'ಮೋದಿ' ಹೆಸರಿನ ಬಗ್ಗೆ ಟೀಕೆ: ರಾಹುಲ್ ಗಾಂಧಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಗುಜರಾತ್ನ ಸೂರತ್ ನ್ಯಾಯಾಲಯ; 30 ದಿನಗಳ ಜಾಮೀನು ಮಂಜೂರು
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ 'ಮೋದಿ' ಉಪನಾಮ ಟೀಕೆಗೆ ಸಂಬಂಧಿಸಿ ಹೂಡಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ನ ಸೂರತ್ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದ್ದು, ರಾಹುಲ್ ಗಾಂಧಿಗೆ 2 ವರ್ಷಗಳ ಜೈಲು ಶಿಕ್ಷೆ ಹಾಗೂ 15 ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ.
ಜೊತೆಗೆ ಸೂರತ್ ನ್ಯಾಯಾಲಯ 30 ದಿನಗಳಿಗೆ ಜಾಮೀನು ಮಂಜೂರು ಮಾಡಿದ್ದು, ಮೇಲ್ಮನವಿ ಮಾಡಲು 30 ದಿನಗಳ ಕಾಲಾವಕಾಶ ಕೂಡ ನೀಡಿದೆ.
'ಕಳ್ಳರ ಹೆಸರೆಲ್ಲ ಮೋದಿ ಎಂದೇ ಇರುತ್ತದೆ ಏಕೆ' ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು. ‘ಮೋದಿ‘ ಎಂಬ ಉಪನಾಮದ ಬಗ್ಗೆ ಅಪಮಾನಕರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಶಾಸಕ ಪೂರ್ಣೇಶ್ ಅವರು ರಾಹುಲ್ ಗಾಂಧಿ ಮೇಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಈ ಬಗ್ಗೆ ಅಂತಿಮ ವಿಚಾರಣೆ ನಡೆಸಿ ತೀರ್ಪು ನೀಡಿರುವ ನ್ಯಾಯಾಲಯ, ರಾಹುಲ್ ಗಾಂಧಿಯವರನ್ನು ದೋಷಿ ಎಂದು ತೀರ್ಪು ನೀಡಿದ್ದು, 2 ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ. ಇದೇ ವೇಳೆ ರಾಹುಲ್ ಗಾಂಧಿಯವರು ಜಾಮೀನು ಪಡೆದು ಶಿಕ್ಷೆಯಿಂದ ಪಾರಾಗಿದ್ದಾರೆ.
2019ರ ಲೋಕಸಭೆ ಚುನಾವಣೆ ವೇಳೆ ಭಾಷಣ ಮಾಡಿದ್ದ ರಾಹುಲ್ ಗಾಂಧಿ, 'ಮೋದಿ' ಎಂಬ ಹೆಸರು ಹೊಂದಿರುವವರೆಲ್ಲರೂ ಕಳ್ಳರು ಎಂದು ಆರೋಪ ಮಾಡಿದ್ದರು. ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಈ ಹೆಸರು ಹೊಂದಿರುವವರನ್ನು ಉಲ್ಲೇಖಿಸಿದ್ದ ರಾಹುಲ್ ಗಾಂಧಿ, ಎಲ್ಲ ಮೋದಿಗಳೂ ಕಳ್ಳರು, ಮೋದಿ ಉಪನಾಮ ಹೊಂದಿರುವವರು ಕಳ್ಳರಾಗಲು ಹೇಗೆ ಸಾಧ್ಯ ಎಂದು ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದರು.