SIR ಸಂಬಂಧ ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದುಕೊಳಿಸುವಂತೆ ಒತ್ತಾಯ; ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಯಡಿಯೂರಪ್ಪ

ಬೆಂಗಳೂರು: ಎಸ್‍ಐಆರ್ ಸಂಬಂಧ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸ್‌ ಇಲಾಖೆ ಕಾನೂನು ಕ್ರಮ ಜಾರಿಗೊಳಿಸುವುದು, ಕಿರುಕುಳ ನೀಡಿದರೆ ರಾಜ್ಯದಾದ್ಯಂತ ಹೋರಾಟ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. 




ಎಸ್‍ಐಆರ್ (SIR) ಸಂದರ್ಭದಲ್ಲಿ ಸಲ್ಲಿಸಲಾದ ನಮೂನೆ 7 ಅರ್ಜಿಗಳಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕ್ರಿಯೆಗಳನ್ನ ಕಾನೂನು ಅನುಸಾರ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಂದು ಪೊಲೀಸ್ ಮಹಾನಿರ್ದೇಶಕರು ಮತ್ತು‌ ಪೊಲೀಸ್‌ ಮಹಾನಿರೀಕ್ಷಕರಿಗೆ ಮನವಿ ಸಲ್ಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಇಡೀ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಯಾವುದೇ ಕಾರಣಕ್ಕೂ ಕಾರ್ಯಕರ್ತರ ಮೇಲೆ ಕಾನೂನು ಕ್ರಮವಾಗಬಾರದು. ಅವರನ್ನು ಬಂಧಿಸುವುದು, ಅವರಿಗೆ ಕಿರುಕುಳ, ಹಲ್ಲೆ ನಡೆಯಬಾರದು. ಇದು ಏನಾದರೂ ಮುಂದುವರಿದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ನೋಡಿಕೊಳ್ಳುವುದು ಪೊಲೀಸ್‌ ಜವಾಬ್ದಾರಿ. ಒಂದು ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ಯಾವ ರೀತಿ ನಡೆದುಕೊಳ್ಳಬೇಕು ಹಾಗೆ ನಡೆದುಕೊಳ್ಳುತ್ತಿದೆ. ನಮಗೂ ಜವಾಬ್ದಾರಿ ಇದೆ. ನಮ್ಮ ಕಾರ್ಯಕರ್ತರ ಮೇಲಿನ ಎಲ್ಲಾ ಕ್ರಮಗಳು ಈ ತಕ್ಷಣದಿಂದಲೇ ನಿಲ್ಲಬೇಕು ಎಂದು ಹೇಳಿದರು.

ಚುನಾವಣಾ ಆಯೋಗದ ಕಚೇರಿಗೆ ಬಂದು ಧರಣಿ ನಡೆಸಿದ ಮುಖ್ಯಮಂತ್ರಿಗಳಿಗೆ ನಾಚಿಕೆ ಆಗಬೇಕು. ಅವರೇ ಬಂದು ಆಯುಕ್ತರಿಗೆ ಆಗ್ರಹಿಸುವುದು, ಒತ್ತಡ ಹೇರುವುದು ನಾಚಿಕೆಗೇಡಿನ ಕೆಲಸ. ನಾವು ಈಗಾಗಲೇ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿದ್ದೇವೆ. ನಮ್ಮ ಮನವಿ ಸರಿ ಇದ್ದರೆ ಕ್ರಮ ಕೈಗೊಳ್ಳಲಿ. ರಾಜ್ಯದ ಮುಖ್ಯಮಂತ್ರಿಗಳ ಮಾತು ಕೇಳಿ ಕಾರ್ಯಕರ್ತರಿಗೆ ಕಿರುಕುಳ ನೀಡಬಾರದು. ಪೊಲೀಸ್‌ ಅಧಿಕಾರಿಗಳು ಸರ್ಕಾರವನ್ನು ಮೆಚ್ಚಿಸಲು ಕೆಲಸ ಮಾಡುವ ಬದಲು ಕಾನೂನು ಪ್ರಕಾರ ಕೆಲಸ ಮಾಡಲಿ ಎಂದು ಆಗ್ರಹಿಸಿದರು.

ನಿಯೋಗದಲ್ಲಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ, ಪ್ರತಿಪಕ್ಷ ನಾಯಕರಾದ ಆರ್.‌ ಅಶೋಕ್‌, ವಿಧಾನ ಪರಿಷತ್‌ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿಗಳಾದ ಡಾ. ಸಿ. ಎನ್.‌ ಅಶ್ವತ್ಥ್‌ ನಾರಾಯಣ್‌, ಮಾಜಿ ಸಚಿವರಾದ ಬೈರತಿ ಬಸವರಾಜ್‌, ಕೆ. ಗೋಪಾಲಯ್ಯ, ಸಂಸದರಾದ ಪಿ. ಸಿ. ಮೋಹನ್‌, ಶಾಸಕರಾದ ಎಸ್‌. ಆರ್.‌ ವಿಶ್ವನಾಥ್‌, ಸಿ. ಕೆ. ರಾಮಮೂರ್ತಿ, ಎಂ. ಕೃಷ್ಣಪ್ಪ,  ಎಸ್.‌ ರಘು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಮರನಾಥ್ ಪಾಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪ್ರೀತಮ್‌ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಎಸ್.‌ ಹರೀಶ್‌, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಸಪ್ತಗಿರಿ ಗೌಡ, ರಾಜ್ಯ ವಕ್ತಾರರಾದ ಪ್ರಕಾಶ್‌ ಶೇಷರಾಘವಾಚಾರ್‌, ಪ್ರಕೋಷ್ಠಗಳ ರಾಜ್ಯ ಸಂಯೋಜಕರಾದ ಎಸ್.‌ ದತ್ತಾತ್ರಿ ಮತ್ತು ಪ್ರಮುಖರು ಉಪಸ್ಥಿತರಿದ್ದರು.