ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ಶನಿವಾರ ಚಾಲಕನ ನಿಯಂತ್ರಣ ತಪ್ಪಿದ ಈರುಳ್ಳಿ ತುಂಬಿದ್ದ ಲಾರಿಯೊಂದು ಪಲ್ಟಿಯಾಗಿದೆ. ಅಪಘಾತದಲ್ಲಿ ಲಾರಿ ಚಾಲಕ ಮತ್ತು ಕ್ಲೀನರ್ ಗಾಯಗೊಂಡಿದ್ದು, ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆದರೆ, ಅಪಘಾತದ ಬಳಿಕ ಸ್ಥಳಕ್ಕೆ ಧಾವಿಸಿದ ಜನರ ವರ್ತನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಗಾಯಗೊಂಡ ಚಾಲಕ ಮತ್ತು ಕ್ಲೀನರ್ಗೆ ನೆರವಾಗುವ ಬದಲು, ಲಾರಿಯಲ್ಲಿದ್ದ ಈರುಳ್ಳಿ ಚೀಲಗಳನ್ನು ಹೊತ್ತೊಯ್ಯಲು ಜನರು ಮುಗಿಬಿದ್ದಿದ್ದಾರೆ. ಗಾಯಾಳುಗಳ ನೆರವಿಗೆ ಧಾವಿಸದೆ ಈರುಳ್ಳಿ ದೋಚಲು ಮುಂದಾದ ಜನರ ವರ್ತನೆ ಮಾನವೀಯತೆಯನ್ನೇ ಪ್ರಶ್ನಿಸುವಂತಾಗಿದೆ.
ಅಪಘಾತ ಸಂಭವಿಸಿದ ಕೇವಲ 15ರಿಂದ 20 ನಿಮಿಷಗಳಲ್ಲೇ ಲಾರಿಯಲ್ಲಿದ್ದ ಸಂಪೂರ್ಣ ಈರುಳ್ಳಿ ಲೋಡ್ ಖಾಲಿಯಾಗಿದೆ ಎನ್ನಲಾಗಿದೆ. ಜನರು ಚೀಲಗಳಲ್ಲಿ ಈರುಳ್ಳಿ ತುಂಬಿಕೊಂಡು ತೆರಳಿದ್ದು, ಗಾಯಾಳುಗಳ ಸಂಕಷ್ಟಕ್ಕಿಂತ ಈರುಳ್ಳಿ ಹೊತ್ತೊಯ್ಯುವುದಕ್ಕೇ ಹೆಚ್ಚಿನ ಆದ್ಯತೆ ನೀಡಿದ ಘಟನೆ ಸ್ಥಳೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವಿಷಯ ತಿಳಿದು ಮಾನ್ವಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
