ಹತ್ರಾಸ್ ದಲಿತ ಯುವತಿ ಮೇಲಿನ ಅತ್ಯಾಚಾರ-ಕೊಲೆ ಪ್ರಕರಣ: ಮೂವರು ಖುಲಾಸೆ, ಒಬ್ಬ ಮಾತ್ರ ದೋಷಿ
ಲಖನೌ: 2020ರಲ್ಲಿ ನಡೆದ ಹತ್ರಾಸ್ ದಲಿತ ಯುವತಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ಪೈಕಿ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿದ್ದು, ಒಬ್ಬ ಆರೋಪಿಯನ್ನು ಅಪರಾಧಿ ಎಂದು ಎಸ್‌ಸಿ/ಎಸ್‌ಟಿ ನ್ಯಾಯಾಲಯ ತೀರ್ಪು ನೀಡಿದೆ.
ದೇಶವೇ ಬೆಚ್ಚಿ ಬೀಳಿಸಿದ ಈ ಪ್ರಕರಣದ ನಾಲ್ವರು ಆರೋಪಿಗಳಾದ ಸಂದೀಪ್, ರವಿ, ಲವ್ ಕುಶ್ ಮತ್ತು ರಾಮು ಪೈಕಿ ಸಂದೀಪ್ ಮಾತ್ರ ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದೆ.
2020ರ ಸೆಪ್ಟೆಂಬರ್ 14ರಂದು ಹಾಥರಸ್‌ನಲ್ಲಿ 19 ವರ್ಷದ ದಲಿತ ಯುವತಿ ಮೇಲೆ ನಾಲ್ವರು ಮೇಲ್ಜಾತಿ ಪುರುಷರು ಅತ್ಯಾಚಾರವೆಸಗಿದ್ದು, ಬಳಿಕ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಈ ಪ್ರಕರಣ ದೇಶಾದ್ಯಂತ ದೊಡ್ಡ ಕೋಲಾಹಲಕ್ಕೆ ಕಾರಣವಾಗಿತ್ತು.
ಅತ್ಯಾಚಾರಕ್ಕೊಳಗಾಗಿದ್ದ ದಲಿತ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಂತ್ರಸ್ತೆ ಸೆಪ್ಟೆಂಬರ್ 29 ರಂದು ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.
ಈ ಪ್ರಕರಣ ದೇಶದ ಜನರನ್ನೇ ಬೆಚ್ಚಿಬೀಳಿಸಿದ್ದು, ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ಆಕೆಯ ಮನೆಯ ಸಮೀಪವೇ ರಾತ್ರೋರಾತ್ರಿ ಮಾಡಲಾಗಿತ್ತು. ಆಕೆಯ ಅಂತ್ಯಕ್ರಿಯೆಯನ್ನು ಆದಷ್ಟು ಬೇಗ ನಡೆಸುವಂತೆ ಸ್ಥಳೀಯ ಪೊಲೀಸರು ಒತ್ತಡ ಹಾಕಿದ್ದರು ಎಂದು ಆಕೆಯ ಕುಟುಂಬದವರು ಆರೋಪಿಸಿದ್ದರು.
ಮೂರು ಮಂದಿ ಆರೋಪಿಗಳ ಖುಲಾಸೆಯಿಂದ ಅಸಮಾಧಾನಗೊಂಡಿದ್ದು, ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಶೀಘ್ರವೇ ಹೈಕೋರ್ಟ್ ಮೆಟ್ಟಿಲೇರುವುದಾಗಿ ಸಂತ್ರಸ್ತೆಯ ಕುಟುಂಬ ತಿಳಿಸಿದೆ.
ಆರೋಪಿಗಳ ಪೈಕಿ ಸಂದೀಪ್ಗೆ ಕೂಡ ಎಸ್‌ಸಿ/ಎಸ್‌ಟಿ ಕಾಯ್ದೆ (ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ವಿರುದ್ಧ ದೌರ್ಜನ್ಯ ಮತ್ತು ದ್ವೇಷದ ಅಪರಾಧಗಳನ್ನು ತಡೆಗಟ್ಟಲು ಇರುವ ಕಾಯ್ದೆ)ಯಡಿ ಶಿಕ್ಷೆ ವಿಧಿಸಲಾಗಿದೆ ಹೊರತು ಅತ್ಯಾಚಾರಕ್ಕೆ ಸಂಬಂಧಪಟ್ಟ ಪ್ರಕರಣ ಹಾಕಲಾಗಿಲ್ಲ. ಈ ಪ್ರಕರಣದಲ್ಲಿ ರೇಪ್ ಕೇಸ್ ದಾಖಲಿಸದೆ ಇರುವುದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಟೀಕೆಗೆ ಕಾರಣವಾಗಿದೆ. ಪ್ರತಿಪಕ್ಷಗಳು ಈ ವಿಷಯ ಇಟ್ಟುಕೊಂಡು ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಹರಿಹಾಯುತ್ತಿವೆ.