ಎಂಆರ್‌ಪಿಎಲ್ ಸ್ಫೋಟ ಪ್ರಕರಣ: ಸಮಗ್ರ ತನಿಖೆ, ಸೂಕ್ತ ಪರಿಹಾರ ಹಾಗೂ ಸುರಕ್ಷತಾ ಕ್ರಮಗಳಿಗೆ ಇನಾಯತ್ ಅಲಿ ಆಗ್ರಹ

ಮಂಗಳೂರಿನ ಜೋಕಟ್ಟೆಯಲ್ಲಿರುವ ಎಂಆರ್‌ಪಿಎಲ್‌ (MRPL) ಸಂಸ್ಥೆಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಸ್ಫೋಟ ಹಾಗೂ ಅಗ್ನಿಅವಘಡವು ಸುತ್ತಮುತ್ತಲಿನ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದ್ದು, ಈ ಘಟನೆಯ ಕುರಿತು ಕೇಂದ್ರ ಸರ್ಕಾರ ತಕ್ಷಣವೇ ಸಮಗ್ರ ತನಿಖೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಒತ್ತಾಯಿಸಿದ್ದಾರೆ.

ಸ್ಫೋಟದ ತೀವ್ರತೆಯಿಂದಾಗಿ ಶಬ್ದವು ಬಹುದೂರದವರೆಗೆ ಕೇಳಿಸಿದ್ದು, ಸುತ್ತಮುತ್ತಲ ಮನೆಗಳ ಕಿಟಕಿ ಮತ್ತು ಬಾಗಿಲುಗಳು ಹಾನಿಗೊಳಗಾಗಿವೆ. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಘಟನೆಯ ನಿಖರ ಕಾರಣ ಹಾಗೂ ಹಾನಿಯ ಪ್ರಮಾಣದ ಕುರಿತು ಉನ್ನತ ಮಟ್ಟದ ತನಿಖೆಗೆ ಅವರು ಆಗ್ರಹಿಸಿದ್ದಾರೆ.

ಹಲವು ವರ್ಷಗಳಿಂದ ಎಂಆರ್‌ಪಿಎಲ್ ಸುತ್ತಮುತ್ತಲಿನ ಸಾರ್ವಜನಿಕರು ಕಾರ್ಖಾನೆಯಿಂದ ಎದುರಾಗುತ್ತಿರುವ ಸುರಕ್ಷತೆಯ ಭೀತಿ ಹಾಗೂ ಮಾಲಿನ್ಯದ ಕುರಿತು ಧ್ವನಿ ಎತ್ತುತ್ತಿದ್ದರೂ, ಸಂಸ್ಥೆಯ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ. ಎಂಆರ್‌ಪಿಎಲ್‌ನಲ್ಲಿನ ಸುರಕ್ಷತಾ ಮಾನದಂಡಗಳು, ತುರ್ತು ನಿರ್ವಹಣಾ ವ್ಯವಸ್ಥೆ ಹಾಗೂ ನಿಯಮಗಳ ಪಾಲನೆಯ ಕುರಿತು ಕಟ್ಟುನಿಟ್ಟಿನ ತನಿಖೆ ನಡೆಯಬೇಕು. ತನಿಖೆಯಲ್ಲಿ ಆಡಳಿತ ಮಂಡಳಿಯ ನಿರ್ಲಕ್ಷ್ಯ ಸಾಬೀತಾದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಭವಿಷ್ಯದಲ್ಲಿ ಇಂತಹ ಅವಘಡಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಇನಾಯತ್ ಅಲಿ ಆಗ್ರಹಿಸಿದ್ದಾರೆ.

ಸ್ಥಳೀಯ ನಿವಾಸಿಗಳು ಈ ಘಟಕದಿಂದ ಉಂಟಾಗುತ್ತಿರುವ ಶಬ್ದ, ವಾಯು ಹಾಗೂ ಜಲ ಮಾಲಿನ್ಯದ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಜನರ ಭೂಮಿ, ಪರಿಸರ ಮತ್ತು ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರುತ್ತಿರುವ ಈ ಕೈಗಾರಿಕೆಯು, ಸ್ಥಳೀಯ ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಈ ವಿಷಯದ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಶಾಸಕರು ಮತ್ತು ಸಂಸದರು ಕೇಂದ್ರ ಸರ್ಕಾರವನ್ನು ತಕ್ಷಣವೇ ಪ್ರಶ್ನಿಸಿ ಸ್ಥಳೀಯರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಜವಾದ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಗಮನ ಹರಿಸುವ ಬದಲು ಧರ್ಮದ ಹೆಸರಿನಲ್ಲಿ ರಾಜಕೀಯ ಸಂಘರ್ಷಕ್ಕೆ ಆದ್ಯತೆ ನೀಡಲಾಗುತ್ತಿದೆ. ಇಂತಹ ಪರಿಸ್ಥಿತಿಯ ನಡುವೆ ಇಂದು ನಡೆದಿರುವ ಭೀಕರ ಅವಘಡವು ಜನರಲ್ಲಿ ಇನ್ನಷ್ಟು ಭಯ ಮತ್ತು ಆತಂಕವನ್ನು ಹುಟ್ಟುಹಾಕಿದೆ.

ಎಂಆರ್‌ಪಿಎಲ್ ಸಂಸ್ಥೆಯ ಕಾರ್ಯಾಚರಣೆ ಮತ್ತು ಸುರಕ್ಷತಾ ವ್ಯವಸ್ಥೆಯನ್ನು ತಕ್ಷಣವೇ ಸಮಗ್ರ ಪರಿಶೀಲನೆಗೆ ಒಳಪಡಿಸಬೇಕು. ಸಾರ್ವಜನಿಕರ ಜೀವ ಹಾಗೂ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಸೂಕ್ತ ಸುರಕ್ಷತಾ ವಲಯವನ್ನು ನಿರ್ಮಿಸಬೇಕು. ಕಾರ್ಖಾನೆಯ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಲು ಮತ್ತು ಮಾಲಿನ್ಯ ನಿಯಂತ್ರಿಸಲು ಹಸಿರು ವಲಯ (Green Zone) ಪ್ರದೇಶವನ್ನು ಕಡ್ಡಾಯವಾಗಿ ಸ್ಥಾಪಿಸಬೇಕು. ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟ ಸಚಿವಾಲಯಗಳು ತಕ್ಷಣವೇ ಮಧ್ಯಪ್ರವೇಶಿಸಿ ಸ್ಥಳೀಯ ಜನರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಇನಾಯತ್ ಅಲಿ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.