ರಮದಾನ್‌ನ ಅಂತಿಮ ದಿನಗಳು ಮತ್ತು ರಾತ್ರಿಗಳು: ಲೈಲತುಲ್ ಖದ್ರ್‌ನ ಹುಡುಕಾಟ ಮುಂದುವರಿಸುತ್ತಿರುವ ಸೌದಿ ಅರೇಬಿಯಾದ ಭಕ್ತರು…

ರಮದಾನ್ ತಿಂಗಳ 27ನೇ ರಾತ್ರಿ (ಮಾರ್ಚ್ 15 ರಂದು) ದೇಶದಾದ್ಯಂತ ಆಳವಾದ ಭಕ್ತಿ ಮತ್ತು ಅಪಾರ ಭಕ್ತರ ಸಮಾಗಮಕ್ಕೆ ಸೌದಿ ಅರೇಬಿಯಾ ಸಾಕ್ಷಿಯಾಯಿತು.

ಮಸೀದಿಗಳು ರಾತ್ರಿ ತಡವರೆಗೂ ಭಕ್ತರಿಂದ ತುಂಬಿಕೊಂಡಿದ್ದವು. ಭಕ್ತರು ಕಿಯಾಮುಲ್ ಲೈಲ್ ಪ್ರಾರ್ಥನೆಗಳನ್ನು ನೆರವೇರಿಸಿ, ಪವಿತ್ರ ಕುರ್‌ಆನ್ ಪಠಣ ಮಾಡಿ ಹಾಗೂ ಮನಃಪೂರ್ವಕ ಪ್ರಾರ್ಥನೆಗಳನ್ನು ಸಲ್ಲಿಸಿದರು. 

ಮುಸ್ಲಿಮರು ಈ ರಾತ್ರಿ ಲೈಲತುಲ್ ಖದ್ರ್ ಅಂದರೆ “ತೀರ್ಮಾನದ ರಾತ್ರಿ” — ಆಗಿರಬಹುದು ಎಂದು ನಂಬುತ್ತಾರೆ. ಕುರ್‌ಆನ್ ಪ್ರಕಾರ ಈ ರಾತ್ರಿ ಸಾವಿರ ತಿಂಗಳಿಗಿಂತಲೂ ಶ್ರೇಷ್ಠವಾಗಿದೆ. ಈ ರಾತ್ರಿ ದೇಶದಾದ್ಯಂತ ಭಕ್ತಿ, ವಿನಯ ಮತ್ತು ಆಧ್ಯಾತ್ಮಿಕ ಚಿಂತನೆಯ ವಾತಾವರಣವನ್ನು ಮೂಡಿಸಿತು.

👉 ಪವಿತ್ರ ನಗರಗಳಲ್ಲಿ ಭಾರೀ ಭಕ್ತರ ಸಮಾಗಮ

ಪವಿತ್ರ ನಗರಗಳಾದ ಮಕ್ಕಾ ಮತ್ತು ಮದೀನ ಗಳಲ್ಲಿ ಸಾವಿರಾರು ಭಕ್ತರು, ಮಸ್ಜಿದ್ ಅಲ್ ಹರಮೈನ್ ಹಾಗೂ  ಮಸ್ಜಿದ್ ಅಲ್ ನಬವಿ ಗಳಲ್ಲಿ ರಾತ್ರಿ ಪ್ರಾರ್ಥನೆಗಳಲ್ಲಿ ಭಾಗವಹಿಸಿದರು.

ರಮಝಾನ್‌ನ ಕೊನೆಯ ಹತ್ತು ದಿನಗಳಲ್ಲಿ ಹೆಚ್ಚುತ್ತಿರುವ ಯಾತ್ರಿಕರು ಮತ್ತು ನಿವಾಸಿಗಳನ್ನು ಗಮನದಲ್ಲಿಟ್ಟುಕೊಂಡು ವಿಸ್ತರಿತ ಪ್ರಾರ್ಥನಾ ಸ್ಥಳಗಳು ಹಾಗೂ ವ್ಯವಸ್ಥಿತ ಪ್ರವೇಶ-ನಿರ್ಗಮನ ಮಾರ್ಗಗಳನ್ನು ಒದಗಿಸುವ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿತ್ತು.

👉 ಲೈಲತುಲ್ ಖದ್ರ್ ‌ಗಾಗಿ ಮುಂದುವರಿದ ಹುಡುಕಾಟ

27ನೇ ರಾತ್ರಿ ಲೈಲತುಲ್ ಖದ್ರ್ ಆಗಿರಬಹುದು ಎಂದು ವ್ಯಾಪಕವಾಗಿ ನಂಬಲಾಗಿದ್ದರೂ, ಇಸ್ಲಾಮಿಕ್ ಉಪದೇಶಗಳ ಪ್ರಕಾರ ರಮಝಾನ್‌ನ ಕೊನೆಯ ಹತ್ತು ದಿನಗಳಲ್ಲಿನ ಎಲ್ಲಾ ಬೆಸ ರಾತ್ರಿಗಳಾದ 21, 23, 25, 27 ಮತ್ತು 29ನೇ ರಾತ್ರಿಗಳಲ್ಲೂ ಈ ಪವಿತ್ರ ರಾತ್ರಿಯನ್ನು ಹುಡುಕಬೇಕೆಂದು ಹೇಳಲಾಗಿದೆ.

ಸೌದಿ ಅರೇಬಿಯಾದಲ್ಲಿ ಮಾರ್ಚ್ 17 ರಂದು ರಮದಾನ್ 29ನೇ ರಾತ್ರಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅನೇಕ ಭಕ್ತರು ತಮ್ಮ ಪ್ರಾರ್ಥನೆಗಳನ್ನು ಮುಂದುವರಿಸುತ್ತಿದ್ದು, ಅದು ದೈವಿಕ ಕರುಣೆ ಇಳಿಯುವ ಮತ್ತು ಪ್ರಾರ್ಥನೆಗಳು ಸ್ವೀಕರಿಸಲ್ಪಡುವ ಪವಿತ್ರ ರಾತ್ರಿ ಆಗಿರಬಹುದೆಂಬ ಆಶೆಯಲ್ಲಿ ಇದ್ದಾರೆ. ಅದೂಅಲ್ಲದೆ, ಕೆಲವರು ಮಸೀದಿಗಳಲ್ಲಿ (ರಮದಾನ್ 21ರಿಂದ ಆರಂಭಿಸಿ ಕೊನೆವರೆಗೆ) ವಿಶೇಷ ಇರುವಿಕೆ    

(ಇಅ್ ತಿಕಾಫ್)ಯನ್ನು ಸ್ಥಿರಗೊಳಿಸಿರುವುದನ್ನು ಕಾಣಬಹುದಾಗಿದೆ. 

👉 ದೇಶದಾದ್ಯಂತ ದಾನಧರ್ಮದ ಪರ್ವ

ಸೌದಿ ಅರೇಬಿಯಾದಲ್ಲಿ ರಮದಾನ್ ತಿಂಗಳು ದಾನಶೀಲತೆ ಮತ್ತು ಕರುಣೆಯ ವಿಶಿಷ್ಟ ಸಂಸ್ಕೃತಿಗೆ ಪ್ರಸಿದ್ಧವಾಗಿದೆ. ವ್ಯಕ್ತಿಗಳು, ಕುಟುಂಬಗಳು ಹಾಗೂ ವಿವಿಧ ಸಂಸ್ಥೆಗಳು ಸೇರಿ ಸಮಾಜದ ವಿವಿಧ ಭಾಗಗಳಲ್ಲಿ ಉಚಿತ ಇಫ್ತಾರ್ ಆಹಾರವನ್ನು ವಿತರಿಸುತ್ತಾರೆ.

ಖರ್ಜೂರ, ಹಣ್ಣುಗಳು, ನೀರು ಮತ್ತು ತಂಪು ಪಾನೀಯಗಳನ್ನು ಉಪವಾಸದಲ್ಲಿರುವವರಿಗೆ ಉದಾರವಾಗಿ ನೀಡಲಾಗುತ್ತದೆ, ಇದರಿಂದ ಎಲ್ಲರೂ ಗೌರವಪೂರ್ವಕವಾಗಿ ತಮ್ಮ ಉಪವಾಸವನ್ನು ಮುರಿಯಲು ಸಾಧ್ಯವಾಗುತ್ತದೆ.

👉 ಪ್ರಯಾಣಿಕರಿಗೆ ರಸ್ತೆಬದಿಯ ಆತಿಥ್ಯ

ಹೆದ್ದಾರಿಗಳು ಮತ್ತು ರಸ್ತೆಗಳ ಪಕ್ಕದಲ್ಲಿ ಇಫ್ತಾರ್ ಮಳಿಗೆಗಳು ಮತ್ತು ತಾತ್ಕಾಲಿಕ ಶಿಬಿರಗಳು ಸ್ಥಾಪಿಸಲ್ಪಟ್ಟಿದ್ದು, ಮನೆಗೆ ಸಮಯಕ್ಕೆ ತಲುಪಲು ಸಾಧ್ಯವಾಗದ ಪ್ರಯಾಣಿಕರು ಹಾಗೂ ಪಾದಚಾರಿಗಳಿಗೆ ಪ್ಯಾಕ್ ಮಾಡಿದ ಆಹಾರ, ಹಣ್ಣುಗಳು, ಜ್ಯೂಸ್ ಮತ್ತು ಬಾಟಲಿ ನೀರನ್ನು ವಿತರಿಸಲಾಗುತ್ತದೆ.

ಸೌದಿಗಳು, ವಿಶೇಷವಾಗಿ ಯುವ ಸೌದಿ ಸ್ವಯಂಸೇವಕರು, ರಸ್ತೆಬದಿಗಳು ಮತ್ತು ಟ್ರಾಫಿಕ್ ಸಿಗ್ನಲ್‌ಗಳ ಬಳಿ ನಿಂತು, ಆಹಾರ ಮತ್ತು ಪಾನೀಯಗಳನ್ನು ಹಂಚುತ್ತಿರುವ ದೃಶ್ಯಗಳು ಕಂಡುಬರುತ್ತವೆ. ಇದು ರಮದಾನ್‌ನ ನಿಜವಾದ ಆತ್ಮವಾದ ಕರುಣೆ, ಆತಿಥ್ಯ ಮತ್ತು ಸಹಾನುಭೂತಿಯ ಪ್ರತೀಕವಾಗಿದೆ.

👉 ಭಕ್ತಿ ಮತ್ತು ಆತ್ಮಪರಿಶೀಲನೆಯ ಅಂತಿಮ ರಾತ್ರಿಗಳು

ರಮದಾನ್ ತನ್ನ ಅಂತಿಮ ದಿನಗಳಿಗೆ ಪ್ರವೇಶಿಸುತ್ತಿರುವಂತೆ ದೇಶದಾದಾದ್ಯಂತ ಆಧ್ಯಾತ್ಮಿಕ ವಾತಾವರಣ ಇನ್ನಷ್ಟು ಗಾಢವಾಗುತ್ತಿದೆ. ಭಕ್ತರು ಲೈಲತುಲ್ ಖದ್ರ್‌ನ ಮಹತ್ತರ ಫಲಗಳನ್ನು ಪಡೆಯುವ ಆಶಯದಿಂದ ಪ್ರಾರ್ಥನೆ, ದಾನಧರ್ಮ ಮತ್ತು ಅಲ್ಲಾಹನ ಸ್ಮರಣೆಯನ್ನು ಹೆಚ್ಚಿಸುತ್ತಿದ್ದಾರೆ.

ಉಳಿದಿರುವ ರಾತ್ರಿಗಳು, ವಿಶೇಷವಾಗಿ 29ನೇ ರಾತ್ರಿ, ಹೊಸ ನಿರೀಕ್ಷೆ ಮತ್ತು ಭಕ್ತಿಯಿಂದ ಎದುರು ನೋಡಲಾಗುತ್ತಿದ್ದು, ಭಕ್ತರು ಈ ಪವಿತ್ರ ತಿಂಗಳನ್ನು ನಂಬಿಕೆ, ಕೃತಜ್ಞತೆ ಮತ್ತು ಸತ್ಕಾರ್ಯಗಳೊಂದಿಗೆ ಸಮಾಪ್ತಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ.