ಉಚ್ಚಿಲ: ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾ ಮಹೋತ್ಸವಕ್ಕೆ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಶ್ರೀ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಮೊಗವೀರ ಕುಲಗುರು ಶ್ರೀ ಮಾಧವ ಮಂಗಲ ಗುರುಗಳ ಕಂಚಿನ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿದರು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ದಸರಾ ಮಹೋತ್ಸವದ ರೂವಾರಿ ನಾಡೋಜ ಡಾ. ಜಿ. ಶಂಕರ್ ಅವರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬಿ.ಕೆ. ಹರಿಪ್ರಸಾದ್, ಮೊಗವೀರ ಸಮುದಾಯದಲ್ಲಿ ಗಂಡು-ಹೆಣ್ಣಿನ ಸಮಾನತೆಗೆ ಮೀನುಗಾರಿಕೆ ವೃತ್ತಿಯೇ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು.
ಮೀನುಗಾರಿಕೆಯಲ್ಲಿ ಪುರುಷರು ಮೀನು ಹಿಡಿದು ತಂದರೆ, ಮಹಿಳೆಯರು ಅವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಕುಟುಂಬದ ಜೀವನ ನಿರ್ವಹಣೆಗೆ ಕೊಡುಗೆ ನೀಡುತ್ತಾರೆ. ಈ ರೀತಿಯ ಪರಸ್ಪರ ಸಹಕಾರ ಹಾಗೂ ಸಮಾನತೆಯ ಬದುಕನ್ನು ಮೊಗವೀರ ಸಮುದಾಯದಲ್ಲಿ ಕಾಣಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆ, ಗೋಪಾಲ ಪೂಜಾರಿ, ಪ್ರಸಾದ್ ರಾಜ್ ಕಾಂಚನ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಅಶೋಕ್ ಕುಮಾರ್ ಕೊಡವೂರು, ಕಿಶನ್ ಹೆಗ್ಡೆ ಹಾಗೂ ರಕ್ಷಿತ್ ಶಿವರಾಂ ಉಪಸ್ಥಿತರಿದ್ದರು.








