ದುಬೈನಲ್ಲಿ ಮೂಳೂರು ಅಲ್ ಖಮರ್ ಟ್ರಸ್ಟ್ ವತಿಯಿಂದ ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರ; 80ಕ್ಕೂ ಅಧಿಕ ಮಂದಿಯಿಂದ ಸ್ವಯಂಪ್ರೇರಿತ ರಕ್ತದಾನ

ದುಬೈ: ಅಲ್ ಖಮರ್ ಟ್ರಸ್ಟ್ ಮೂಳೂರು ವತಿಯಿಂದ ದುಬೈ ಆರೋಗ್ಯ ಪ್ರಾಧಿಕಾರದ (DHA) ಸಹಯೋಗದಲ್ಲಿ ರವಿವಾರ ದುಬೈನ ಅಲ್ ಜದ್ದಾಫ್‌ನಲ್ಲಿರುವ DHA ಪ್ರಧಾನ ಕಚೇರಿಯಲ್ಲಿ ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಮಧ್ಯಾಹ್ನ 12ರಿಂದ 2 ಗಂಟೆಯವರೆಗೆ ನಡೆದ ಈ ಶಿಬಿರದಲ್ಲಿ 80ಕ್ಕೂ ಅಧಿಕ ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಗೆ ಕೈಜೋಡಿಸಿದರು.














ಅಲ್ ಖಮರ್ ಟ್ರಸ್ಟ್ ಅಧ್ಯಕ್ಷ ಹಾಜಿ ಮೊಹಮ್ಮದ್ ಸುಲೈಮಾನ್ ಎಂ.ಇ. ಅವರು ಶಿಬಿರವನ್ನು ಉದ್ಘಾಟಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಕ್ರಮ್ ಮೊಹಮ್ಮದ್ ಅವರು ಅತಿಥಿಗಳು ಹಾಗೂ ರಕ್ತದಾನಿಗಳನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಬಿಸಿಸಿಐ ಅಧ್ಯಕ್ಷ ಹಿದಾಯತ್ ಅಡ್ಡೂರು ಉಪಸ್ಥಿತರಿದ್ದು, ರಕ್ತದಾನಿಗಳ ಮಾನವೀಯ ಸೇವೆಯನ್ನು ಶ್ಲಾಘಿಸಿ ಶುಭ ಹಾರೈಸಿದರು.

ಹಿದಾಯ ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಆಸಿಫ್ ಕನ್ನಂಗಾರ್, ಫೌಂಡೇಶನ್‌ನ ಪ್ರಮುಖರಾದ ಮೊಹಮ್ಮದ್ ನವಾಝ್ ಕೊಲ್ತಮಜಲು ಹಾಗೂ ಅಲ್ ಖಮರ್ ಟ್ರಸ್ಟ್‌ನ ಸಂಸ್ಥಾಪಕ ಸದಸ್ಯ ಫಕೀರ್ ಅಹಮದ್ ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾದರು.

ಟ್ರಸ್ಟ್‌ನ ಪ್ರಮುಖರಾದ ಸಮದ್ ಬಿರಾಲಿ, ಶಮೀರ್ ಮೊಹಮ್ಮದ್ ಬಾರೋದ್, ಆದಿಲ್ ಅಬ್ದುಲ್ ಕರೀಂ, ಅಬ್ದುಲ್ ರಶೀದ್ ಮೊಹಮ್ಮದ್, ನವೀಝ್ ರಜಬ್ ಹಾಗೂ ಮುಹಮ್ಮದ್ ನೌಫಲ್ ಕಾರ್ಯಕ್ರಮದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಿದರು.

ಫಹಾದ್ ಅಬ್ದುಲ್ ಹಮೀದ್, ಇಸ್ಮಾಯಿಲ್ ಕರೀಂ, ಅಬ್ದುಲ್ ಖಾಲಿದ್ ರಝಾಕ್, ಅಹ್ಮದ್ ಕಬೀರ್ ಹಾಗೂ ರಮೀಝ್ ರಜಬ್ ಸೇರಿದಂತೆ ಹಲವು ಸದಸ್ಯರು ಶಿಬಿರದ ಯಶಸ್ಸಿಗೆ ಶ್ರಮಿಸಿದರು.



















ಡಿಕೆಎಸ್‌ಸಿ (DKSC) ಸದಸ್ಯರಾದ ನವಾಝ್ ಹಮದ್ ಹಾಗೂ ಮೊಹಮ್ಮದ್ ಅಯೂಬ್ ರಕ್ತದಾನ ಮಾಡಿದರು. ಸಂಸ್ಥೆಯ ಹಿತೈಷಿ ಕೂರ್ಗ್‌ನ ನಿಝಾಮ್ ಕೂಡ ಶಿಬಿರದಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.

ದುಬೈನ ಜೆಎಸ್ಎಸ್ ಪ್ರೈವೇಟ್ ಸ್ಕೂಲ್ ಶಿಕ್ಷಕಿ ರುಹೀನಾ ಇಕ್ರಮ್ ಅವರು ರಕ್ತದಾನ ಮಾಡುವುದರ ಜೊತೆಗೆ ರಕ್ತದಾನಕ್ಕೆ ಸಂಬಂಧಿಸಿದ ದಾಖಲೆಗಳ ನಿರ್ವಹಣೆಯಲ್ಲೂ ಸಹಕರಿಸಿದರು.

ಯುಎಇಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿರುವ ಸಮಾಜಸೇವಕ ಬಾಲಕೃಷ್ಣ ಸಾಲ್ಯಾನ್ ಎರ್ಮಾಳ್ ಅವರು ನೀಡಿದ ಅಮೂಲ್ಯ ಸಹಕಾರಕ್ಕಾಗಿ ಟ್ರಸ್ಟ್ ವಿಶೇಷ ಕೃತಜ್ಞತೆ ಸಲ್ಲಿಸಿತು.

ಡಿಕೆಎಸ್‌ಸಿ (DKSC), ಹಿದಾಯ ಫೌಂಡೇಶನ್, ದುಬೈ ಬ್ಯಾರೀಸ್, ಬಿಸಿಎಫ್ (BCF), ಎಂಜೆಡಬ್ಲ್ಯುಎಫ್ (MJWF) ಮೊದಲಾದ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಹಿತೈಷಿಗಳು ಶಿಬಿರದಲ್ಲಿ ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಶಿಬಿರದ ಅಂತ್ಯದಲ್ಲಿ ರಕ್ತದಾನಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ವಿವಿಧ ಸಂಘ-ಸಂಸ್ಥೆಗಳು, ರಕ್ತದಾನಿಗಳು, ಸ್ವಯಂಸೇವಕರು, ಹಿತೈಷಿಗಳು ಹಾಗೂ ದುಬೈ ಆರೋಗ್ಯ ಪ್ರಾಧಿಕಾರಕ್ಕೆ ಅಲ್ ಖಮರ್ ಟ್ರಸ್ಟ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.

ಕೇವಲ ಎರಡು ಗಂಟೆಗಳ ಅವಧಿಯಲ್ಲಿ 80ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದ ಈ ಶಿಬಿರವು ಸಮುದಾಯದ ಒಗ್ಗಟ್ಟು, ಸೌಹಾರ್ದತೆ ಹಾಗೂ ಮಾನವೀಯ ಸೇವಾ ಮನೋಭಾವಕ್ಕೆ ಸಾಕ್ಷಿಯಾಯಿತು.