ. ಕೊಲಾಸೊ, ಒಗ್ಗಟ್ಟಿನ ಈ ಪ್ರಯತ್ನಕ್ಕೆ ಸಮ್ಮತಿ ಸೂಚಿಸಿದ ಎರಡೂ ಸಂಘಟನೆಗಳ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಗಳನ್ನು ಅಭಿನಂದಿಸಿದರು.










ಈ ವರ್ಷ ಕರ್ನಾಟಕ ಸಂಘ ದುಬೈ ಸಾರಥ್ಯ; ಮುಂದಿನ ವರ್ಷ ಕನ್ನಡಿಗರ ಕೂಟ ದುಬೈ

ಈ ವರ್ಷದ ‘ಐಕ್ಯತೆಯ ಕರ್ನಾಟಕ ರಾಜ್ಯೋತ್ಸವ’ದ ಮುಖ್ಯ ಆಯೋಜನೆಯ ಜವಾಬ್ದಾರಿಯನ್ನು ಕರ್ನಾಟಕ ಸಂಘ ದುಬೈ ವಹಿಸಿಕೊಳ್ಳಲಿದೆ. ಸಂಘದ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಹಾಗೂ ಕಾರ್ಯಕಾರಿ ಸಮಿತಿಯ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಹಯೋಗಿ ಸಂಸ್ಥೆಯಾದ ಕನ್ನಡಿಗರ ಕೂಟ ದುಬೈ ಅಧ್ಯಕ್ಷ ಅರುಣ್ ಕುಮಾರ್ ಹಾಗೂ ಅವರ ತಂಡ ಸಂಪೂರ್ಣ ಸಹಕಾರ ಮತ್ತು ಸಂಘಟನಾತ್ಮಕ ಬೆಂಬಲ ನೀಡಲಿದೆ.

ಮುಂದಿನ ವರ್ಷದ ಕರ್ನಾಟಕ ರಾಜ್ಯೋತ್ಸವದ ಮುಖ್ಯ ಆಯೋಜನೆಯ ಜವಾಬ್ದಾರಿಯನ್ನು ಕನ್ನಡಿಗರ ಕೂಟ ದುಬೈ ವಹಿಸಿಕೊಳ್ಳಲಿದ್ದು, ಕರ್ನಾಟಕ ಸಂಘ ದುಬೈ ಸಹಯೋಗ ನೀಡಲಿದೆ ಎಂದು ಈ ಸಂದರ್ಭದಲ್ಲಿ ಘೋಷಿಸಲಾಯಿತು.

‘ಏಕತೆಯಲ್ಲಿ ಕರ್ನಾಟಕ’ ಆಶಯ

ಯುಎಇಯ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಕನ್ನಡ ಭಾಷೆ, ಕಲೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂಭ್ರಮಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಹಾಗೂ ಕನ್ನಡಿಗರ ಕೂಟ ದುಬೈ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದರು.

ದುಬೈಯ ವಿವಿಧ ಕನ್ನಡ ಸಂಘ-ಸಂಸ್ಥೆಗಳನ್ನು ಒಂದೇ ವೇದಿಕೆಗೆ ಕರೆತಂದು ‘ಏಕತೆಯಲ್ಲಿ ಕರ್ನಾಟಕ’ ಎಂಬ ಆಶಯವನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನ ಇದಾಗಿದೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಮುಂದಿನ ಪೀಳಿಗೆಗೆ ತಲುಪಿಸುವುದರ ಜೊತೆಗೆ ಯುಎಇಯ ಕನ್ನಡಿಗರ ನಡುವಿನ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವುದು ಕಾರ್ಯಕ್ರಮದ ಆಶಯವಾಗಿದೆ ಎಂದು ಅವರು ಹೇಳಿದರು.


ಕಲೆ, ಸಂಸ್ಕೃತಿಯ ವೈಭವಕ್ಕೆ ವೇದಿಕೆ

ರಾಜ್ಯೋತ್ಸವದಲ್ಲಿ ಹಲವು ಗಣ್ಯ ಅತಿಥಿಗಳು, ಪ್ರಮುಖ ಭಾಷಣಕಾರರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರು ಭಾಗವಹಿಸಲಿದ್ದಾರೆ. ಕರ್ನಾಟಕದ ವೈವಿಧ್ಯಮಯ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಕರ್ನಾಟಕ ಹಾಗೂ ಯುಎಇಯ ಪ್ರತಿಭಾವಂತ ಕಲಾವಿದರು ಸಂಗೀತ, ನೃತ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಮೂಲಕ ರಾಜ್ಯೋತ್ಸವದ ಸಂಭ್ರಮಕ್ಕೆ ಮೆರುಗು ನೀಡಲಿದ್ದಾರೆ.

ಸಾಧಕರಿಗೆ ಪ್ರತಿಷ್ಠಿತ ಪ್ರಶಸ್ತಿಗಳು

ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘ ದುಬೈ ವತಿಯಿಂದ ಪ್ರತಿಷ್ಠಿತ ‘ದುಬೈ ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಸಾಧಕರಿಗೆ ‘ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷ ಶಶಿಧರ್ ನಾಗರಾಜಪ್ಪ ತಿಳಿಸಿದರು.

ಕನ್ನಡ ಪಾಠ ಶಾಲೆಯ 13 ನೇ ವರ್ಷದ ಉಚಿತ ತರಗತಿಗಳಿಗೆ ಔಪಚಾರಿಕ ಚಾಲನೆ

ಪ್ರತೀತಿಯಂತೆ ದುಬೈ ಕರ್ನಾಟಕ ರಾಜ್ಯೋತ್ಸವದಲ್ಲಿ ಪ್ರತೀ ವರ್ಷವೂ ಕನ್ನಡ ಮಿತ್ರರು ಯು.ಏ.ಇ ಆಯೋಜನೆಯ ವಿಶ್ವದ ಅತೀ ದೊಡ್ಡ ಹೊರನಾಡ ಕನ್ನಡ ಪಾಠ ಶಾಲೆ ಯ 13 ನೇ ವರ್ಷದ ಉಚಿತ ತರಗತಿಗಳಿಗೆ ಔಪಚಾರಿಕ ಚಾಲನೆ ನೀಡಲಾಗುವುದು ಎಂದು ಅಧ್ಯಕ ಶಶಿಧರ್ ನಾಗರಾಜಪ್ಪ ತಿಳಿಸಿದರು.

ಇದೇ ಸಂದರ್ಭದಲ್ಲಿ ಕನ್ನಡಿಗರ ಕೂಟ ದುಬೈ ವತಿಯಿಂದ ಹಲವು ವರ್ಷಗಳಿಂದ ಕರ್ನಾಟಕದ ಸಾಧಕರಿಗೆ ನೀಡಲಾಗುತ್ತಿರುವ ‘ಅಂತಾರಾಷ್ಟ್ರೀಯ ಕನ್ನಡ ರತ್ನ’ ಪ್ರಶಸ್ತಿ ಹಾಗೂ ಮಧ್ಯಪ್ರಾಚ್ಯದಲ್ಲಿ ಸಾಧನೆಗೈದ ಗಣ್ಯರನ್ನು ಗೌರವಿಸುವ ‘ಡಾ. ಪುನೀತ್ ರಾಜ್‌ಕುಮಾರ್’ ಪ್ರಶಸ್ತಿ ಕೂಡ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದರು.

ಕನ್ನಡಪರ ಕಾರ್ಯಕ್ರಮಗಳಿಗೆ ಸದಾ ಬೆಂಬಲ: ಪ್ರವೀಣ್ ಕುಮಾರ್ ಶೆಟ್ಟಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಎನ್‌ಆರ್‌ಐ ಅಧ್ಯಕ್ಷ ಹಾಗೂ ಖ್ಯಾತ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ, ಈ ಬಾರಿಯ ರಾಜ್ಯೋತ್ಸವಕ್ಕೆ ತಮ್ಮ ಸಂಪೂರ್ಣ ಸಹಕಾರ ಮತ್ತು ಬೆಂಬಲ ವ್ಯಕ್ತಪಡಿಸಿದರು.

ದುಬೈಯಲ್ಲಿ ಕನ್ನಡಪರ ಯಾವುದೇ ಕಾರ್ಯಕ್ರಮ ನಡೆದರೂ ಅದಕ್ಕೆ ಸದಾ ತಮ್ಮ ಬೆಂಬಲ ಮತ್ತು ಸಹಕಾರ ಇರಲಿದೆ ಎಂದು ಅವರು ತಿಳಿಸಿದರು. ಎರಡು ಪ್ರಮುಖ ಕನ್ನಡಪರ ಸಂಘಟನೆಗಳು ಒಂದೇ ವೇದಿಕೆಯಲ್ಲಿ ರಾಜ್ಯೋತ್ಸವ ಆಚರಿಸುತ್ತಿರುವುದು ಸಂತಸದ ವಿಚಾರವಾಗಿದ್ದು, ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಐತಿಹಾಸಿಕ ಐಕ್ಯತೆಗೆ ಸಾಕ್ಷಿಯಾಗಲಿ ಕನ್ನಡಿಗರು: ಹಿದಾಯತ್ ಅಡ್ಡೂರು

ಯುಎಇಯ ಎರಡು ಪ್ರತಿಷ್ಠಿತ ಕನ್ನಡಪರ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಕೈಜೋಡಿಸಿ ಕರ್ನಾಟಕ ರಾಜ್ಯೋತ್ಸವ ಆಚರಿಸಲು ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಬಿಸಿಸಿಐ ಅಧ್ಯಕ್ಷ ಹಿದಾಯತ್ ಅಡ್ಡೂರು ಹೇಳಿದರು.

ಈ ಐತಿಹಾಸಿಕ ನಿರ್ಧಾರವು ಯುಎಇಯ ಕನ್ನಡಿಗರ ಒಗ್ಗಟ್ಟಿಗೆ ಹೊಸ ಸಂದೇಶ ನೀಡಲಿದೆ. ಕನ್ನಡಿಗರ ಈ ಮಹತ್ವದ ಐಕ್ಯತಾ ಕಾರ್ಯಕ್ರಮಕ್ಕೆ ಯುಎಇಯಲ್ಲಿರುವ ಪ್ರತಿಯೊಬ್ಬ ಕನ್ನಡಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಾಕ್ಷಿಯಾಗಬೇಕು ಎಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕನ್ನಡಿಗರ ಕೂಟ ದುಬೈನ ಉಪಾಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ, ಮುಖ್ಯ ಸಲಹಾಗರ ಸಾದನ್ ದಾಸ್ ಹಾಗು ಕರ್ನಾಟಕ ಸಂಘ  ದುಬೈನ ಉಪಾಧ್ಯಕ್ಷ ದಯಾ ಕಿರೋಡಿಯನ್,  ಸಲಹೆಗಾರ ರೊನಾಲ್ಡ್ ಮಾರ್ಟಿಸ್ ಉಪಸ್ಥಿತರಿದ್ದರು.