ರಜನಿಕಾಂತ್ ಪುತ್ರಿ ಮನೆಯಲ್ಲಿ ಚಿನ್ನ, ವಜ್ರಾಭರಣ ಕಳ್ಳತನ: ಮನೆಯಲ್ಲಿದ್ದವರಿಂದಲೇ ಕೃತ್ಯ: ಇಬ್ಬರ ಬಂಧನ
ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಹಾಗೂ ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್ ಮನೆಯಲ್ಲಿ ಕಳ್ಳತನ ನಡೆದಿದ್ದು, ಈ ಕಳ್ಳತನ ನಡೆಸಿರುವ ಮನೆ ಕೆಲಸ ಮಾಡುತ್ತಿದ್ದ ಮಹಿಳೆ ಹಾಗೂ ಕಾರು ಚಾಲಕನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಮನೆಯಲ್ಲಿ ಕೆಲಸ ಮಾಡುತ್ತಿದ್ದ ಈಶ್ವರಿ ಹಾಗು ಕಾರು ಚಾಲಕ ವೆಂಕಟೇಶನನ್ನು ಪೊಲೀಸರು ಬಂಧಿಸಿದ್ದಾರೆ. ಕಾರು ಚಾಲಕ ವೆಂಕಟೇಶ ಸ್ಕೆಚ್ ಹಾಕಿದ್ದು, ಮನೆಗೆಲಸದವಳಾದ ಈಶ್ವರಿ ಸುಮಾರು 100 ಗ್ರಾಂ ಚಿನ್ನಾಭರಣ, 30 ಗ್ರಾಂ ವಜ್ರಾಭರಣ ಮತ್ತು ನಾಲ್ಕು ಕೆಜಿ ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದಾಳೆ. ಕಳವು ಮಾಡಿದ ವಸ್ತುಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಮನೆ ಖರೀದಿಸಿದ್ದಾಳೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಐಶ್ವರ್ಯಾ ಮನೆಯಲ್ಲಿ ಕಳೆದ 18 ವರ್ಷಗಳಿಂದ ಮನೆಗೆಲಸ ಮಾಡುತ್ತಿದ್ದ ಈಶ್ವರಿ, ಮನೆಯ ಬಗ್ಗೆ ಸಂಪೂರ್ಣ ತಿಳಿದುಕೊಂಡಿದ್ದು, ಕೀ ಇಡುವ ಸ್ಥಳ ಗೊತ್ತಿದ್ದ ಕಾರಣ ಲಾಕರ್ ಅನ್ನು ಹಲವು ಬಾರಿ ತೆರೆದು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳವು ಮಾಡಲಾದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದು, ಜೊತೆಗೆ ಮನೆ ಆಸ್ತಿ ಖರೀದಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ವಶಕ್ಕೆ ಪಡೆಯಲಾಗಿದೆ.