ಬಳ್ಳಾರಿ; ₹15 ಸಾವಿರ ಸಂಬಳ ಪಡೆಯುವ ಯುವಕನ ಹೆಸರಿನಲ್ಲಿ 350 ಕೋಟಿ ಜಿಎಸ್‌ಟಿ ವಹಿವಾಟು!

ಬಳ್ಳಾರಿ: ತಿಂಗಳಿಗೆ ಕೇವಲ 15 ಸಾವಿರ ರೂ. ವೇತನ ಪಡೆಯುವ ಯುವಕನೊಬ್ಬನ ವೈಯಕ್ತಿಕ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು, ಆತನ ಹೆಸರಿನಲ್ಲಿ ಐದು ತಿಂಗಳಲ್ಲಿ ಬರೋಬ್ಬರಿ 350 ಕೋಟಿ ರೂ. ಮೊತ್ತದ GST ವಹಿವಾಟು ನಡೆಸಿರುವ ಆರೋಪ ಬಳ್ಳಾರಿಯಲ್ಲಿ ಕೇಳಿಬಂದಿದೆ.

ನಗರದ ಟೊಯೊಟಾ ಶೋರೂಂನಲ್ಲಿ ಸರ್ವಿಸ್ ಅಡ್ವೈಸರ್ ಆಗಿ ಕೆಲಸ ಮಾಡುತ್ತಿರುವ ರೋಷನ್ ವಂಚನೆಗೆ ಒಳಗಾದ ಯುವಕ. ಈತನ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಹಾಗೂ ಮನೆಯ ವಿದ್ಯುತ್ ಬಿಲ್‌ಗಳನ್ನು ಬಳಸಿಕೊಂಡು 'ರೋಷನ್ ಎಂಟರ್‌ಪ್ರೈಸಸ್' ಹೆಸರಿನಲ್ಲಿ ಜಿಎಸ್‌ಟಿ ನೋಂದಣಿ ಮಾಡಿಸಲಾಗಿದೆ ಎಂದು ಆರೋಪಿಸಲಾಗಿದೆ.

ನೋಂದಣಿ ವೇಳೆ ರೋಷನ್ ಅವರ ಬದಲಿಗೆ ಬೇರೆಯವರ ಮೊಬೈಲ್ ಸಂಖ್ಯೆ ಹಾಗೂ ಇ-ಮೇಲ್ ವಿಳಾಸ ನೀಡಲಾಗಿದೆ. ಪ್ಲಾಸ್ಟಿಕ್ ವ್ಯಾಪಾರದ ಹೆಸರಿನಲ್ಲಿ ಕೇವಲ ಐದು ತಿಂಗಳ ಅವಧಿಯಲ್ಲಿ 350 ಕೋಟಿ ರೂ. ವಹಿವಾಟು ನಡೆಸಿ, ಬಳಿಕ ಜಿಎಸ್‌ಟಿ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಜಿಎಸ್‌ಟಿ ಖಾತೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಜಿಎಸ್‌ಟಿ (ಸಿಜಿಎಸ್‌ಟಿ) ಅಧಿಕಾರಿಗಳು ರೋಷನ್ ಅವರ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದಾಗ ಕುಟುಂಬದವರಿಗೆ ಪ್ರಕರಣದ ಬಗ್ಗೆ ಮಾಹಿತಿ ಗೊತ್ತಾಗಿದೆ. ಎಸಿ ಗೋಡೌನ್‌ನಲ್ಲಿ ಹಮಾಲಿ ಕೆಲಸ ಮಾಡಿಕೊಂಡಿರುವ ತಂದೆ ಫಕ್ರುದ್ದೀನ್ ಹಾಗೂ ಕುಟುಂಬದವರು ಅಧಿಕಾರಿಗಳ ವಿಚಾರಣೆಯಿಂದ ಆತಂಕಕ್ಕೊಳಗಾಗಿದ್ದಾರೆ. ಕೆಲಸ ಮುಗಿಸಿ ಮನೆಗೆ ಬಂದ ರೋಷನ್‌ಗೆ ವಿಷಯ ತಿಳಿದ ಬಳಿಕ ಜಿಎಸ್‌ಟಿ ಕಚೇರಿಗೆ ತೆರಳಿ ಮಾಹಿತಿ ಕೇಳಿದ್ದಾರೆ. ಆದರೆ, ಸಮರ್ಪಕ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಕುಟುಂಬದವರೊಂದಿಗೆ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

''ಅಧಿಕಾರಿಗಳು ಗುರುವಾರ ಮನೆಗೆ ಬಂದಿದ್ದರು. ನಿಮ್ಮ ಜಿಎಸ್​ಟಿ ಖಾತೆ ಸ್ಥಗಿತಗೊಂಡಿದೆ ಎಂದು ತಿಳಿಸಿದರು. ಯಾಕೆ ಎಂದು ಕೇಳಿದರು. ನಾವು ಯಾವುದೇ ಬ್ಯುಸಿನೆಸ್ ಮಾಡುವುದಿಲ್ಲ, ದುಡಿದು ತಿನ್ನುವವರು ಎಂದು ತಿಳಿಸಿದೆವು. ಪರಿಶೀಲನೆ ನಡೆಸಿದಾಗ 350 ಕೋಟಿ ರೂ. ವಹಿವಾಟು ನಡೆಸಿರುವುದು ಗೊತ್ತಾಗಿದೆ. ಇದನ್ನು ಮಾಡಿದವರು ಯಾರೆಂದು ಗೊತ್ತಿಲ್ಲ. ಜಿಎಸ್​ಟಿ ಖಾತೆ ಓಪನ್​ ಹಾಗೂ ಬಂದ್​ ಆಗಿರುವುದು ಯಾವುದೂ ಮೆಸೇಜ್​ ಬಂದಿಲ್ಲ. ನಮ್ಮ ಆಧಾರ್​ ಕಾರ್ಡ್​, ಬ್ಯಾಂಕ್​ ಪಾಸ್​ಬುಕ್​, ವಿದ್ಯುತ್​ ಬಿಲ್​, ಹಾಗೂ ಪಾನ್​ ಕಾರ್ಡ್​ ಬಳಕೆ ಮಾಡಿಕೊಂಡಿದ್ದಾರೆ. ಆದರೆ ಬೇರೆಯವರ ಫೋನ್​ ನಂಬರ್​ ಹಾಗೂ ಇ-ಮೇಲ್​ ಬಳಸಿದ್ದಾರೆ. ಇದರಿಂದ ನಮಗೆ ಆತಂಕ ಎದುರಾಗಿದೆ'' ಎಂದು ಯುವಕ ರೋಷನ್ ಹೇಳಿದ್ದಾರೆ.

''ಮಗನ ವೈಯಕ್ತಿಕ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ನೂರಾರು ಕೋಟಿ ರೂಪಾಯಿಗಳ ವಹಿವಾಟು ನಡೆಸಿರುವವರನ್ನು ಪತ್ತೆಹಚ್ಚಿ ಕೂಡಲೇ ಬಂಧಿಸಬೇಕು'' ಎಂದು ತಂದೆ ಫಕ್ರುದ್ದೀನ್ ಆಗ್ರಹಿಸಿದ್ದಾರೆ.

ನೂರಾರು ಕೋಟಿ ರೂಪಾಯಿ ವಹಿವಾಟು ನಡೆದಿದ್ದರೂ ಆರಂಭದಲ್ಲಿ ಸೂಕ್ತ ಪರಿಶೀಲನೆ ನಡೆದಿದೆಯೇ ಎಂಬ ಬಗ್ಗೆಯೂ ಕುಟುಂಬದವರು ಪ್ರಶ್ನಿಸಿದ್ದಾರೆ. ಸದ್ಯ ಪೊಲೀಸರು ರೋಷನ್ ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಬ್ಯಾಂಕ್ ಖಾತೆಗಳು, ವೇತನದ ದಾಖಲೆಗಳು ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಿ ತನಿಖೆ ಕೈಗೊಂಡಿದ್ದಾರೆ.

ತಿಂಗಳಿಗೆ 15 ಸಾವಿರ ರೂ. ಸಂಬಳ ಪಡೆಯುವ ಯುವಕನ ಹೆಸರಿನಲ್ಲಿ 350 ಕೋಟಿ ರೂ. ವಹಿವಾಟು ನಡೆದಿರುವ ಆರೋಪ ಇದೀಗ ಬಳ್ಳಾರಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ.