ಸ್ಟಿಂಗ್ ಪ್ರಕರಣದ ಬೆನ್ನಲ್ಲೇ ರಾಹುಲ್ ಗಾಂಧಿ ಭೇಟಿಯಾದ ಸಿದ್ದರಾಮಯ್ಯ; ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ: ಸಿದ್ದರಾಮಯ್ಯ ಹೇಳಿದ್ದೇನು...?

ನವದೆಹಲಿ: ದೆಹಲಿಯ ಟೆನ್​ ಜನ್​​ಪಥ್ ರಸ್ತೆಯಲ್ಲಿರುವ ಸೋನಿಯಾ ಗಾಂಧಿ ನಿವಾಸದಲ್ಲಿ ಕಾಂಗ್ರೆಸ್​​ ವರಿಷ್ಠ ರಾಹುಲ್​​ ಗಾಂಧಿಯನ್ನ ಕರ್ನಾಟಕದ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ. 

ತಮ್ಮ ವಿರುದ್ಧದ ಸ್ಟಿಂಗ್ ಪ್ರಕರಣ ಸೇರಿ ಹಲವು ಪ್ರಮುಖ ವಿಚಾರಗಳ ಬಗ್ಗೆ ರಾಹುಲ್ ಜತೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಮಾಜಿ ಸಿಎಂ ಜೊತೆಗೆ ಸಚಿವ ಡಾ.ಯತೀಂದ್ರ ಹಾಗೂ ಪೊನ್ನಣ್ಣ ಉಪಸ್ಥಿತರಿದ್ದರು. ಮಾಜಿ ಸಿಎಂರ ಈ ನಡೆ ತೀವ್ರ ಕುತೂಹಲಕ್ಕೂ ಕಾರಣವಾಗಿದೆ.

ರಾಹುಲ್ ಗಾಂಧಿ ಜೊತೆ ಸಿದ್ದರಾಮಯ್ಯ ಸುಮಾರು 45 ನಿಮಿಷಗಳಿಗೂ ಹೆಚ್ಚು ಸುದೀರ್ಘ ಚರ್ಚೆ ನಡೆಸಿದ್ದು, ನೀವು ಹೇಳಿದ ಏಕೈಕ ಕಾರಣಕ್ಕೆ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಬೇರೆಯವರ ಒತ್ತಡದಿಂದ ನಾನು ರಾಜೀನಾಮೆ ನೀಡಿಲ್ಲ. ಆದರೆ ನಾನು ಅಧಿಕಾರದಿಂದ ಇಳಿದ ಬಳಿಕ ನನ್ನ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ. ಇದೆಲ್ಲ ಕೆಲವರು ಸೃಷ್ಟಿಸಿದ ಬೆಳವಣಿಗೆ ಎಂದು ಹೇಳುವ ಮೂಲಕ ಸ್ಟಿಂಗ್​​ ಪ್ರಕರಣದ ಬಗ್ಗೆ ರಾಹುಲ್​​ ಗಾಂಧಿ ಎದುರೇ ಸಿದ್ದರಾಮಯ್ಯ ಬೇಸರ ಹೊರಹಾಕಿದ್ದಾರೆ ಎನ್ನಲಾಗಿದೆ. ರಾಹುಲ್​​ ಗಾಂಧಿ ಭೇಟಿಗೂ ಮುನ್ನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನೂ ಭೇಟಿಯಾಗಿ ಸಿದ್ದರಾಮಯ್ಯ ಕೆಲ ಕಾಲ ಮಾತುಕತೆ ನಡೆಸಿದ್ದರು.

ಇನ್ನು ರಾಹುಲ್ ಗಾಂಧಿ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಸ್ಟಿಂಗ್ ವಿಚಾರವಾಗಿ ಚರ್ಚೆ ಮಾಡಿಲ್ಲ. ರಾಜ್ಯದ ಅಭಿವೃದ್ಧಿ ಕುರಿತು ಚರ್ಚೆ ಮಾಡಿದ್ದೇನೆ. ಪಕ್ಷದ ಬೆಳವಣಿಗೆಗಳು ಮತ್ತು ರಾಜಕೀಯ ವಿದ್ಯಮಾನಗಳು ಸೇರದಂತೆ ಪಕ್ಷ ಸಂಘಟನೆ ಬಗ್ಗೆ ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ. ಸ್ಟಿಂಗ್​​ ಪ್ರಕರಣವಿಚಾರವಾಗಿ ಬೆಂಗಳೂರು ನಗರ ಪೊಲೀಸ್​​ ಕಮಿಷನರ್​​ ಸೀಮಂತ್ ಕುಮಾರ್ ಹೇಳಿಕೆ ಬಗ್ಗೆ ಗೊತ್ತಿಲ್ಲ ಎಂದೂ ಅವರು ಇದೇ ವೇಳೆ ತಿಳಿಸಿದ್ದಾರೆ.