ಉಚ್ಚಿಲ: ಮನುಕುಲದ ಸೇವೆಯಲ್ಲಿ ಸಾರ್ಥಕ 50 ಸಂವತ್ಸರಗಳನ್ನು ಪೂರೈಸಿರುವ ವೈದ್ಯರಾಗಿರುವ ಉಚ್ಚಿಲದ ಡಾ. ಗಂಗಾಧರ ಶೆಟ್ಟಿ ಅವರಿಗೆ ಕೃತಜ್ಞತಾಪೂರ್ವಕ ಅಭಿನಂದನಾ ಸಮಾರಂಭವನ್ನು ನವೆಂಬರ್ 15ರಂದು ಆಯೋಜಿಸಲಾಗಿದೆ.
ರವಿವಾರ ಮಧ್ಯಾಹ್ನ 3:30ಕ್ಕೆ ಉಚ್ಚಿಲದ ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮವನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದು, ಮಣಿಪಾಲ ಮಾಹೆಯ ಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಅಭಿನಂದಿಸಲಿದ್ದಾರೆ. ಡಾ.ಗಂಗಾಧರ ಶೆಟ್ಟಿ ಅಭಿನಂದನಾ ಸಮಿತಿಯ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಅಧ್ಯಕ್ಷತೆ ವಹಿಸಲಿದ್ದಾರೆ. ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ ಅಭಿನಂದನಾ ನುಡಿ ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಎಂಎಲ್ಸಿ ಮಂಜುನಾಥ ಭಂಡಾರಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ನಾಡೋಜ ಡಾ.ಜಿ.ಶಂಕರ್, ಮಿಥುನ್ ರೈ, ಜಯ ಸಿ.ಕೋಟ್ಯಾನ್, ಅಶೋಕ್ ರಾಜ್ ಎರ್ಮಾಳು ಬೀಡು, ರೋಹಿತ್ ಹೆಗ್ಡೆ ಎರ್ಮಾಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.
ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಮುಖ್ಯ ಅರ್ಚಕ ವೇ.ಮೂ.ರಾಘವೇಂದ್ರ ಉಪಾಧ್ಯಾಯ ಹಾಗು ಮೂಳೂರು ಅಲ್ ಇಹ್ಸಾನ್ ಸ್ಕೂಲಿನ ಮುಖ್ಯ ಮೇಲ್ವಿಚಾರಕ ಯು.ಕೆ. ಮುಸ್ತಾಫ ಸಅದಿ ಮತ್ತು ಸೆಕ್ರೆಡ್ ಹಾರ್ಟ್ ಚರ್ಚ್ ನ ಧರ್ಮಗುರು ರೆ.ಫಾ. ಜೋಸ್ವಿ ಫೆರ್ನಾಂಡಿಸ್ ಗೌರವ ಉಪಸ್ಥಿತಿಯನ್ನು ಕಾಣಲಿದ್ದಾರೆ.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಸಮಾಜಸೇವಕರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ.
