ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್, ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ತಪಿತಸ್ಥರನ್ನು ಮುಂದಿನ ಆರು ತಿಂಗಳಲ್ಲಿ ಜೈಲಿಗೆ ಕಳುಹಿಸುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಇತ್ತೀಚಿನ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿರುವಂತೆಯೇ ಖರ್ಗೆ ಮತ್ತು ಸಂಸದ ತೇಜಸ್ವಿ ಸೂರ್ಯ ನಡುವೆ ರಾಜಕೀಯ ವಾಕ್ಸಮರ ಆರಂಭವಾಗಿದೆ.
ಕೇರಳದ ಎರ್ನಾಕುಲಂನಲ್ಲಿ ನಡೆದ ಮುಸ್ಲಿಂ ಯೂತ್ ಲೀಗ್ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿದ್ದ ಖರ್ಗೆ, ಪತ್ರಕರ್ತೆ ಗೌರಿ ಲಂಕೇಶ್, ಸಂಶೋಧಕ ಎಂ.ಎಂ.ಕಲಬುರ್ಗಿ ಹಾಗೂ ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪನ್ಸಾರೆ ಅವರ ಹತ್ಯೆ ಪ್ರಕರಣಗಳಲ್ಲಿ ಸಂಘ ಪರಿವಾರಕ್ಕೆ ಸಂಬಂಧಿಸಿದ ಜಾಲಗಳ ನಂಟಿದೆ ಎಂದು ಆರೋಪಿಸಿದ್ದರು. ಕರ್ನಾಟಕದಲ್ಲಿ ಮುಂದಿನ ಆರು ತಿಂಗಳಲ್ಲಿ ಎಲ್ಲಾ ವಿಚಾರಣೆ ಪೂರ್ಣಗೊಳಿಸಿ ತಪಿತಸ್ಥರನ್ನು ಜೈಲಿಗೆ ಕಳುಹಿಸುವ ವಿಶ್ವಾಸವಿದೆ ಎಂದು ಹೇಳಿದ್ದರು.
ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ತೇಜಸ್ವಿ ಸೂರ್ಯ, ಹತ್ಯೆ ಪ್ರಕರಣಳ ವಿಚಾರಣೆಯ ಪ್ರಗತಿಯನ್ನು ಪ್ರಶ್ನಿಸಿದ್ದರು. ಪರಿಣಾಮಕಾರಿ ಕಾನೂನು ಕ್ರಮಗಳನ್ನು ಖಚಿತಪಡಿಸುವ ಬದಲು ಸಚಿವರು ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ತಮ್ಮ ಆರೋಪಗಳಿಗೆ ಸಂಬಂಧಿಸಿದ ವ್ಯಕ್ತಿಗಳನ್ನು ಗುರುತಿಸಿ, ಪೂರಕ ಸಾಕ್ಷ್ಯಗಳನ್ನು ಮೂರು ದಿನಗಳೊಳಗೆ ಒದಗಿಸಬೇಕು, ಇಲ್ಲವಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸವಾಲು ಹಾಕಿದ್ದರು.
ಇದಕ್ಕೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಆರ್ ಎಸ್ ಎಸ್ ನ್ನು ಸಮರ್ಥಿಸಿಕೊಳ್ಳುವ ಆತುರದಲ್ಲಿ ತೇಜಸ್ವಿ ಸೂರ್ಯ ಸಂಘಟನೆಯ ಪಾರದರ್ಶಕತೆಗೆ ಸಂಬಂಧಿಸಿದ ಮೂಲಭೂತ ಪ್ರಶ್ನೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆರ್ ಎಸ್ ಎಸ್ ನ್ನು ಸಮರ್ಥಿಸಿಕೊಳ್ಳಲು ನೀವು ನಡೆಸುತ್ತಿರುವ ಹತಾಶ ಪ್ರಯತ್ನ ಅದರ ಅತಿದೊಡ್ಡ ದ್ವಂದ್ವ ನೀತಿಯನ್ನು ಬಯಲು ಮಾಡಿದೆ. ಎಲ್ಲದರ ಶ್ರೇಯಸ್ಸನ್ನೂ ತನ್ನದಾಗಿಸಿಕೊಳ್ಳುತ್ತದೆ. ಆದರೆ ಯಾವುದರ ಹೊಣೆಗಾರಿಕೆಯನ್ನೂ ಹೊರುವುದಿಲ್ಲ ಎಂದಿದ್ದಾರೆ.
ಗೌರಿ ಲಂಕೇಶ್, ಕಲಬುರ್ಗಿ, ದಾಬೋಲ್ಕರ್ ಮತ್ತು ಪನ್ಸಾರೆ ಹತ್ಯೆ ಪ್ರಕರಣಗಳಲ್ಲಿ ವಿಶೇಷ ತನಿಖಾ ತಂಡಗಳು ಹಾಗೂ ಕೇಂದ್ರೀಯ ತನಿಖಾ ದಳ ನಡೆಸಿದ ತನಿಖೆಗಳು, ಆರೋಪಿಗಳು ಆರ್ ಎಸ್ ಎಸ್ ನೊಂದಿಗೆ ನಂಟು ಹೊಂದಿರುವ ರಹಸ್ಯ ಜಾಲಗಳ ಭಾಗವಾಗಿರುವುದನ್ನು ಪತ್ತೆ ಹಚ್ಚಿವೆ ಎಂದು ಖರ್ಗೆ ಹೇಳಿದ್ದಾರೆ.
ಆರ್ ಎಸ್ ಎಸ್ ಸಂಘಟನಾ ರಚನೆಯೇ ಅಗತ್ಯವಿದ್ದಾಗ ವ್ಯಕ್ತಿಗಳನ್ನು ತನ್ನೊಂದಿಗೆ ಗುರುತಿಸಿಕೊಳ್ಳಲು ಮತ್ತು ವಿವಾದಗಳು ಅಥವಾ ಅಪರಾಧ ತನಿಖೆಗಳು ಎದುರಾದಾಗ ಅವರೊಂದಿಗೆ ಸಂಬಂಧವಿಲ್ಲ ಎಂದು ಹೇಳಿಕೊಳ್ಳಲು ಅವಕಾಶ ಕಲ್ಪಿಸುತ್ತದೆ ಎಂದು ಖರ್ಗೆ ಆರೋಪಿಸಿದ್ದಾರೆ. ಆರ್ ಎಸ್ ಎಸ್ ನಲ್ಲಿ ಔಪಚಾರಿಕ ಸದಸ್ಯತ್ವ ನೋಂದಣಿ ವ್ಯವಸ್ಥೆ, ಸಾರ್ವಜನಿಕವಾಗಿ ಪರಿಶೀಲಿಸಬಹುದಾದ ಸದಸ್ಯರ ಪಟ್ಟಿ ಹಾಗೂ ನೋಂದಾಯಿತ ಕಾನೂನುಬದ್ಧ ಅಸ್ತಿತ್ವ ಇಲ್ಲದಿರುವುದನ್ನು ಅವರು ಪ್ರಶ್ನಿಸಿದ್ದಾರೆ.
ಸಂಘಟನೆಯ ಹಣಕಾಸಿನ ವ್ಯವಹಾರಗಳ ಬಗ್ಗೆಯೂ ಖರ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಭಗವಾದ್ವಜದ ಮುಂದೆ ಗುರುದಕ್ಷಿಣಿ ಸಂಗ್ರಹಿಸುವ ಆರ್ ಎಸ್ ಎಸ್ ತನ್ನ ಒಟ್ಟಾರೆ ಹಣಕಾಸಿನ ಲೆಕ್ಕಪತ್ರಗಳನ್ನು ಸಾರ್ವಜನಿಕಗೊಳಿಸುವುದಿಲ್ಲ ಎಂದು ಆರೋಪಿಸಿದ್ದಾರೆ. ಆರ್ ಎಸ್ ಎಸ್ ತನ್ನ ಪದಾಧಿಕಾರಿಗಳು ಯಾರು ಎಂಬುದನ್ನು ಗುರುತಿಸಬೇಕು, ಹಣಕಾಸಿನ ದಾಖಲೆಗಳನ್ನು ಬಹಿರಂಗಪಡಿಸಬೇಕು ಹಾಗೂ ಸಾರ್ವಜನಿಕವಾಗಿ ಪರಿಶೀಲನೆಗೆ ಒಳಪಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ನಿಮ್ಮ ಆರ್ ಎಸ್ ಎಸ್ ನನ್ನು ನೋಂದಣಿ ಮಾಡಿಸಿ, ಅದರ ನೋಂದಣಿ ಶುಲ್ಕವನ್ನು ನಾನೇ ಕಟ್ಟುತ್ತೇನೆ. ಈ ಸವಾಲನ್ನು ಸ್ವೀಕರಿಸುವ ಧೈರ್ಯ ನಿಮಗಿದೆಯೇ ನೋಡೋಣಾ ಎಂದು ಖರ್ಗೆ ಸವಾಲು ಹಾಕಿದ್ದಾರೆ.
