ಉತ್ತರ ಪ್ರದೇಶದ 75ರ ಹರೆಯದ ವ್ಯಕ್ತಿಯೊಂದಿಗೆ 30ರ ಯುವತಿ ಲವ್ ಕಹಾನಿ! ನಿಶ್ಚಿತಾರ್ಥದ ಫೋಟೋ ವೈರಲ್

ಲಕ್ನೋ: ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಎಂಬ ಮಾತಿಗೆ ಸಾಕ್ಷಿಯಂತಿರುವ ವಿಚಿತ್ರ ಪ್ರೇಮಕಥೆಯೊಂದು (UP Love Story) ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ 30 ವರ್ಷದ ಯುವತಿ ಹಾಗೂ 75 ವರ್ಷದ ವೃದ್ಧನ ಪ್ರೇಮಕಥೆ ಎಲ್ಲರ ಗಮನ ಸೆಳೆದಿದೆ.

ಬರೋಬ್ಬರಿ 45 ವರ್ಷಗಳ ವಯಸ್ಸಿನ ಅಂತರವಿರುವ ಈ ಜೋಡಿಯ ನಿಶ್ಚಿತಾರ್ಥದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಕುತೂಹಲ ಮೂಡಿಸಿವೆ.

ಔರೈಯಾ ಜಿಲ್ಲೆಯ ರೀನಾ (Content Creator Reena) ಎಂಬ 30 ವರ್ಷದ ಯುವತಿ ಸೋಷಿಯಲ್‌ ಮೀಡಿಯಾದಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿದ್ದಾರೆ. ಈಕೆ 75 ವರ್ಷದ ರಾಮ್ ಸಾಗರ್ ಎಂಬ ವ್ಯಕ್ತಿಯನ್ನ ಮದ್ವೆಯಾಗುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಈ ಜೋಡಿ ಸುಮಾರು 6 ದಿನಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದೆ ಎನ್ನಲಾಗಿದ್ದು, ಸಮಾರಂಭದ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆದ ಬಳಿಕ ಇವರ ಪ್ರೇಮಕಥೆ ಬಗ್ಗೆ ನೆಟ್ಟಿಗರಲ್ಲಿ ಕುತೂಹಲ ಮೂಡಿಸಿದೆ.

ಇವರಿಬ್ಬರ ನಡುವಿನ 45 ವರ್ಷಗಳ ವಯಸ್ಸಿನ ಅಂತರವನ್ನ ಕಂಡು ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ಹುಟ್ಟಿಕೊಂಡಿವೆ. ಆದರೆ, ಈ ಎಲ್ಲ ಚರ್ಚೆಗಳ ನಡುವೆಯೂ ರೀನಾ ತಮ್ಮ ನಿರ್ಧಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ರಾಮ್ ಸಾಗರ್ ಜೊತೆಗೆ ತಾವು ಸಂತೋಷವಾಗಿದ್ದು, ವಯಸ್ಸಿನ ಅಂತರ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿಲ್ಲ ಎಂದು ಟೀಕಿಸುವವರಿಗೆ ತಿರುಗೇಟು ನೀಡಿದ್ದಾರೆ.

ನಿಶ್ಚಿತಾರ್ಥದ ಚಿತ್ರಗಳು ವೈರಲ್ ಆಗುತ್ತಿದ್ದಂತೆ ಈ ಜೋಡಿಯ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾಗಿವೆ. ಆದರೆ, ರೀನಾ ಮಾತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬಂತೆ ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರೆ.

1 ವರ್ಷದ ಹಿಂದೆ ಪರಿಚಯ

ಭಾವಿ ದಂಪತಿಗಳು ಹೇಳಿಕೊಂಡಿರುವ ಪ್ರಕಾರ, ಇವರಿಬ್ಬರು ಒಂದು ವರ್ಷದ ಹಿಂದೆ ಪರಿಚಯವಾಗಿದ್ದಾರೆ. ನಂತರದ ದಿನಗಳಲ್ಲಿ ಪರಿಚಯ ಪ್ರೀತಿಗೆ ತಿರುಗಿದ್ದು, ಇದೀಗ ಸಂಬಂಧ ಮದುವೆಯ ಹಂತಕ್ಕೆ ತಲುಪಿದೆ. ಇತ್ತೀಚೆಗೆ ನಿಶ್ಚಿತಾರ್ಥವೂ ನಡೆದಿದ್ದು, ಮುಂದಿನ ಹಂತವಾಗಿ ವಿವಾಹಕ್ಕೆ ಸಿದ್ಧತೆ ನಡೆಯುತ್ತಿದೆ. ಆದ್ರೆ ವಿವಾಹದ ನಿಖರ ದಿನಾಂಕವನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ವರದಿಗಳು ತಿಳಿಸಿವೆ.