ದುಬೈ; ಸಮೀರ್ ಅನುಸ್ಮರಣೆಯಲ್ಲಿ ಕಂಬನಿ ಮಿಡಿದ ಗಣ್ಯರು, ಸ್ನೇಹಿತರು: ನೂರಾರು ಸಂಖ್ಯೆಯಲ್ಲಿ ಜನ ಭಾಗಿ

ದುಬೈ: ಇತ್ತೀಚೆಗೆ ನಿಧನರಾದ ಸಾಮಾಜಿಕ ಕಾರ್ಯಕರ್ತ ಸಮೀರ್ ಉದ್ಯಾವರ ಅವರ ಅನುಸ್ಮರಣೆ ಕಾರ್ಯಕ್ರಮವು ದುಬೈನ ಅಲ್ ಖಿಸ್ಸೆಸ್ ನ ಫಾರ್ಚ್ಯೂನ್ ಪ್ಲಾಝ ಹೋಟೆಲಿನಲ್ಲಿ ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾಗಿತ್ತು. 

ಸಮೀರ್ ಉದ್ಯಾವರ ಅವರ ಗೆಳೆಯರ ಬಳಗ, ಹಿತೈಷಿಗಳು, ಅಭಿಮಾನಿಗಳು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ (ಬಿಸಿಸಿಐ) ಯುಎಇ ಘಟಕದ ಅಧ್ಯಕ್ಷ ಹಿದಾಯತ್ ಅಡ್ಡೂರು ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಈ ಅನುಸ್ಮರಣೆ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸುವ ಮೂಲಕ ಅಗಲಿದ ಸಮೀರ್ ಅವರಿಗೆ ಕಂಬನಿ ಮಿಡಿದರು.


ಕರ್ನಾಟಕ ಎನ್ಆರೈ ಫೋರಂ ಅಧ್ಯಕ್ಷ, ಹೋಟೆಲ್ ಉದ್ಯಮಿ ವಕ್ವಾಡಿ ಪ್ರವೀಣ್ ಶೆಟ್ಟಿ ಅಗಲಿದ ಸಮೀರ್ ಅವರಿಗೆ ಸಂತಾಪ ಸೂಚಿ ಮಾತನಾಡಿ, ಸಮಾಜಸೇವೆಯೇ ತನ್ನ ಕಸುಬಾಗಿ ಮಾಡಿಕೊಂಡಿದ್ದ ಸಮೀರ್, ಜಾತಿ, ಧರ್ಮದ ಎಲ್ಲೆ ಮೀರಿ ಇತರರ ಕಷ್ಟಕ್ಕೆ ನೆರವಾಗುತ್ತಿದ್ದ. ಅವರ ಅಗಲಿಕೆ ನಮಗೆಲ್ಲರಿಗೂ ಅತೀವ ನೋವು ತಂದಿದೆ ಎಂದರು.

ಸಮೀರ್ ಸಮಾಜದ ಎಲ್ಲ ವರ್ಗಗಳ ಜನರೊಂದಿಗೆ ಸ್ನೇಹಭಾವದಿಂದ ಬೆರೆತು, ಸಹಾಯ ಬೇಕಾದವರಿಗೆ ಯಾವಾಗಲೂ ಮುಂಚೂಣಿಯಲ್ಲಿ ನಿಂತು ನೆರವಾಗುತ್ತಿದ್ದವರು. ಇಂತಹ ಮಾನವೀಯ ಗುಣಗಳನ್ನು ಹೊಂದಿದ್ದ ವ್ಯಕ್ತಿಯ ಅಗಲಿಕೆ ಸಮಾಜಕ್ಕೆ ಅಪಾರ ನಷ್ಟವಾಗಿದೆ. ಅವರ ಸೇವಾ ಮನೋಭಾವ, ಸರಳತೆ ಎಲ್ಲರಿಗೂ ಪ್ರೇರಣೆಯಾಗಿದ್ದು, ಅವರ ನೆನಪು ಸದಾ ನಮ್ಮ ಹೃದಯಗಳಲ್ಲಿ ಜೀವಂತವಾಗಿರುತ್ತದೆ ಎಂದರು.







ಯುಎಇಯಲ್ಲಿರುವ ಕನ್ನಡಿಗರ ಕಷ್ಟ, ನೋವುಗಳಿಗೆ ಹಗಲು ರಾತ್ರಿ ಎನ್ನದೆ, ಜಾತಿ-ಧರ್ಮವನ್ನು ನೋಡದೆ ಸ್ಪಂದಿಸುವ ಜೊತೆಗೆ ಸೌಹಾರ್ದತೆಯ ಕೊಂಡಿಯಾಗಿದ್ದ ಸಮೀರ್ ಅವರ ಅಗಲಿಕೆ ನಮಗೆ ಅರಗಿಸಿಕೊಳ್ಳಲು ಸಾಧ್ಯವಾಗದಷ್ಟು ಅತೀವ ನೋವು ತಂದಿದೆ ಎಂದು ಬಾವುಕರಾದರು.

ದುಬೈ ಕರ್ನಾಟಕ ಸಂಘದ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಮಾತನಾಡಿ, ಪ್ರತಿ ವರ್ಷ ನಡೆಯುವ ಸಂಘದ ಕರ್ನಾಟಕ ರಾಜ್ಯೋತ್ಸವದ ವೇಳೆ ಸಮೀರ್ ಅವರ ಸವಿನೆನಪಿಗಾಗಿ 'ಸಮೀರ್ ಸೇವಾ ರತ್ನ' ಪ್ರಶಸ್ತಿಯನ್ನು ನೀಡುವುದಾಗಿ ಘೋಷಿಸಿದರು.

ಸಮೀರ್ ಅವರ ನಿಸ್ವಾರ್ಥ ಸೇವೆ ನಮಗೆಲ್ಲ ಮಾದರಿಯಾಗಲಿ, ಅವರ ಸೇವಾ ಮನೋಭಾವ, ಸರಳತೆ, ಕಷ್ಟಕ್ಕೆ ಸ್ಪಂದಿಸುವ ಗುಣ ನಾವು ನಮ್ಮ ಜೀನವದುದ್ದಕ್ಕೂ ಅಳವಡಿಸಿಕೊಳ್ಳುವ ಮೂಲಕ ಸಮೀರ್ ಅವರನ್ನು ಜೀವಂತವಾಗಿರಿಸೋಣ ಎಂದು ಹೇಳಿದರು.


ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ (ಬಿಸಿಸಿಐ) ಯುಎಇ ಘಟಕದ ಅಧ್ಯಕ್ಷ, ಕಾರ್ಯಕ್ರಮದ ಸಂಯೋಜಕ ಹಿದಾಯತ್ ಅಡ್ಡೂರು ಮಾತನಾಡಿ, ನಾವೆಲ್ಲಾ ಒಬ್ಬ ಒಳ್ಳೆಯ ಗೆಳೆಯ, ಸದಾ ಬೇರೆಯವರ ಬಗ್ಗೆಯೇ ಯೋಚಿಸುವಂಥ, ಜನರ ಕಷ್ಟಗಳಿಗೆ ತಕ್ಷಣ ಸ್ಪಂದಿಸುವಂಥ ಮಾನವೀಯತೆಯನ್ನೇ ಉಸಿರಾಡಿಕೊಂಡಿದ್ದ ವ್ಯಕ್ತಿಯನ್ನು ಕಳೆದುಕೊಂಡು ದುಃಖಿತರಾಗಿದ್ದೇವೆ ಎಂದರು.

ಅವರು ಮಾಡಿದ ಸೇವೆ, ಅವರ ಮಾನವೀಯತೆ ಮತ್ತು ತ್ಯಾಗವನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಅವರ ಸ್ಥಾನವನ್ನು ಯಾರೂ ಭರ್ತಿ ಮಾಡಲಾಗದು, ಅವರ ನೆನಪುಗಳು ಮಾತ್ರ ಸದಾ ನಮ್ಮೊಂದಿಗೆ ಇರುತ್ತವೆ. 

ಸಮೀರ್ ಅವರ ಸ್ಮರಣಾರ್ಥ ನಾವು ದುಬೈ ಕನ್ನಡ ಸಂಘದವರ ಜೊತೆ ಸೇರಿ ಏಪ್ರಿಲ್ 19ರಂದು ದುಬೈನ ಅಲ್ ಜದ್ದಾಫ್ ನಲ್ಲಿ ರಕ್ತದಾನ ಶಿಬರವನ್ನು ಹಮ್ಮಿಕೊಂಡಿದ್ದೇವೆ. ಈ ರಕ್ತದಾನವನ್ನು ನಾವೆಲ್ಲಾ ಜೊತೆ ಸೇರಿ ರಕ್ತದಾನ ಮಾಡುವ ಮೂಲಕ ಯಶಸ್ವಿಗೊಳಿಸಬೇಕಾಗಿದೆ ಎಂದರು.


ಸಮೀರ್ ಅವರು ಮಾಡುತ್ತಿದ್ದ ಸಮಾಜ ಸೇವೆ ಇತರರಿಗೆ ಮಾದರಿಯಂತಿತ್ತು. ಕನ್ನಡಪರ ಯಾವುದೇ ಕಾರ್ಯಕ್ರಮವಿದ್ದರೂ ಅಲ್ಲಿ ಕನ್ನಡ ಸೇವೆಗಾಗಿ ಸಮೀರ್ ಮುಂದಿರುತ್ತಿದ್ದರು. ಅವರ ಅಗಲಿಕೆ ನಮಗೆ ಅತೀವ ನೋವು ತಂದಿದೆ ಎಂದು ಕನ್ನಡಿಗರ ಕೂಟ ದುಬೈ ಅಧ್ಯಕ್ಷ ಅರುಣ್ ಕುಮಾರ್ ತಮ್ಮ ನೋವನ್ನು ತೋಡಿಕೊಂಡರು. 

ಸಮೀರ್ ಉದ್ಯಾವರ ಅವರ ಗೆಳೆಯರ ಬಳಗ, ಹಿತೈಷಿಗಳು, ಅಭಿಮಾನಿಗಳು ಆಯೋಜಿಸಿದ್ದ ಈ ಅನುಸ್ಮರಣೆ ಕಾರ್ಯಕ್ರಮದಲ್ಲಿ ಕನ್ನಡಪರ ಹಾಗು ಇತರ ಸಂಘಟನೆಗಳ ಮುಖಂಡರಾದ ಶ್ವೇತಾ, ಮೊಹಮ್ಮದ್ ಶಫೀಕ್, ಬಿಸಿಎಫ್ ಉಪಾಧ್ಯಕ್ಷ ಎಂ.ಇ.ಮೂಳೂರು, ಹಿದಾಯ ಫೌಂಡೇಶನ್ ನ ಖಾಸಿಂ, ದುಬೈ ಕರ್ನಾಟಕ ಸಂಘದ ದಯಾ ಕಿರೋಡಿಯನ್, ಕೃಷ್ಣರಾಜ್, ನಸ್ರೀನ್ ಬಾವಾ, ಕಿರಣ್ ಗೌಡ, ದೀಪಕ್ ಪೂಜಾರಿ, ಅಬ್ದುಲ್ ಖಾಲಿಕ್, ಮಲ್ಲಿಕಾರ್ಜುನ ಗೌಡ, ಮಝರ್ ಗುಜರಾತ್, ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಮುಷ್ತಾಕ್ ಕದ್ರಿ, ಉದ್ಯಮಿ ಸಲೀಂ ಮೂಡಬಿದ್ರೆ, ಜೇಮ್ಸ್ ಮೆಂಡೋನ್ಸಾ, ನಾಗರಾಜ್, ಫೈಝಲ್ ಕಾಪು, ಸನಾನ್ ಅವರು ಸಮೀರ್ ಅವರಿಗೆ ಕಂಬನಿ ಮಿಡಿದರು.

ಕಾರ್ಯಕ್ರಮದಲ್ಲಿ ಯುಎಇಯಲ್ಲಿರುವ ಕನ್ನಡಪರ ಹಾಗು ಇತರ ಸಂಘಟನೆಗಳ ನೂರಾರು ಮಂದಿ ಮುಖಂಡರು, ಸಮೀರ್ ಅವರ ಆಪ್ತ ಮಿತ್ರರು, ಪರಿಚಯಸ್ಥರು, ಹಿತೈಷಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೂ ಮೊದಲು ಜನಾಝಾ ನಮಾಝ್ ಹಾಗು ದುವಾ ನೆರವೇರಿಸಲಾಯಿತು. ಕಾರ್ಯಕ್ರಮದ ಮಧ್ಯೆ ಸಮೀರ್ ಅವರ ಕುರಿತ ವೀಡಿಯೋ ಪ್ರದರ್ಶನ ಮಾಡಲಾಯಿತು. ಎರ್ರೋಲ್ ಗೋನ್ಸಾಲ್ವೆಸ್ ಕಾರ್ಯಕ್ರಮ ನಿರೂಪಿಸಿ, ಸಮದ್ ಬಿರಾಲಿ ವಂದಿಸಿದರು.