👉ಏನಿದು ಹೋರ್ಮುಝ್ ಜಲಸಂಧಿ ?
ಭೂಮಿಯ ಮೇಲಿನ ಅತ್ಯಂತ ಪ್ರಮುಖ ಜಲಮಾರ್ಗಗಳಲ್ಲಿ ಒಂದಾಗಿದೆ ಹೋರ್ಮುಝ್ ಜಲಸಂಧಿ. ಇದು ಇರಾನ್ ಮತ್ತು ಒಮಾನ್ ದೇಶಗಳ ನಡುವೆ ಇರುವ ಸಂಕೀರ್ಣ ಸಮುದ್ರ ಮಾರ್ಗವಾಗಿದೆ(narrow sea route).
ಗಲ್ಫ್ ದೇಶಗಳಿಂದ ತೈಲ ಮತ್ತು ಅನಿಲವು ಜಾಗತಿಕ ಮಾರುಕಟ್ಟೆಗೆ ಸಾಗುವ ದಾರಿಯಾಗಿದೆ. ಅದಲ್ಲದೆ, ಇದು ವಿಶ್ವದ ಅತ್ಯಂತ ಪ್ರಮುಖ ಸಾಗರ ಮಾರ್ಗಗಳಲ್ಲಿ ಒಂದಾಗಿದ್ದು, ಏಷ್ಯಾ, ಯುರೋಪ್ ಮತ್ತು ಇತರ ದೇಶಗಳಿಗೆ ಇಂಧನ ಪೂರೈಕೆಯಾಗುವುದು ಇದೇ ಜಲಸಂಧಿಯ ಮೂಲಕವಾಗಿದೆ.
ಪ್ರಪಂಚದ ಒಟ್ಟು ತೈಲ ಸರಬರಾಜಿನ ಸುಮಾರು ಶೇ. 20%, ಅಂದರೆ ದಿನಕ್ಕೆ ಸುಮಾರು 20 ಮಿಲಿಯನ್ ಬ್ಯಾರೆಲ್‌ಗಳು, ಈ ಮಾರ್ಗದ ಮೂಲಕ ಸಾಗುತ್ತದೆ. ಜೊತೆಗೆ, ಜಾಗತಿಕ ನೈಸರ್ಗಿಕ ಅನಿಲದ ಮಹತ್ವದ ಭಾಗವೂ ಇದೇ ಮಾರ್ಗದ ಮೂಲಕ ಸಾಗುತ್ತದೆ.
ಈ ಕಾರಣದಿಂದ, ಹೋರ್ಮುಝ್ ಜಲಸಂಧಿಯನ್ನು ಸಾಮಾನ್ಯವಾಗಿ “ಜಾಗತಿಕ ಇಂಧನದ ಜೀವನಾಡಿ” (Global Energy Lifeline) ಎಂದು ಕರೆಯಲಾಗುತ್ತದೆ.
👉ಇದರ ಪ್ರಾಮುಖ್ಯತೆ ಏನು?
ಈ ಮಾರ್ಗದಲ್ಲಿ ಯಾವುದೇ ವ್ಯತ್ಯಯ ಉಂಟಾದರೆ ತಕ್ಷಣವೇ ಜಾಗತಿಕ ಮಟ್ಟದಲ್ಲಿ ಪರಿಣಾಮ ಕಾಣಿಸಿಕೊಳ್ಳುತ್ತದೆ.
ತೈಲ ಬೆಲೆಗಳ ತಕ್ಷಣ ಏರಿಕೆ, ಇಂಧನ ಮತ್ತು ಸಾರಿಗೆ ವೆಚ್ಚಗಳ ಹೆಚ್ಚಳ, ಆರ್ಥಿಕತೆಯಲ್ಲಿ ದರ ಏರಿಕೆ (Inflation), ಇಂಧನ ಆಮದು ಮಾಡುವ ದೇಶಗಳಿಗೆ ಒತ್ತಡ… ಮುಂತಾದ ತಕ್ಷಣದ ನಕಾರಾತ್ಮಕ ಪರಿಣಾಮಗಳು ಬೀರುತ್ತವೆ.
ಸ್ವಲ್ಪ ಸಮಯದ ಉದ್ವಿಗ್ನತೆಯೂ ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಉಂಟುಮಾಡುತ್ತದೆ.
👉ಇದಕ್ಕೆ ಪರ್ಯಾಯ ಮಾರ್ಗಗಳಿವೆಯೇ?
ಕೆಲವು ದೇಶಗಳು ಪೈಪ್‌ಲೈನ್‌ಗಳನ್ನು ಬಳಸುತ್ತವೆ, ಆದರೆ ಅವು ಈ ಮಾರ್ಗದ ಸಂಪೂರ್ಣ ಸಾಮರ್ಥ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಆದ್ದರಿಂದ, ಈ ಮಾರ್ಗಕ್ಕೆ ಪರ್ಯಾಯವು ಸೀಮಿತವಾಗಿದೆ ಮತ್ತು ದುಸ್ತರವಾಗಿದೆ.
👉ಭಾರತಕ್ಕೆ ಆಗುವ ಪರಿಣಾಮಗಳು
1) ಆಮದು ತೈಲದ ಮೇಲಿನ ಹೆಚ್ಚಿನ ಅವಲಂಬನೆ:
ಭಾರತ ತನ್ನ ಕಚ್ಚಾ ತೈಲದ 80% ಕ್ಕಿಂತ ಹೆಚ್ಚುವನ್ನು ಆಮದು (Import) ಮಾಡಿಕೊಳ್ಳುತ್ತದೆ. ಅದರ ಬಹುಭಾಗವು ಸೌದಿ ಅರೇಬಿಯಾ, ಇರಾಕ್, ಯುಏಇ ಮೊದಲಾದ ಗಲ್ಫ್ ದೇಶಗಳಿಂದ ಬರುತ್ತದೆ. ಇವುಗಳೆಲ್ಲವೂ ಹೋರ್ಮುಝ್ ಮಾರ್ಗದ ಮೂಲಕ ಸಾಗುತ್ತವೆ.
ಈ ಮಾರ್ಗದಲ್ಲಿ ವ್ಯತ್ಯಯ ಉಂಟಾದರೆ, ಸರಬರಾಜು (Supply Chain) ಅನಿಶ್ಚಿತವಾಗುತ್ತದೆ.
2) ಇಂಧನದ ಬೆಲೆ ಏರಿಕೆ
ಭಾರತದಲ್ಲಿ ಇದರಿಂದ ಪೆಟ್ರೋಲ್, ಡೀಸೆಲ್ ಮತ್ತು LPG ಬೆಲೆಗಳು ಹೆಚ್ಚಾಗಿ, ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ.
3) ದರ ಏರಿಕೆಯ ಒತ್ತಡ (Inflation)
ಇಂಧನದ ಬೆಲೆ ಏರಿಕೆಯಿಂದ ಸಾರಿಗೆ, ಆಹಾರ ಪದಾರ್ಥಗಳು, ವಸ್ತುಗಳು ಮತ್ತು ಸೇವೆಗಳ ವೆಚ್ಚ ತೀವ್ರವಾಗಿ ಹೆಚ್ಚಾಗುತ್ತದೆ. ಇದರಿಂದಾಗಿ, ಜೀವನ ವೆಚ್ಚ (Cost of Living) ಹೆಚ್ಚಾಗುತ್ತದೆ.
4) ಆರ್ಥಿಕ ಪರಿಣಾಮ
ಆಮದು ವೆಚ್ಚ ಹೆಚ್ಚುವುದರಿಂದ ಭಾರತೀಯ ರೂಪಾಯಿ ದುರ್ಬಲವಾಗಬಹುದು. ಸರ್ಕಾರ ಅನುದಾನಗಳು (subsidies) ಅಥವಾ ತೆರಿಗೆ (Taxes) ಗಳನ್ನು ಬದಲಾಯಿಸಬೇಕಾಗಬಹುದು. ಅದೇರೀತಿ, ಷೇರು ಮಾರುಕಟ್ಟೆಗಳು ಅಸ್ಥಿರವಾಗಬಹುದು.
ಭಾರತಕ್ಕೆ ಹೋರ್ಮುಝ್ ಜಲಸಂಧಿ ದೂರದ ಸ್ಥಳ ಮಾತ್ರವಲ್ಲ, ಇದು ಅದರ ಇಂಧನ ಅಗತ್ಯಗಳಿಗಾಗಿ ಅತ್ಯಂತ ಪ್ರಮುಖ ಜೀವನಾಡಿಯಾಗಿದೆ.
ಒಟ್ಟಿನಲ್ಲಿ, ಹೋರ್ಮುಝ್ ಜಲಸಂಧಿ ಜಾಗತಿಕ ಮಟ್ಟದಲ್ಲಿ ಒಂದು ಅತ್ಯಂತ ಪ್ರಮುಖ ಸಂಕೀರ್ಣ ಬಿಂದುವಾಗಿದ್ದು (Chokepoint), ಇಲ್ಲಿ ಉಂಟಾಗುವ ಯಾವುದೇ ಬಿಕ್ಕಟ್ಟಿನ ಪರಿಣಾಮವನ್ನು ಇಡೀ ಜಗತ್ತು ಅನುಭವಿಸಬೇಕಾಗುತ್ತದೆ. ಇದನ್ನು ಈಗಾಗಲೇ ಇಸ್ರೇಲ್-ಅಮೇರಿಕಾ-ಇರಾನ್ ನ ಯುದ್ಧದ ಹಿನ್ನೆಲೆಯಲ್ಲಿ ಅನುಭವಿಸುತ್ತಿದೆ!.
✍🏽ಡಾ. & ಅಡ್ವ. ಪಿ.ಎ.ಹಮೀದ್ ಪಡುಬಿದ್ರಿ

