👉 ಕರಾವಳಿಯನ್ನು ವಿಶ್ವಮಟ್ಟದ ಪ್ರವಾಸೋದ್ಯಮ ಕೇಂದ್ರವನ್ನಾಗಿಸಲು ಹೊಸ ನೀತಿ
👉 ಉಚ್ಚಿಲ ಮಹಿಳಾ ದಸರಾ ಉದ್ಘಾಟಿಸಿದ ಮುಖ್ಯಮಂತ್ರಿ
👉ಮೀನುಗಾರರ ಸಮಸ್ಯೆ ಪರಿಹಾರಕ್ಕೆ ಡಾ. ಜಿ. ಶಂಕರ್, ಜನಪ್ರತಿನಿಧಿಗಳಿಂದ ಮನವಿ
👉 ದೇವಳದ ವತಿಯಿಂದ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆ
👉 ದಸರಾ ರಾಜ್ಯದ ಏಳು ಕೋಟಿ ಜನರ ಹಬ್ಬ: ಸಚಿವ ರಿಜ್ವಾನ್ ಅರ್ಷದ್
ಫೋಟೋ: ಸಚಿನ್ ಉಚ್ಚಿಲ
ಉಚ್ಚಿಲ: ಕರಾವಳಿಯ ಸಮಗ್ರ ಪ್ರಗತಿ ನಮ್ಮ ಸರಕಾರದ ಸಂಕಲ್ಪವಾಗಿದೆ. ಈ ನಿಟ್ಟಿನಲ್ಲಿ ನುಡಿದಂತೆ ನಡೆಯುತ್ತೇವೆ. ಕರಾವಳಿಯ ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾ-2026 ಉತ್ಸವದ ಅಂಗವಾಗಿ ಗುರುವಾರ ಸಂಜೆ ಆಯೋಜಿಸಲಾಗಿದ್ದ ಮಹಿಳಾ ದಸರಾ ಉದ್ಘಾಟಿಸಿ, ಅಭಿನಂದನೆಯನ್ನು ಸ್ವೀಕರಿಸಿ, ಅವರು ಮಾತನಾಡುತ್ತಿದ್ದರು.
“ಅಲೆಗಳಿಲ್ಲ ಎಂದರೆ ಸಮುದ್ರಕ್ಕೂ ಬೆಲೆಯಿಲ್ಲ, ಕರಾವಳಿಯಿಲ್ಲ ಎಂದರೆ ಕರ್ನಾಟಕಕ್ಕೂ ಗೌರವವಿಲ್ಲ ಎಂಬುದನ್ನು ಅರಿತವನು ನಾನು. ಮೀನುಗಾರರ ವಿವಿಧ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳು ಹಾಗೂ ಡಾ. ಜಿ. ಶಂಕರ್ ಅವರು ಮನವಿ ಸಲ್ಲಿಸಿದ್ದಾರೆ. ಈ ಕುರಿತು ಬೆಂಗಳೂರಿಗೆ ಹೋದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ.
ಘೋಷಣೆಗೆ ಚುನಾವಣಾ ನೀತಿ ಸಂಹಿತೆ ಅಡ್ಡಿ
ಇಲ್ಲಿಯೇ ಈ ಬಗ್ಗೆ ಘೋಷಣೆ ಮಾಡಿದರೆ ಚುನಾವಣಾ ನೀತಿ ಸಂಹಿತೆಯ ಹೆಸರಿನಲ್ಲಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವವರೂ ನಮ್ಮ ನಡುವೆಯೇ ಇದ್ದಾರೆ. ನಾನು ನುಡಿದಂತೆ ನಡೆಯುವವನು. ಅದನ್ನು ನಮ್ಮ ಸರಕಾರ ಈಗಾಗಲೇ ಸಾಬೀತುಪಡಿಸಿದೆ. ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ರಾಜ್ಯದ ಜನರು ಅವುಗಳ ಪ್ರಯೋಜನ ಪಡೆಯುತ್ತಿದ್ದಾರೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಸರಕಾರ ವಿವಿಧ ಯೋಜನೆಗಳನ್ನು ಕೈಗೊಂಡಿದೆ” ಎಂದು ಅವರು ಹೇಳಿದರು.
ವಿಶ್ವಮಟ್ಟಕೆ ಕರಾವಳಿ ಪ್ರವಾಸೋದ್ಯಮ
ಕರಾವಳಿಯ ಪ್ರವಾಸೋದ್ಯಮವನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದ್ದೇವೆ. ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನು ರೂಪಿಸಲು ಸರಕಾರ ಮುಂದಾಗಿದೆ. ಈ ಮೂಲಕ ಸ್ಥಳೀಯ ಜನರ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಪ್ರಗತಿಗೆ ಆದ್ಯತೆ ನೀಡಲಾಗುವುದು. ನಮ್ಮ ಮಕ್ಕಳು ಉದ್ಯೋಗಕ್ಕಾಗಿ ದೂರದ ದುಬೈ, ಮುಂಬೈ ಹಾಗೂ ಬೆಂಗಳೂರಿಗೆ ತೆರಳುವ ಬದಲು, ತಮ್ಮ ಊರಿನಲ್ಲಿಯೇ ಉದ್ಯೋಗಾವಕಾಶಗಳನ್ನು ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಕರಾವಳಿ ಮತ್ತು ಮಲೆನಾಡಿನ ಅಭಿವೃದ್ಧಿಗೆ ಪೂರಕವಾದ ಐತಿಹಾಸಿಕ ಪ್ರವಾಸೋದ್ಯಮ ನೀತಿಯನ್ನು ರೂಪಿಸಲು ನಾವು ಮುಂದಾಗಿದ್ದೇವೆ ಎಂದು ಅವರು ಹೇಳಿದರು.
ಹೊಸ ಪ್ರವಾಸೋದ್ಯಮ ನೀತಿ
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿದಂತೆ ಒಟ್ಟು 324 ಕಿ.ಮೀ. ಉದ್ದದ ಕರಾವಳಿ ಪ್ರದೇಶದ ಸಮುದ್ರ ತೀರ, ಸಾಂಸ್ಕೃತಿಕ ಪರಂಪರೆ ಹಾಗೂ ಐತಿಹಾಸಿಕ ತಾಣಗಳನ್ನು ವಿಶ್ವಮಟ್ಟದ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಹೊಸ ಪ್ರವಾಸೋದ್ಯಮ ನೀತಿಯನ್ನು ರೂಪಿಸಲಾಗಿದೆ. ಈ ನೀತಿಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ದಸರಾ ನಮ್ಮ ಪರಂಪರೆಯ ಹೆಮ್ಮೆ
ದಸರಾ ಕೇವಲ ಆಚರಣೆಯಲ್ಲ, ನಮ್ಮ ಪರಂಪರೆಯ ಹೆಮ್ಮೆ. ಆರ್ಥಿಕತೆಯ ಚಕ್ರ, ಒಗ್ಗಟ್ಟಿನ ಒಂದು ಸಂಕೇತ. ಮೈಸೂರಿನ ಚಾಮುಂಡಿ ದಸರಾ ಇಡೀ ನಾಡಿನ ಹಬ್ಬ. ಇಲ್ಲಿನ ಮಹಾಲಕ್ಷ್ಮಿಯ ದಸರಾ ಕರಾವಳಿಯಯ ಹಬ್ಬವಾಗಿದೆ.
ಸೌಹಾರ್ದತೆಯ ಸಮಾಜ ಕಟ್ಟೋಣ
ನಾವು ಜಾತಿ, ಧರ್ಮವನ್ನು ಮೀರಿ, ಮಾನವೀಯತೆಯ ಸೌಹಾರ್ದತೆಯ ಸಮಾಜವನ್ನು ಕಟ್ಟುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕರೆ ನೀಡಿದ ಮುಖ್ಯಮಂತ್ರಿ, ಕರಾವಳಿಯ ಪರಂಪರೆ ಎಲ್ಲರಿಗೂ ಮಾದರಿ ಎಂದರು.
ದಸರಾ ರಾಜ್ಯದ ಏಳು ಕೋಟಿ ಜನರ ಹಬ್ಬ: ಸಚಿವ ರಿಜ್ವಾನ್ ಅರ್ಷದ್
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಹಾಗು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್, ಮಾತನಾಡಿ, ದಸರಾ ನಮ್ಮ ನಾಡಿನ ಹಬ್ಬ, ಇದು ರಾಜ್ಯದ ಏಳು ಕೋಟಿ ಜನರ ಹಬ್ಬ. ಜಾತಿ, ಧರ್ಮ, ಮತ ಬೇಧ ಮರೆತು ಆಚರಿಸುವ ಎಲ್ಲರ ಹಬ್ಬ ದಸರಾ. ದಸರಾ ಅನ್ಯಾಯದ ಮೇಲೆ ನ್ಯಾಯದ ವಿಜಯದ ಹಬ್ಬ, ಕೆಟ್ಟವರ ಮೇಲೆ ಒಳ್ಳೆಯವರ ವಿಜಯದ ಹಬ್ಬ. ಅಜ್ಞಾನದ ಮೇಲೆ ಜ್ಞಾನದ ವಿಜಯದ ಹಬ್ಬ ಎಂದರು.
ಮೊಗವೀರರು ಕಷ್ಟಜೀವಿಗಳು...
ಮೊಗವೀರರು ಕಷ್ಟಜೀವಿಗಳು, ಅದರಲ್ಲೂ ಮಹಿಳೆಯರು ಪಡುವ ಕಷ್ಟ ಅಷ್ಟಿಷ್ಟಲ್ಲ. ನಿಮ್ಮ ಸಮಾಜವಿಲ್ಲದೆ ಕರ್ನಾಟಕದ ಇಡೀ ಸಮಾಜವನ್ನು ಕಟ್ಟಲು ಸಾಧ್ಯವಿಲ್ಲ. ಕರ್ನಾಕಟದ ಸಂಸ್ಕೃತಿ, ಪರಂಪರೆಯಲ್ಲಿ ಮೊಗವೀರ ಸಮಾಜದ ಕೊಡುಗೆ ಮಹತ್ವದ್ದು. ಪ್ರತಿನಿತ್ಯ ಹೋರಾಟದ ಬದುಕು ಸಾಗಿಸುತ್ತಿರುವ ಮೊಗವೀರರು, ಎಲ್ಲರಿಗೂ ಮಾದರಿ ಎಂದರು.
ಗಣ್ಯಾತಿಗಣ್ಯರ ಭಾಗಿ
ಆರೋಗ್ಯ ಸಚಿವ ಯು.ಟಿ.ಖಾದರ್, M.A.ಗಫೂರ್, ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ವಿಧಾನಸಭೆಯ ಉಪಸಭಾಧ್ಯಕ್ಷ ಮಾಂಕಾಳ್ ವೈದ್ಯ, ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶಪಾಲ್ ಸುವರ್ಣ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಂಜುನಾಥ್ ಭಂಡಾರಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಕಿಶನ್ ಹೆಗ್ಡೆ, ಐವನ್ ಡಿಸೋಜ, ಮಂಜುನಾಥ್ ಪೂಜಾರಿ, ಗೋಪಾಲ ಪೂಜಾರಿ, ದಿನೇಶ್ ಹೆಗ್ಡೆ, ಲಾಲಾಜಿ ಆರ್.ಮೆಂಡನ್, ಪ್ರಸಾದ್ ರಾಜ್ ಕಾಂಚನ್, ಅಶೋಕ್ ಕುಮಾರ್ ಕೊಡವೂರು, ಆನಂದ್ ಸಿ.ಕುಂದರ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಉಡುಪಿ-ಉಚ್ಚಿಲ ದಸರಾ ಸಮಿತಿಯ ಅಧ್ಯಕ್ಷ ವಿನಯ ಕರ್ಕೇರ, ಶರಣ್ ಕುಮಾರ್ ಮಟ್ಟು, ಗಿರಿಧರ ಸುವರ್ಣ, ಕವಿತಾ ಶರತ್, ಸಂಧ್ಯಾದೀಪ್ ಸುನಿಲ್, ಸುಗುಣ ಕರ್ಕೇರ, ವೇದಪ್ರಕಾಶ್ ಶ್ರೀಯಾನ್, ಉದಯಕುಮಾರ್ ಹಟ್ಟಿಯಂಗಡಿ, ಸತೀಶ್ ಅಮೀನ್ ಬೆಣ್ಣೆಕುದ್ರು, ರವೀಶ್ ಮೊದಲಾದವರು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿಎಂರನ್ನು ಅಭಿನಂದಿಸಿದ ಡಾ.ಜಿ.ಶಂಕರ್
ದಸರಾ ರೂವಾರಿ ನಾಡೋಜ ಡಾ. ಜಿ. ಶಂಕರ್ ಅವರು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ, ತುಳು ಭಾಷೆಗೆ ಕರ್ನಾಟಕದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯ ಮಾನ್ಯತೆ ನೀಡಿರುವುದಕ್ಕೆ ಮುಖ್ಯಮಂತ್ರಿ ಹಾಗು ಸಚಿವರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಮುಖ್ಯಮಂತ್ರಿಗೆ ದೇವಳದ ವತಿಯಿಂದ ಅಭಿನಂದನೆ
ತುಳು ಭಾಷೆಗೆ ಎರಡನೇ ಸ್ಥಾನಮಾನ ನೀಡಿದ್ದಕ್ಕೆ ಹಾಗು ಕರಾವಳಿಯ ಅಭಿವೃದ್ಧಿಯ ಸಂಕಲ್ಪವನ್ನು ಕೈಗೊಂಡಿರುವುದಕ್ಕಾಗಿ ಈ ಸಂದರ್ಭ ಮುಖ್ಯಮಂತ್ರಿಯವರನ್ನು ದೇವಳದ ವತಿಯಿಂದ ಅಭಿನಂದಿಸಲಾಯಿತು.
ದೇವರ ದರ್ಶನ ಪಡೆದ CM
ಇದಕ್ಕೂ ಮುನ್ನ ಡಿ.ಕೆ. ಶಿವಕುಮಾರ್ ಅವರು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ವನದುರ್ಗೆಯರ ದರ್ಶನ ಪಡೆದರು.
ಸಮಸ್ಯೆ ಪರಿಹಾರಕ್ಕೆ ಮನವಿ
ಇದೇ ವೇಳೆ ಉಡುಪಿ ಮತ್ತು ದ.ಕ. ಜಿಲ್ಲೆಯ ಮೀನುಗಾರಿಕಾ ಬಂದರು ಹಾಗೂ ಮೀನುಗಾರರ, ಮಹಿಳಾ ಮೀನುಗಾರರ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಮುಖ್ಯಮಂತ್ರಿಗೆ ಡಾ. ಜಿ. ಶಂಕರ್ ಹಾಗು ಇನ್ನಿತರ ಮುಖಂಡರು ಮನವಿ ಪತ್ರ ಸಲ್ಲಿಸಿದರು.
.jpg)




















