ಮಹಿಳೆಯೊಬ್ಬರ ಖಾತೆಗೆ 10 ಕೋಟಿ ರೂ. ಜಮಾ! ಮಹಿಳೆ ಈ ಹಣ ನೋಡಿ ಮಾಡಿದ್ದೇನು...?

ಲಕ್ನೋ: ತಾಂತ್ರಿಕ ದೋಷದಿಂದ ಉತ್ತರ ಪ್ರದೇಶದ ಮೈನ್‌ಪುರಿಯ ಮಹಿಳೆಯೊಬ್ಬರ ಬ್ಯಾಂಕ್ ಆಫ್ ಇಂಡಿಯಾದ ಖಾತೆಗೆ ಜಮೆಯಾಗಿದ್ದ 10 ಕೋಟಿ ರೂ. ಹಣವನ್ನು ಮರಳಿ ಪಡೆಯುವಂತೆ ಬ್ಯಾಂಕ್‌ಗೆ ಮನವಿ ಮಾಡಿದ್ದಾರೆ. ಮಹಿಳೆಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಬಿಚ್ವಾನ್ ಪ್ರದೇಶದ ದೇವ್‌ಗಂಜ್ ಗ್ರಾಮದ ನಿವಾಸಿಯಾದ ರೈತ ಪರಸ್ಭಾನ್ ಬಹೇಲಿಯಾ ಅವರ ಪತ್ನಿ ರೀಟಾ ಅವರ ಖಾತೆಗೆ ಈ ಹಣ ಜಮೆಯಾಗಿತ್ತು. ನವರಾತ್ರಿಯ ಸಮಯದಲ್ಲಿ ಹಣವನ್ನು ಹಿಂಪಡೆಯಲು ಅವರು ಸ್ಥಳೀಯ ಬ್ಯಾಂಕ್‌ಗೆ ಭೇಟಿ ನೀಡಿದ್ದರು. ಈ ವೇಳೆ ಶಾಖೆ ಮುಚ್ಚಿದ್ದರಿಂದ, ಹತ್ತಿರದ ಎಟಿಎಂಗೆ ಹೋಗಿ ತಮ್ಮ ಬ್ಯಾಲೆನ್ಸ್ ಪರಿಶೀಲಿಸಿದ್ದರು. ಈ ವೇಳೆ 9,99,49,588 ರೂ. ಇರುವುದಾಗಿ ಎಟಿಎಂನಲ್ಲಿ ತೋರಿಸಿದೆ. ಈ ಭಾರೀ ಮೊತ್ತವನ್ನು ನೋಡಿ ದಂಪತಿ ದಿಗ್ಭ್ರಮೆಗೊಂಡು, ಮತ್ತೊಂದು ಎಟಿಎಂನಲ್ಲಿ ಪರಿಶೀಲಿಸಿದ್ದಾರೆ. ಈ ವೇಳೆ ಪರಿಶೀಲನೆ ಮಾಡುವಾಗ ವೀಡಿಯೋ ಮಾಡಿಕೊಂಡಿದ್ದಾರೆ. ಆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ಅವರ ಖಾತೆಯಲ್ಲಿ ಅಪಾರ ಮೊತ್ತ ತೋರಿಸುತ್ತಿದ್ದರೂ, ರೀಟಾ ಯಾವುದೇ ಹಣವನ್ನು ಪಡೆದುಕೊಂಡಿಲ್ಲ. ಕುಟುಂಬಸ್ಥರಿಗೂ ಹಣ ತೆಗೆಯದಂತೆ ಸೂಚಿಸಿದ್ದರು.

ಬ್ಯಾಂಕ್ ಆಫ್ ಇಂಡಿಯಾದ ಕರೀಮ್‌ಗಂಜ್ ಶಾಖೆಯ ವ್ಯವಸ್ಥಾಪಕ ರಿಷಿಕಾಂತ್ ಪಾಂಡೆ, ತಾಂತ್ರಿಕ ದೋಷ ಅಥವಾ ವಹಿವಾಟಿನ ವೇಳೆ ಈ ಹಣ ತಪ್ಪಾಗಿ ಜಮೆಯಾಗಿರಬಹುದು. ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಮಹಿಳೆ ಹಾಗೂ ಆಕೆಯ ಕುಟುಂಬಸ್ಥರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.