ಉಚ್ಚಿಲ; 'ತವಕ್ಕಲ್'ನಿಂದ ಅಬ್ದುಲ್ ರಝಾಕ್ YSಗೆ 'ಪರ್ಸನಾಲಿಟಿ ಆಫ್ ದಿ ಈಯರ್-2026' ಪ್ರಶಸ್ತಿ ಪ್ರದಾನ

ಉಚ್ಚಿಲ: ತವಕ್ಕಲ್ ಓವರ್ಸಿಸ್ ಹಾಗು ತವಕ್ಕಲ್ ಮುಸ್ಲಿಮ್ ಯಂಗ್ ಮೆನ್ಸ್ ಅಸೋಸಿಯೇಷನ್ ಉಚ್ಚಿಲ ಇದರ ಜಂಟಿ ಆಶ್ರಯದಲ್ಲಿ ಪ್ರತಿ ವರ್ಷ ರಮಝಾನ್ ಸಂದರ್ಭದಲ್ಲಿ ನೀಡಲಾಗುವ 'ಪರ್ಸನಾಲಿಟಿ ಆಫ್ ದಿ ಈಯರ್-2026(ವರ್ಷದ ಶ್ರೇಷ್ಠ ವ್ಯಕ್ತಿ)' ಪ್ರಶಸ್ತಿಯನ್ನು ಸಾಮಾಜಿಕ ಕಾರ್ಯಕರ್ತ ಉಚ್ಚಿಲದ ಅಬ್ದುಲ್ ರಝಾಕ್ YS ಅವರಿಗೆ ನೀಡಿ ಗೌರವಿಸಲಾಯಿತು.
ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ನಿರಂತರ ಸೇವೆ, ಜನರ ಕಷ್ಟಕ್ಕೆ ತಕ್ಷಣ ಸ್ಪಂದನೆ ಮಾಡುವಂತ ವ್ಯಕ್ತಿತ್ವದವರಾಗಿರುವ ಅಬ್ದುಲ್ ರಝಾಕ್, ತವಕ್ಕಲ್ ಓವರ್ಸಿಸ್ ನ ಅಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದ್ದಾರೆ. ದುಬೈಯಲ್ಲಿ ಹಲವಾರು ವರ್ಷಗಳ ಕಾಲ 'ತವಕ್ಕಲ್ ಓವರ್ಸಿಸ್ ದುಬೈ'ನಲ್ಲಿ ಸೇವೆ ಸಲ್ಲಿಸಿ, ಬಳಿಕ ತಾಯಿನಾಡಿಗೆ ತೆರಳಿ, ಅಲ್ಲಿಯೂ ಸಮುದಾಯ ಹಾಗು ಸಾಮಾಜಿಕ ಸೇವೆಯಲ್ಲಿ ನಿರಂತರವಾಗಿ ತನ್ನನ್ನು ತೊಡಗಿಸಿಕೊಂಡಿರುವ ಅಬ್ದುಲ್ ರಝಾಕ್ ಅವರ ಸೇವೆಯನ್ನು ಗುರುತಿಸಿ ಸೋಮವಾರ ಉಚ್ಚಿಲದ ತವಕ್ಕಲ್ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ 'ಪರ್ಸನಾಲಿಟಿ ಆಫ್ ದಿ ಈಯರ್-2026' ಪ್ರಶಸ್ತಿ ನೀಡಲಾಯಿತು.
'Personality of the Year ' ಪ್ರಶಸ್ತಿಯನ್ನು ಬೇರೆ ಬೇರೆ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧಕರಿಗೆ ನೀಡಲಾಗುತ್ತಿದ್ದು, ಪ್ರಶಸ್ತಿ ಘೋಷಣೆಗೂ ಮೊದಲು ವಯಸ್ಸನ್ನು(ಪುರುಷ ಅಥವಾ ಮಹಿಳೆ) ಪರಿಗಣಿಸದೆ ಬೇರೆ ಬೇರೆ ಕ್ಷೇತ್ರದ ಸಾಧಕರನ್ನು ನಾಮನಿರ್ದೇಶನ ಮಾಡಿ, ಬಳಿಕ ಸದಸ್ಯರ ಸಭೆಯಲ್ಲಿ ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಪ್ರಶಸ್ತಿ ವಿಜೇತರಿಗೆ ಸನ್ಮಾನ ಜೊತೆಗೆ ₹25,000 ನಗದು ಬಹುಮಾನ ನೀಡಲಾಗುತ್ತದೆ.
ಪ್ರಶಸ್ತಿ ಪ್ರದಾನದ ವೇಳೆ ಉಚ್ಚಿಲ ತವಕ್ಕಲ್ ಮುಸ್ಲಿಮ್ ಯಂಗ್ ಮೆನ್ಸ್ ಅಸೋಸಿಯೇಷನ್ ಅಧ್ಯಕ್ಷ ಹರ್ಷ್ ಇಬ್ರಾಹಿಂ, ಗೌರವಾಧ್ಯಕ್ಷ ಉಸ್ಮಾನ್ ಕಟ್ಟಿಂಗೇರಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕುಚ್ಚಿಕಾಡ್, ಜೊತೆ ಕಾರ್ಯದರ್ಶಿ ಅಬ್ದುಲ್ ಅಝೀಝ್, ಶಾಬಾನ್ ಮೊಯಿದಿನ್, ಕೋಶಾಧಿಕಾರಿ ಅಹ್ಮದ್ ಗುಲಾಮ್, ತವಕ್ಕಲ್ ಓವರ್ಸಿಸ್ ಗೌರವಾಧ್ಯಕ್ಷ ಮೊಹಮ್ಮದ್ ದಾವೂದ್, ಸದಸ್ಯ ಇಬ್ರಾಹಿಂ ದಾವೂದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.





