ಹಿಟ್‌ ಆ್ಯಂಡ್​​ ರನ್‌ ಬೇಡ; ನಾನೂ ಎಲ್ಲವನ್ನು ಬಿಟ್ಟು ನಿಂತರೆ ನಿಮಗೆ ತುಂಬಾ ಕಷ್ಟವಾಗುತ್ತೆ: HDK ವಿರುದ್ಧ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ಇಂದು ಬೆಳಗ್ಗೆಯಿಂದಲೇ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿರುವ ಪ್ರಿಯಾಂಕ್ ಖರ್ಗೆ ಅವರು, ಇದೀಗ ಮತ್ತೊಂದು ಹೆಜ್ಜೆ ಮುಂದೆ, ಜಾತಿ ಬಲದಿಂದಲೇ ಅವರು ಸಿಎಂ ಆಗಿದ್ದು ಎಂದು ತಿರುಗೇಟು ನೀಡಿದರು.

ಕುಮಾರಸ್ವಾಮಿ ಅವರು ತಮ್ಮ ಬಳಿ ಏನಾದ್ರೂ ಸಾಕ್ಷ್ಯಗಳಿದ್ದರೆ ಕೊಡಲಿ. ಹಿಟ್‌ ಆ್ಯಂಡ್​​ ರನ್‌ ಬೇಡ. ನಾನೂ ಎಲ್ಲವನ್ನು ಬಿಟ್ಟು ನಿಂತರೆ ನಿಮಗೆ ತುಂಬಾ ಕಷ್ಟವಾಗುತ್ತೆ ಎಂದು ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಎಲ್ಲಾ ಆಯಾಮಗಳಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೇಂದ್ರ ಸಚಿವ ಎಚ್‌ಡಿಕೆಗೆ ಏಕೆ ಇಷ್ಟು ಆತುರ ಏಕೆ? ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಕೇಸ್‌ ಬಗ್ಗೆಯೂ ಎಚ್‌ಡಿಕೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆದರೆ ಮೋದಿ ಸರ್ಕಾರವೇ ಪೊಲೀಸರಿಗೆ ಮೆಡಲ್ ಕೊಟ್ಟಿದೆ. ಇದಕ್ಕೆ ಅವರು ಏನು ಹೇಳುತ್ತಾರೆ? ಎಂದವರು ಪ್ರಶ್ನಿಸಿದರು.

ನಿಮ್ಮ ಕೆಟ್ಟ ಕೆಲಸಗಳಿಗೆ ಪುರಸ್ಕಾರ ಸಿಗಲ್ಲ, ಅಂಟಿರುವ ಕಳಂಕ ಹೋಗಲ್ಲ. ಸತ್ಯಾಂಶ ಹೊರಬರುತ್ತೆ ಕಾಯಿರಿ. ಸ್ಟಿಂಗ್ ಕೇಸ್‌ನಲ್ಲಿ ಪೊಲೀಸರು ಯಾವುದೇ ನಿಮಯ ಉಲ್ಲಂಘಿಸಿಲ್ಲ. ಯಾವುದೇ ಸುಳ್ಳು ಮಾಹಿತಿಯನ್ನು ಸೋರಿಕೆ ಮಾಡಿಲ್ಲ. ಎಲ್ಲರೂ ನಿಯಮಗಳಡಿಯೇ ಕೆಲಸ ಮಾಡಬೇಕಾಗುತ್ತೆ. ಕೇಂದ್ರ ಸಚಿವರಾಗಲಿ, ಯಾರೇ ಆಗಲಿ ಅಗತ್ಯವಿದ್ದರೆ ವಿಚಾರಣೆ ನಡೆಸ್ತೇವೆ. ಸಣ್ಣ ಸಾಕ್ಷ್ಯ ಸಿಕ್ಕದರೂ ಯಾರನ್ನೇ ಆಗಲಿ ಕರೆದು ವಿಚಾರಣೆ ಮಾಡುತ್ತೇವೆ. ಸ್ಟಿಂಗ್ ಪ್ರಕರಣದಲ್ಲೂ ಅವಾರ್ಡ್ ಸಿಗುತ್ತೆ ಎಂದು ಪ್ರಿಯಾಂಕ್​​ ಹೇಳಿದ್ದಾರೆ.

ಬಂಧಿತ ರಿತೇಶ್ ಪಾಂಡೆಗೆ ಮೊಬೈಲ್ ಖರೀದಿಸಲು ಹೇಳಿದ್ದು ಯಾರು? ಎಚ್‌ಡಿಕೆ ನಿವಾಸದಲ್ಲಿ ರಿತೇಶ್‌ ಬಂಧಿಸಲಾಗಿದೆ ಎಂದು ನಾವು ಹೇಳಿಲ್ಲ. ರಿತೇಶ್ ಪಾಂಡೆ ಜೊತೆ ಏನು ನಂಟಿದೆ ಎಂದು ಎಚ್‌ಡಿಕೆ ಹೇಳಬೇಕು ಎಂದರು.

ಕುಮಾರಸ್ವಾಮಿಯವರನ್ನು ಟಚ್ ಮಾಡುತ್ತೇವೆಂದು ನಾವು ಹೇಳಿದ್ದೇವಾ? ಅವರ ಹೇಳಿಕೆಯಲ್ಲಿ ಕಾಮನ್‌ಸೆನ್ಸ್‌, ಲಾಜಿಕ್ ಇದೆಯಾ? ಇಡೀ ಕೇಂದ್ರದಲ್ಲಿ ಕುಮಾರಸ್ವಾಮಿ ಒಬ್ಬರು ಮಾತ್ರ ಸಚಿವರಾಗಿದ್ದಾರಾ? ಎಂದು ಪ್ರಿಯಾಂಕ್​ ಖರ್ಗೆ​ ಪ್ರಶ್ನಿಸಿದ್ದಾರೆ.