'ಭಾರತದಲ್ಲಿ ಈಗ ಆ ನೆಮ್ಮದಿ ಕಾಣುತ್ತಿಲ್ಲ' ಎಂದ ಸಂಜಯ್ ದತ್; ಮುನ್ನಾಭಾಯಿ ಶೈಲಿಯಲ್ಲಿ ಪ್ರಧಾನಿ ಮೋದಿಗೆ ಟಾಂಗ್!

ಮುಂಬೈ: ‘ಭಾರತದಲ್ಲಿ ಈಗ ಮೊದಲಿನಂತಹ ಶಾಂತಿಯ ಅನುಭವವಾಗುತ್ತಿಲ್ಲ’ ಎಂದು ನಟ ಸಂಜಯ್ ದತ್ ಹೇಳಿದ್ದಾರೆ. 

ಶೇಖರ್ ಸುಮನ್ ಅವರ ‘ಶೇಖರ್ ಟುನೈಟ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ತಮ್ಮ ಜನಪ್ರಿಯ ‘ಮುನ್ನಾ ಭಾಯ್’ ಪಾತ್ರದ ಶೈಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಮಹಾತ್ಮ ಗಾಂಧಿಯವರ ವಿಚಾರಗಳನ್ನು ಪ್ರಸ್ತಾಪಿಸಿ ರಾಜಕೀಯ ವ್ಯಂಗ್ಯವಾಡಿದರು.

ಗಾಂಧಿ ಜಯಂತಿ ವಿಶೇಷ ಸಂಚಿಕೆಯಲ್ಲಿ ಶುಕ್ರವಾರ ಪ್ರಸಾರವಾದ ಕಾರ್ಯಕ್ರಮದಲ್ಲಿ ಸಂಜಯ್ ದತ್ ಸುಮಾರು ಐದು ನಿಮಿಷಗಳ ಕಾಲ ತಾವೇ ಪ್ರಧಾನಿಯಾಗಿದ್ದರೆ ದೇಶದ ಜನರನ್ನು ಹೇಗೆ ಉದ್ದೇಶಿಸಿ ಮಾತನಾಡುತ್ತಿದ್ದೆ ಎಂಬುದನ್ನು ‘ಮುನ್ನಾ ಭಾಯ್’ ಶೈಲಿಯಲ್ಲಿ ನಿರೂಪಿಸಿದರು.

ದೇಶದ ಪರಿಸ್ಥಿತಿ ಕುರಿತು ಮಾತನಾಡಿದ ಅವರು, “ಈ ದೇಶದ ಜನರು ತುಂಬಾ ಒಳ್ಳೆಯವರು. ಇಲ್ಲಿ ಶಾಂತಿ ನೆಲೆಸಬೇಕು. ಆದರೆ ನಮ್ಮ ದೇಶದಲ್ಲಿ ಆ ಶಾಂತಿಯನ್ನು ನನಗೆ ಈಗ ಅನುಭವಿಸಲು ಸಾಧ್ಯವಾಗುತ್ತಿಲ್ಲ. ನಾವು ಭಾರತೀಯರು ವಿಶಾಲ ಹೃದಯದವರು ಮತ್ತು ಅತಿಥಿ ಸತ್ಕಾರದಲ್ಲಿ ನಂಬಿಕೆ ಇಟ್ಟವರು. ನಾವು ಬಹಳಷ್ಟು ನೀಡಿದ್ದೇವೆ ಮತ್ತು ಯಾವಾಗಲೂ ಹಾಗೆಯೇ ಇರಬೇಕು. ಆ ದಿನಗಳು ಶೀಘ್ರದಲ್ಲೇ ಮರಳಿ ಬರಲಿ ಎಂದು ನಾನು ಶಿವನಲ್ಲಿ ಪ್ರಾರ್ಥಿಸುತ್ತೇನೆ” ಎಂದರು.

‘ಪ್ರಧಾನಿಯಾದರೆ ವಿದೇಶಕ್ಕೆ ಹೋಗಲ್ಲ’

ಕಾರ್ಯಕ್ರಮದ ಅಂತಿಮ ಭಾಗದಲ್ಲಿ, ಐದು ನಿಮಿಷಗಳ ಕಾಲ ಪ್ರಧಾನಮಂತ್ರಿಯೆಂದು ಕಲ್ಪಿಸಿಕೊಂಡು ಮಾತನಾಡುವಂತೆ ಸಂಜಯ್ ದತ್ ಅವರಿಗೆ ಕೇಳಲಾಯಿತು. ಕೂಡಲೇ ಅವರು ‘ಮುನ್ನಾ ಭಾಯ್’ ಪಾತ್ರದ ಭಾಷೆ ಹಾಗೂ ಹಾವಭಾವಕ್ಕೆ ಮರಳಿದರು.

“ಚಲೋ ದೇಶ್ ಮೇ ಕುಚ್ ತೋ ಚಲ್ ರೆಹ್ಲಾ ಹೈ. ಮೇರೆ ಪ್ಯಾರೆ ದೇಶ್ವಾಸಿಯೋ, ಆಜ್ ಆಪುನ್ ಆಪ್ಕಾ ಪಿಎಂ ಬನ್ ಕೇ ಖುಬ್ ಖುಷ್ ಹುವಾ. ಬೋಲೇ ತೋ ಬಾಡಿ ಮೇ ಅಜೀಬ್ ಟೈಪ್ ಕಾ ತರಂಗ್ ದೌದ್ ರೇ ಲಾ ಹೈ” ಎಂದು ಅವರು ಹೇಳಿದರು. ಇಷ್ಟು ಜನರ ಜವಾಬ್ದಾರಿ ಈಗ ತಮ್ಮ ಮೇಲಿದೆ ಎಂಬುದನ್ನು ಹಾಸ್ಯದ ಮೂಲಕ ವ್ಯಕ್ತಪಡಿಸಿದರು.

ಬಳಿಕ ಪ್ರಧಾನಿ ಮೋದಿ ಅವರ ವಿದೇಶ ಪ್ರವಾಸಗಳನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು, “ಆಪ್ ಲೋಗ್ ಏಕ್‌ದಮ್ ಟೆನ್ಶನ್ ನಹೀ ಲೇನೆ ಕಾ. ಅಪುನ್ ಈಸ್ ಖುಷಿ ಕೋ ಸೆಲೆಬ್ರೇಟ್ ಕರ್ನೇ ವಿದೇಶ್ ನಹೀ ಜಾನೇ ವಾಲಾ ಹೈ. ಅಪುನ್ ಇಧಾರಿಚ್ ರಹೇಗಾ, ಆಪ್ ಸಬ್ ಲೋಗೋನ್ ಕೆ ಬೀಚ್. ನಹೀ ತೋ ಪಿಎಂ ಔರ್ ಜಂತಾ ಮೇ ಕನೆಕ್ಷನ್ ಕೈಸೇ ಬನೇಗಾ” ಎಂದರು.

ಅಂದರೆ, ಪ್ರಧಾನಿಯಾದ ಸಂಭ್ರಮ ಆಚರಿಸಲು ತಾವು ವಿದೇಶಕ್ಕೆ ಹೋಗದೆ ಜನರ ನಡುವೆ ಇರುವುದಾಗಿ ಅವರು ವ್ಯಂಗ್ಯವಾಡಿದರು.

ಮಹಾತ್ಮ ಗಾಂಧಿಯವರ ಪ್ರಸಿದ್ಧ ಮೂರು ಕೋತಿಗಳನ್ನು ಉಲ್ಲೇಖಿಸಿದ ಸಂಜಯ್ ದತ್, ಇಂದಿನ ಸಂದರ್ಭದಲ್ಲಿ ನಾಲ್ಕನೇ ಕೋತಿಯ ಅಗತ್ಯವಿದೆ ಎಂದು ಹಾಸ್ಯ ಮಾಡಿದರು.

“ಅಪುನ್ ಗಾಂಧಿ ಜೀ ಕೊ ಬಹುತ್ ಮಾಂತಾ ಹೈ. ಔರ್ ಗಾಂಧಿ ಜೀ ಕೆ ತೀನ್ ಬಂದರ್ ಸಬ್ಕೊ ಪತಾ ಹೈ — ಬುರಾ ಮತ್ ದೇಖೋ, ಬುರಾ ಮತ್ ಸುನೋ, ಬುರಾ ಮತ್ ಕಹೋ. ಲೇಕಿನ್ ಆಜ್ ಏಕ್ ಚೌತಾ ಬಂದರ್ ಭಿ ಮಂಗ್ತಾ ಹೈ” ಎಂದು ಹೇಳಿದರು.

“ಮೂರೂ ಕೋತಿಗಳು ಕಣ್ಣು, ಕಿವಿ ಮತ್ತು ಬಾಯಿ ಮುಚ್ಚಿಕೊಂಡು ಕುಳಿತರೆ ದೇಶ ಹೇಗೆ ನಡೆಯುತ್ತದೆ?” ಎಂದು ಪ್ರಶ್ನಿಸುವ ಮೂಲಕ ಅವರು ವ್ಯಂಗ್ಯವಾಡಿದರು.

ಸರ್ಕಾರಿ ಸಂವಹನ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರಧಾನಮಂತ್ರಿಯವರ ಭಾವಚಿತ್ರಗಳ ಬಳಕೆಯ ಬಗ್ಗೆಯೂ ಅವರು ಹಾಸ್ಯ ಮಾಡಿದರು.

“ಅಪುನ್ ಕೋ ದೇಶ್ ಕೆ ಲಿಯೇ ಬಹುತ್ ಕುಚ್ ಕರ್ನೇ ಕಾ ಮೌಕಾ ಮಿಲಾ ಹೈ ಪಿಎಂ ಬನ್ಕೆ, ತೋ ಅಪುನ್ ಏಕ್ ಔರ್ ಕಾಮ್ ಕರೇಗಾ. ಎಲ್ಲೆಲ್ಲಿ ಪ್ರಧಾನಮಂತ್ರಿಯವರ ಛಾಯಾಚಿತ್ರವನ್ನು ಹಾಕಲಾಗಿದೆಯೋ, ಅದನ್ನು ಕಡಿಮೆ ಮಾಡುತ್ತೇನೆ. ದೇಶವು ದೇಶದ ಚಿತ್ರವನ್ನು ನೋಡಬೇಕು” ಎಂದರು.

ತಮ್ಮ ಭಾವಚಿತ್ರ ಹಾಕಿಸಿಕೊಳ್ಳಬೇಕು ಎನ್ನಿಸುವ ಸ್ಥಳಗಳಲ್ಲಿ ಗಾಂಧಿಯವರ ಚಿತ್ರ ಹಾಕಿಸುವುದಾಗಿ ಹೇಳಿದ ಅವರು, “ಗಾಂಧಿ ಜೀ ಕೆ ವಿಚಾರ ದೇಖನಾ ಜ್ಯಾದಾ ಜರೂರಿ ಹೈ. ಅಪುನ್ ಕಾ ಫೋಟೋ ದೇಖ್ ಕೆ ಜಾಂತ ಕ್ಯಾ ಕರೇಗಾ?” ಎಂದು ಪ್ರಶ್ನಿಸಿದರು.

“ಅಪುನಾ ಫೋಟೋ ತೋ ಅಪುನ್ ಬಾದ್ ಮೇ ಭಿ ಖಿಚ್ವಾ ಸಕ್ತಾ ಹೈ ನಾ, ಲೇಕಿನ್ ದೇಶ್ ಕೋ ಪೆಹ್ಲೆ ಫ್ರೇಮ್ ಮೇ ಲಗಾನೇ ಕಾ” ಎಂದ ಅವರು, ವೈಯಕ್ತಿಕ ಚಿತ್ರಕ್ಕಿಂತ ದೇಶಕ್ಕೆ ಮೊದಲು ಸ್ಥಾನ ನೀಡಬೇಕು ಎಂಬರ್ಥದಲ್ಲಿ ಮಾತನಾಡಿದರು.

‘ಟ್ರಂಪ್ ಮಾಮುಗೆ ಗಾಂಧಿಗಿರಿ ಕಲಿಸಬೇಕು’

ಬಳಿಕ ತಮ್ಮ ಕಾಲ್ಪನಿಕ ವಿದೇಶಾಂಗ ನೀತಿಯ ಕುರಿತು ಮಾತನಾಡಿದ ಸಂಜಯ್ ದತ್, ಡೊನಾಲ್ಡ್ ಟ್ರಂಪ್ ಅವರನ್ನು ‘ಟ್ರಂಪ್ ಮಾಮು’ ಎಂದು ಸಂಬೋಧಿಸಿದರು.

“ದೇಶವನ್ನು ಚೌಕಟ್ಟಿನಲ್ಲಿ ತರಬೇಕಾದರೆ ಸ್ವಲ್ಪ ಜಗತ್ತನ್ನೂ ಚೌಕಟ್ಟಿನಲ್ಲಿ ತರಬೇಕು” ಎಂದು ಹೇಳಿದ ಅವರು, “ಶಾಂತಿ ಬಂತ ಹೈ ಪ್ಯಾರ್ ಸೆ ಔರ್ ಪ್ಯಾರ್ ಆತಾ ಹೈ ಗಾಂಧಿಗಿರಿ ಸೆ. ಬೋಲೇ ತೋ ಟ್ರಂಪ್ ಮಾಮು ಕೋ ಥೋಡಾ ಗಾಂಧಿಗಿರಿ ಶಿಖಾನಾ ಪಡೆಗಾ” ಎಂದರು.

ಪ್ರೀತಿಯ ಮೂಲಕ ಶಾಂತಿ ಬರುತ್ತದೆ. ಪ್ರೀತಿ ಗಾಂಧಿಗಿರಿಯಿಂದ ಬರುತ್ತದೆ. ಹೀಗಾಗಿ ಟ್ರಂಪ್ ಮಾಮು ಸ್ವಲ್ಪ ಗಾಂಧಿಗಿರಿ ಕಲಿಯಬೇಕು ಎಂಬುದು ಅವರ ಮಾತಿನ ತಾತ್ಪರ್ಯವಾಗಿತ್ತು.

‘ಕ್ಷಿಪಣಿ ಬದಲು ಹೂಗುಚ್ಛ ಕಳುಹಿಸಿ’

ಜಾಗತಿಕ ಸಂಘರ್ಷಗಳ ಬಗ್ಗೆಯೂ ಮಾತನಾಡಿದ ಅವರು, ಕ್ಷಿಪಣಿಗಳು ಹಾಗೂ ಬೆದರಿಕೆಗಳ ಬದಲು ಪ್ರೀತಿ ಮತ್ತು ಮಾತುಕತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

“ದೇಖೋ ಟ್ರಂಪ್ ಮಾಮು, ಝ್ಯಾದಾ ತಂತೆ ನಹೀ ಪಾಲ್ನೇ ಕಾ. ದುನಿಯಾ ಮೇ ಕ್ಷಿಪಣಿ ವೈಸೇ ಹೈ ಬಹುತ್ ಹೋ ಗಯಾ ಹೈ. ಅಬ್ ಥೋಡಾ ಪ್ಯಾರ್ ಭಿ ಎಕ್ಸ್‌ಪೋರ್ಟ್ ಕರ್ನೇ ಕಾ. ಕಹೀಂ ಮಿಸೈಲ್ ಭೇಜ್ನೇ ಕಾ ಮನ್ ಕರೇ ತೋ ಪೆಹ್ಲೆ ಗುಲ್ದಾಸ್ತಾ ಭೇಜ್ನೇ ಕಾ. ಕಿಸಿ ಕೋ ಧಮ್ಕಾನೇ ಕಾ ಮನ್ ಕರೇ ತೋ ಉಸೇ ಫೋನ್ ಕರ್ನೇ ಕಾ, ಚಾಯ್ ಪೀತೇ-ಪೀತೇ ಬಾತ್ ಸುಲ್ಝಾನೇ ಕಾ” ಎಂದು ಅವರು ಹೇಳಿದರು.

ಜಗತ್ತಿನಲ್ಲಿ ಈಗಾಗಲೇ ಸಾಕಷ್ಟು ಕ್ಷಿಪಣಿಗಳಿವೆ. ಹೀಗಾಗಿ ಕ್ಷಿಪಣಿ ಕಳುಹಿಸುವ ಬದಲು ಮೊದಲು ಹೂಗುಚ್ಛ ಕಳುಹಿಸಬೇಕು. ಯಾರಿಗಾದರೂ ಬೆದರಿಕೆ ಹಾಕುವ ಬದಲು ಅವರಿಗೆ ಕರೆ ಮಾಡಿ ಚಹಾ ಕುಡಿಯುತ್ತಾ ಸಮಸ್ಯೆ ಬಗೆಹರಿಸಬೇಕು ಎಂಬುದು ಅವರ ವ್ಯಂಗ್ಯದ ಸಾರವಾಗಿತ್ತು.

ಕೊನೆಯಲ್ಲಿ ‘ಮುನ್ನಾ ಭಾಯ್’ ಶೈಲಿಯಲ್ಲೇ ಮಾತನಾಡಿದ ಸಂಜಯ್ ದತ್, “ಅಪುನ್ ಆ ರೇಲಾ ಹೈ ಅಮೇರಿಕಾ, ತುಮ್ಕೋ ಜಾದು ಕಿ ಝಪ್ಪಿ ದೇನೆ” ಎಂದು ಹೇಳಿ, ಅಮೆರಿಕಕ್ಕೆ ಬಂದು ‘ಜಾದೂ ಕಿ ಝಪ್ಪಿ’ ನೀಡುವುದಾಗಿ ಹಾಸ್ಯ ಮಾಡಿದರು.

ಸಂಜಯ್ ದತ್ ಅವರ ಈ ಸ್ವಗತವು 2006ರಲ್ಲಿ ಬಿಡುಗಡೆಯಾದ ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಲಗೇ ರಹೋ ಮುನ್ನಾ ಭಾಯ್ ಚಿತ್ರದ ಕೇಂದ್ರ ಆಶಯವನ್ನು ನೆನಪಿಸಿತು. ಚಿತ್ರದಲ್ಲಿ ಸಂಜಯ್ ದತ್ ನಿರ್ವಹಿಸಿದ್ದ ‘ಮುನ್ನಾ ಭಾಯ್’ ಪಾತ್ರವು ಮಹಾತ್ಮ ಗಾಂಧಿಯವರ ತತ್ವಗಳನ್ನು ಅರಿತುಕೊಂಡು, ದೈನಂದಿನ ಜೀವನದ ಸಮಸ್ಯೆಗಳಿಗೆ ‘ಗಾಂಧಿಗಿರಿ’ಯನ್ನು ಅನ್ವಯಿಸಲು ಆರಂಭಿಸುತ್ತದೆ.