ಉಚ್ಚಿಲ: ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಐದನೇ ವರ್ಷದ ‘ಉಡುಪಿ ಉಚ್ಚಿಲ ದಸರಾ–2026’ ಮಹೋತ್ಸವದ ಆರನೇ ದಿನದ ಅಂಗವಾಗಿ ಶುಕ್ರವಾರ ಆಯೋಜಿಸಲಾದ ಮುದ್ದುಮಕ್ಕಳ ಶ್ರೀ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ ಗಮನ ಸೆಳೆಯಿತು.
ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ಮುಖ್ಯ ವೇದಿಕೆಯಲ್ಲಿ ನಡೆದ ಸ್ಪರ್ಧೆಯಲ್ಲಿ 3ರಿಂದ 9 ವರ್ಷ ವಯೋಮಿತಿಯ 76 ಮಕ್ಕಳು ಭಾಗವಹಿಸಿ ಶಾರದಾ ಮಾತೆಯ ವೇಷದಲ್ಲಿ ಕಂಗೊಳಿಸಿದರು. ಪುಟಾಣಿಗಳ ಆಕರ್ಷಕ ವೇಷಭೂಷಣ ಹಾಗೂ ಮುದ್ದಾದ ಅಭಿನಯ ನೆರೆದಿದ್ದವರ ಮನಸೂರೆಗೊಂಡಿತು.
ಸ್ಪರ್ಧೆಯಲ್ಲಿ ಮಲ್ಪೆಯ ತಪಸ್ಯ ನಾಗಾಪ್ರಸಾದ್ ಪ್ರಥಮ ಸ್ಥಾನ ಪಡೆದು ₹8,000 ನಗದು ಬಹುಮಾನ ಗೆದ್ದುಕೊಂಡರು. ಕಿದಿಯೂರಿನ ಸಾನಿಕ ದ್ವಿತೀಯ ಸ್ಥಾನ ಪಡೆದು ₹6,000 ಹಾಗೂ ಸುರತ್ಕಲ್ನ ಪ್ರಶ್ವಿ ಎಸ್. ಪುತ್ರನ್ ತೃತೀಯ ಸ್ಥಾನ ಪಡೆದು ₹4,000 ನಗದು ಬಹುಮಾನ ಗಳಿಸಿದರು. ಗಣ್ಯರ ಸಮ್ಮುಖದಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಿಜೇತೆಯಾದ ಮಲ್ಪೆಯ ಕು.ತಪಸ್ಯ ನಾಗಾಪ್ರಸಾದ್ ಹಾಗೂ ಅವರ ಕುಟುಂಬದವರಿಗೆ ದಸರಾ ರೂವಾರಿ ನಾಡೋಜ ಡಾ. ಜಿ. ಶಂಕರ್ ಹಾಗು ಇತರ ಗಣ್ಯರು ಶುಭಾಶಯಗಳನ್ನು ಸಲ್ಲಿಸಿದರು.
ಈ ಸಂದರ್ಭ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಸುವರ್ಣ, ಉಡುಪಿ ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನೀಲ್, ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಕವಿತಾ ಶರತ್, ದ.ಕ. ಮೊಗವೀರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಜತೆ ಕಾರ್ಯದರ್ಶಿ ಸುಜಿತ್ ಸಾಲ್ಯಾನ್, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂದರ್, ನಾಲ್ಕುಪಟ್ಣ ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಕಾಂಚನ್, ಮಹಿಳಾ ಸಂಘ ಅಧ್ಯಕ್ಷೆ ಸುಗುಣ ಕರ್ಕೇರ, ಪ್ರಬಂಧಕ ಸತೀಶ್ ಅಮೀನ್ ಪಡುಕರೆ ಮತ್ತಿತರರು ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಉಳಿದ ಎಲ್ಲ ಮಕ್ಕಳಿಗೂ ತಲಾ ₹1,000 ನೀಡಿ ಪ್ರೋತ್ಸಾಹಿಸಲಾಯಿತು. ಮಕ್ಕಳ ಉತ್ಸಾಹಭರಿತ ಭಾಗವಹಿಸುವಿಕೆ ಹಾಗೂ ಶಾರದಾ ಮಾತೆಯ ಭಕ್ತಿಭಾವದ ರೂಪಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.


