ಶ್ರೀಮಂತರ ಮೊಬೈಲ್ ಸಂಖ್ಯೆ ಒದಗಿಸಿ ಬೆದರಿಕೆ ಕೃತ್ಯಕ್ಕೆ ಸಹಕಾರ; ಎರಡು ಮೊಬೈಲ್ ಫೋನ್ ವಶಕ್ಕೆ
ಉಡುಪಿ: ಭೂಗತ ಪಾತಕಿ ಹೇಮಂತ್ ಪೂಜಾರಿ ಹೆಸರಿನಲ್ಲಿ ಉಡುಪಿ ಜಿಲ್ಲೆಯ ವಿವಿಧೆಡೆ ಉದ್ಯಮಿಗಳಿಗೆ ಅಂತರರಾಷ್ಟ್ರೀಯ ದೂರವಾಣಿ ಸಂಖ್ಯೆಗಳಿಂದ ಕರೆ ಮಾಡಿ ಕೋಟ್ಯಂತರ ರೂಪಾಯಿ ಸುಲಿಗೆಗೆ ಬೇಡಿಕೆ ಇಟ್ಟು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಶ್ರೀಮಂತರ ಮೊಬೈಲ್ ಸಂಖ್ಯೆಗಳನ್ನು ಒದಗಿಸಿ ಸಹಕರಿಸಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಸಾಂತೂರು ಗ್ರಾಮದ ಹರೀಶ್ ಪೂಜಾರಿ (45) ಎಂದು ಗುರುತಿಸಲಾಗಿದೆ.
ಮುದರಂಗಡಿ ಡೇವಿಡ್ ಡಿಸೋಜಾ ಅವರ ಕೊಲೆಯ ಬಳಿಕ ಭೂಗತ ಪಾತಕಿ ಹೇಮಂತ್ ಪೂಜಾರಿ ಉಡುಪಿ ಜಿಲ್ಲೆಯ ಪಡುಬಿದ್ರೆ, ಮಣಿಪಾಲ, ಕಾಪು ಮತ್ತು ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯವಹಾರ ನಡೆಸುತ್ತಿರುವ ಉದ್ಯಮಿಗಳನ್ನು ಗುರಿಯಾಗಿಸಿಕೊಂಡಿದ್ದ. ಅಂತರರಾಷ್ಟ್ರೀಯ ದೂರವಾಣಿ ಸಂಖ್ಯೆಗಳಿಂದ ಕರೆ ಮಾಡಿ ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಹಣ ನೀಡದಿದ್ದಲ್ಲಿ ಶಿರ್ವದಲ್ಲಿ ಕೊಲೆಯಾದ ಡೇವಿಡ್ ಡಿಸೋಜಾ ಅವರ ರೀತಿಯಲ್ಲೇ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದ. ಈ ಸಂಬಂಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ಎಂಟು ಪ್ರಕರಣಗಳು ದಾಖಲಾಗಿದ್ದವು.
ಈ ಪೈಕಿ ಶಿರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಹೇಮಂತ್ ಪೂಜಾರಿಗೆ ಶ್ರೀಮಂತರ ಮೊಬೈಲ್ ಸಂಖ್ಯೆಗಳನ್ನು ಒದಗಿಸುತ್ತಿದ್ದ ಹರೀಶ್ ಪೂಜಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ವಿಚಾರಣೆ ವೇಳೆ ಪ್ರಕರಣದ ದೂರುದಾರರ ಮೊಬೈಲ್ ಸಂಖ್ಯೆಯನ್ನು ಹೇಮಂತ್ ಪೂಜಾರಿಗೆ ನೀಡಿ, ಕೃತ್ಯಕ್ಕೆ ಸಹಕರಿಸಿರುವುದಾಗಿ ಹರೀಶ್ ಪೂಜಾರಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 2ರಂದು ಆತನನ್ನು ಬಂಧಿಸಿದ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
