T20 world cup 2026: ನ್ಯೂಜಿಲ್ಯಾಂಡ್ ವಿರುದ್ಧ ಭರ್ಜರಿ ಗೆಲುವು; ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಭಾರತ!

ಅಹ್ಮದಾಬಾದ್: ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ಸ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಎದುರಾಳಿ ತಂಡಕ್ಕೆ 256 ರನ್ ಗಳ ಅತ್ಯಧಿಕ ರನ್ ಟಾರ್ಗೆಟ್ ನೀಡಿತ್ತು. ಭಾರತದ ಪರ ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪರಿಣಾಮ ಭಾರತ ಬೃಹತ್ ಮೊತ್ತ ಗಳಿಸಲು ಸಾಧ್ಯವಾಯಿತು.

ಬೃಹತ್ ರನ್ ಚೇಸಿಂಗ್ ಗೆ ಇಳಿದ ನ್ಯೂಜಿಲ್ಯಾಂಡ್ ತಂಡ 100 ರನ್ ಗಳನ್ನು ಗಳಿಸುವ ಮುನ್ನವೇ ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು.

ಅಂತಿಮವಾಗಿ ಭಾರತದ ಎದುರು ನ್ಯೂಜಿಲ್ಯಾಂಡ್ ಇನ್ನೂ ಒಂದು ಓವರ್ ಬಾಕಿ ಇರುವಾಗಲೇ 159 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.

ಭಾರತ (Team India) ಸಿಕ್ಸರ್‌ನಲ್ಲಿ (Six) ಶತಕ ಸಿಡಿಸಿ ವಿಶ್ವದಾಖಲೆ ಬರೆದಿದೆ. ಈ ಟೂರ್ನಿಯಲ್ಲಿ 9 ಪಂದ್ಯವಾಡಿದ ಭಾರತ ಬರೋಬ್ಬರಿ 106 ಸಿಕ್ಸ್‌ ಹೊಡೆದಿದೆ.

ನ್ಯೂಜಿಲೆಂಡ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ ಭಾರತ 18 ಸಿಕ್ಸ್‌ ಹೊಡೆದಿದ್ದರೆ ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್‌ನಲ್ಲಿ 19 ಸಿಕ್ಸ್‌ ಚಚ್ಚಿದ್ದರು. 19 ಸಿಕ್ಸ್‌ ಹೊಡೆದಿದ್ದು ಟಿ20ಯಲ್ಲಿ ದಾಖಲೆ. ಒಂದು ಪಂದ್ಯದಲ್ಲಿ ಇಷ್ಟೊಂದು ಸಿಕ್ಸ್‌ ಯಾವ ತಂಡದಿಂದ ದಾಖಲಾಗಿರಲಿಲ್ಲ.

ಟಿ 20 ವಿಶ್ವಕಪ್‌ ಟೂರ್ನಿಯೊಂದರಲ್ಲಿ ಅತಿ ಹೆಚ್ಚು ಸಿಕ್ಸ್‌ ಸಿಡಿಸಿದ ಎರಡನೇ ತಂಡ ವೆಸ್ಟ್‌ ಇಂಡೀಸ್‌. ಈ ಟೂರ್ನಿಯಲ್ಲೇ 76 ಸಿಕ್ಸ್‌ ಸಿಡಿಸಿದರೆ ಈ ಟೂರ್ನಿಯಲ್ಲೇ ದಕ್ಷಿಣ ಆಫ್ರಿಕಾ 72 ಸಿಕ್ಸ್‌ ಹೊಡೆಯುವ ಮೂಲಕ ಮೂರನೇ ಸ್ಥಾನ ಪಡೆದಿದೆ.