ಸಮಾಜಸೇವಕ ಇಬ್ರಾಹಿಂ ಗಡಿಯಾರ್‌ಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲು ಆಗ್ರಹ; ‘ಅನಿವಾಸಿ ಕನ್ನಡಿಗ’ ವಿಭಾಗದಲ್ಲಿ ಆಯ್ಕೆ ಮಾಡುವಂತೆ ಸಚಿವ ಶಿವರಾಜ್ ತಂಗಡಗಿಗೆ ಮನವಿ

ಮಂಗಳೂರು: ಸಮಾಜಸೇವೆ ಹಾಗೂ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ದುಬೈಯ ಖ್ಯಾತ ಉದ್ಯಮಿ ಹಾಗು ಸಮಾಜ ಸೇವಕ ಇಬ್ರಾಹಿಂ ಗಡಿಯಾರ್ ಅವರಿಗೆ ಕರ್ನಾಟಕ ಸರ್ಕಾರದ ಈ ಬಾರಿಯ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂಬ ಕೂಗು ಜೋರಾಗಿದೆ.

ಇಬ್ರಾಹಿಂ ಗಡಿಯಾರ್ ಅವರ ಸಮಾಜಸೇವೆಯನ್ನು ಗುರುತಿಸಿ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು "ಅನಿವಾಸಿ ಕನ್ನಡಿಗ" ವಿಭಾಗದಲ್ಲಿ ನೀಡುವಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಸ್ವಾಮೀಜಿಗಳು, ಮುಸ್ಲಿಂ ಧಾರ್ಮಿಕ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಕನ್ನಡ ಸಂಸ್ಕೃತಿ ಇಲಾಖಾ ಸಚಿವ ಶಿವರಾಜ್ ತಂಗಡಗಿ ಅವರಿಗೆ ಮನವಿ ನೀಡಿ ಆಗ್ರಹಿಸಿದ್ದಾರೆ. 

ಹಲವು ವರ್ಷಗಳಿಂದ ಸಮಾಜದ ವಿವಿಧ ವರ್ಗಗಳ ಜನರಿಗೆ ನೆರವಾಗುತ್ತಾ ಸಮಾಜಮುಖಿ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಇಬ್ರಾಹಿಂ ಗಡಿಯಾರ್ ಅವರು, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮಾತ್ರವಲ್ಲದೆ ತಮ್ಮ ತವರು ಜಿಲ್ಲೆ ದಕ್ಷಿಣ ಕನ್ನಡದಲ್ಲಿಯೂ ಸಹಾಯಹಸ್ತ ಚಾಚುತ್ತಾ ಬಂದಿದ್ದಾರೆ.

ವಿದೇಶದಲ್ಲಿ ನೆಲೆಸಿದ್ದರೂ ತಾಯ್ನಾಡಿನೊಂದಿಗಿನ ನಂಟನ್ನು ಉಳಿಸಿಕೊಂಡು, ಸಮಾಜದ ವಿವಿಧ ವರ್ಗಗಳ ಜನರ ಕಷ್ಟಗಳಿಗೆ ಸ್ಪಂದಿಸುವುದು, ಅಗತ್ಯವಿರುವವರಿಗೆ ನೆರವಿನ ಹಸ್ತ ಚಾಚುವುದು ಹಾಗೂ ಜನಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾ ಬಂದಿರುವ ಇಬ್ರಾಹಿಂ ಗಡಿಯಾರ್ ಅವರ ಹಲವು ವರ್ಷಗಳ ಸೇವೆಯನ್ನು ಪರಿಗಣಿಸಿ, ಕರ್ನಾಟಕ ಸರ್ಕಾರವು ಅವರಿಗೆ "ಅನಿವಾಸಿ ಕನ್ನಡಿಗ" ವಿಭಾಗದಲ್ಲಿ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಸರಕಾರವನ್ನು ಒತ್ತಾಯಿಸಲಾಗಿದೆ. 

ಜಾತಿ, ಧರ್ಮದ ಎಲ್ಲೆಗಳನ್ನು ಮೀರಿ ಸೌಹಾರ್ದತೆ ಮತ್ತು ಮಾನವೀಯತೆಯ ನೆಲೆಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತನ್ನಿಂದ ಸಾಧ್ಯವಾದ ನೆರವು ಹಾಗೂ ಸಹಕಾರವನ್ನು ನೀಡುತ್ತಾ ಬಂದಿರುವ ಇಬ್ರಾಹಿಂ ಗಡಿಯಾರ್ ಅವರು, ಯುಎಇಯಲ್ಲಿ ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡುವುದರೊಂದಿಗೆ ಸಮಾಜಸೇವೆಯ ಮೂಲಕ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ.

ತಮ್ಮ ಹುಟ್ಟೂರಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗಡಿಯಾರದಲ್ಲಿ ‘ಗಡಿಯಾರ್ ಚಾರಿಟೇಬಲ್ ಫೌಂಡೇಶನ್’ ಸ್ಥಾಪಿಸಿರುವ ಅವರು, ಬಡ ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಸೇವೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವಾಗುವ ಉದ್ದೇಶದೊಂದಿಗೆ ಫೌಂಡೇಶನ್ ಮೂಲಕ ಸಮಾಜಸೇವೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ.

ತಾನು ಅನುಭವಿಸಿದ ಬಡತನದ ನೋವು ಮತ್ತೊಬ್ಬರ ಬದುಕಿಗೆ ಅಡ್ಡಿಯಾಗಬಾರದು ಎಂಬ ಮಾನವೀಯ ಕಾಳಜಿಯೇ ತಮ್ಮ ಸಮಾಜಸೇವೆಗೆ ಪ್ರೇರಣೆಯಾಗಿದೆ ಎಂಬ ಅವರ ಮಾತುಗಳು, ಶಿಕ್ಷಣ ಮತ್ತು ಸಮಾಜಸೇವೆಯ ಕುರಿತ ಅವರ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ.

ಜಾತಿ-ಧರ್ಮದ ಭೇದವಿಲ್ಲದೆ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಅವರ ಮಾನವೀಯ ಕಾಳಜಿ ಹಾಗೂ ತಾಯ್ನಾಡಿನ ಜನರ ಕಲ್ಯಾಣಕ್ಕಾಗಿ ಸಲ್ಲಿಸುತ್ತಿರುವ ಸೇವೆ ಗಮನಾರ್ಹವಾಗಿದೆ.

‘Gadiyar Group of Companies’ ಎಂಬ ಹೆಸರಿನಲ್ಲಿ ದುಬೈಯಲ್ಲಿ ಉದ್ಯಮವನ್ನು ಕಟ್ಟಿರುವ  ಗಡಿಯಾರ್ ಅವರ ಹೆಸರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸುವ ಮೂಲಕ ಸಮಾಜಮುಖಿ ಕಾರ್ಯಗಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಬೇಕು ಎಂಬುದು ಪ್ರಶಸ್ತಿ ನೀಡುವಂತೆ ಒತ್ತಾಯಿಸಿರುವವರ ಆಶಯವಾಗಿದೆ.