ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ (Tiger Shroff) ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ 34,000 ಹಣ, ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಸುಪಾರಿ ನೀಡಿದ್ದರು ಎಂದು ತಿಳಿದುಬಂದಿದೆ.
ಈ ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ ಕೆಲ ರೋಚಕ ಅಂಶಗಳು ಹೊರಬಿದ್ದಿವೆ. ಬಿಷ್ಣೋಯ್ ಗ್ಯಾಂಗ್ನ ಅನಿಲ್ ಪಂಡಿತ್ ಆರೋಪಿಗಳಿಗೆ 34,000 ರೂ. ಹಾಗೂ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷ ಒಡ್ಡಿ ಸುಪಾರಿ ನೀಡಿದ್ದರು ಎಂಬುದು ಬೆಳಕಿಗೆ ಬಂದಿದೆ.
ಪೊಲೀಸರಿಂದ ತಪ್ಪಿಸಿಕೊಳ್ಳಲು ವಿಭಿನ್ನ ರೀತಿಯ ಹಣಕಾಸು ವ್ಯವಹಾರ:
ಘಟನೆಗೂ ಮುನ್ನ ಆರೋಪಿಗಳಿಗೆ ಮುಂಬೈನಲ್ಲಿದ್ದಾಗ ದಿನಕ್ಕೆ 5,000 ರೂ.ಯಿಂದ 10,000 ರೂ.ವರೆಗೆ ಆನ್ಲೈನ್ ಮೂಲಕ ಹಣ ಬರುತ್ತಿತ್ತು. ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಸ್ಥಳೀಯ ಅಂಗಡಿಯಲ್ಲಿ ಅಥವಾ ಇತರೆ ವ್ಯಕ್ತಿಗಳ ಕ್ಯೂಆರ್ ಕೋಡ್ಗಳನ್ನು ಅನಿಲ್ ಪಂಡಿತ್ಗೆ ಕಳುಹಿಸಿ, ಆ ಮೂಲಕ ತಮ್ಮ ಖರ್ಚಿಗೆ ಹಣ ಪಡೆದುಕೊಳ್ಳುತ್ತಿದ್ದರು.
ತಪ್ಪಿಸಿಕೊಳ್ಳಲು ವಿಭಿನ್ನ ತಂತ್ರಗಳು:
ಗುಂಡಿನ ದಾಳಿ ನಡೆಸಿದ ಬಳಿಕ ಆರೋಪಿಗಳು ಅಂಧೇರಿ ರೈಲು ನಿಲ್ದಾಣ ತಲುಪಿ ಲೋಕಲ್ ರೈಲು ಹತ್ತಿ ಕೆಲ ನಿಲ್ದಾಣಗಳ ಬಳಿಕ ಇಳಿದುಕೊಂಡರು. ನಂತರ ಆನ್ಲೈನ್ ಟ್ಯಾಕ್ಸಿ ಮೂಲಕ ಸೂರತ್ ತಲುಪಿ, ಅಲ್ಲಿಂದ ಪುಣೆ-ಜೈಪುರ ರೈಲು ಹತ್ತಿದರು. ಪ್ರಯಾಣದ ಮಧ್ಯೆ ಪೊಲೀಸರಿಂದ ತಪ್ಪಿಸಿಕೊಳ್ಳಲು ತಮ್ಮ ಕೂದಲನ್ನು ಕತ್ತರಿಸಿ, ಬಟ್ಟೆಗಳನ್ನು ಬದಲಾಯಿಸಿಕೊಂಡಿದ್ದರು. ಕೋಟಾದಲ್ಲಿ ಅವರನ್ನು ಬಂಧಿಸಿದಾಗ ಅವರ ವೇಷಭೂಷಣವೇ ಬದಲಾಗಿತ್ತು. ಅವರ ಬಳಿ ಬಟ್ಟೆಗಳು ಮಾತ್ರ ಸಿಕ್ಕಿದ್ದು, ಯಾವುದೇ ಆಯುಧಗಳು ಪತ್ತೆಯಾಗಿಲ್ಲ. ಆಯುಧಗಳನ್ನು ಎಲ್ಲೋ ಬಿಸಾಕಿರಬಹುದು ಎಂದು ಶಂಕಿಸಲಾಗಿದೆ. ಅಲ್ಲದೆ, ಹೃತಿಕ್ ಎಂಬ ಆರೋಪಿ ಕದ್ದ ಬೈಕ್ ಅನ್ನು ವ್ಯವಸ್ಥೆ ಮಾಡಿದ್ದ ಎಂಬುದು ಗೊತ್ತಾಗಿದೆ.
ಶೂಟೌಟ್ಗೆ ಆಯುಧಗಳ ರವಾನೆ:
ಇಂದೋರ್ ಮತ್ತು ಮುಂಬೈ ಮೂಲಕ ಆರೋಪಿಗಳಿಗೆ ಶಸ್ತ್ರಾಸ್ತ್ರಗಳನ್ನು ತಲುಪಿಸಲಾಗಿತ್ತು. ಆಯುಧಗಳನ್ನು ನೀಡಲು ಯಾರೂ ನೇರವಾಗಿ ಬಂದು ಭೇಟಿಯಾಗಿರಲಿಲ್ಲ. ಬದಲಾಗಿ, ಕಸದ ತೊಟ್ಟಿಯ ಬಳಿ ಬಾಕ್ಸ್ವೊಂದರಲ್ಲಿ ಆಯುಧಗಳನ್ನು ಮರೆಮಾಚಿ ಇಡಲಾಗಿದ್ದ ವೀಡಿಯೊಗಳನ್ನು ಅವರಿಗೆ ಕಳುಹಿಸಿಕೊಡಲಾಗುತ್ತಿತ್ತು. ಅಲ್ಲದೇ ಯಾರಿಗೂ ಸಿಗಬಾರದೆಂಬ ಕಾರಣಕ್ಕೆ ಆರೋಪಿಗಳು ಫೋನ್ ನಂಬರ್ ಅಥವಾ ವೈಯಕ್ತಿಕ ವಿವರಗಳಿಲ್ಲದೆ ಖಾತೆ ತೆರೆಯಬಹುದಾದ `ಜಂಗಿ’ ಆಪ್ ಮೂಲಕ ಸಂಭಾಷಣೆ ನಡೆಸುತ್ತಿದ್ದರು. ಅಷ್ಟೇ ಅಲ್ಲದೆ, ಮಾತುಕತೆ ಮುಗಿದ ಕೂಡಲೇ ಸಿಮ್ ಕಾರ್ಡ್ಗಳನ್ನು ಬಿಸಾಡುತ್ತಿದ್ದರು.
ಈ ಆರೋಪಿಗಳ ಪೈಕಿ ರೇಹನ್ ಮತ್ತು ಫೂಲ್ ಸಿಂಗ್ ಎಂಬುವವರು ಹಿಂದೆ ಅಮೃತಸರದಲ್ಲಿ ಉದ್ಯಮಿಯೊಬ್ಬರ ಮೇಲೆ ದಾಳಿ ನಡೆಸಿದ್ದರು ಎನ್ನಲಾಗಿದೆ. ಮುಂಬೈನಲ್ಲಿ ನಡೆಯುತ್ತಿರುವ ತನಿಖೆಯ ವೇಳೆ ಶಸ್ತ್ರಾಸ್ತ್ರಗಳ ಮೂಲ, ಹ್ಯಾಂಡ್ಲರ್ ಪಾತ್ರ ಹಾಗೂ ಇತರೆ ದಾಳಿಗಳ ಜೊತೆ ಇವರಿಗಿರುವ ನಂಟಿನ ಬಗ್ಗೆ ಸದ್ಯ ಪೊಲೀಸರು ಪರಿಶೀಲಿಸುತ್ತಿದ್ದಾರೆ.
