ಪೊಲೀಸರು ಹೀಗೂ ಇದ್ದಾರೆ!! ಇದನ್ನು ನೀವು ಓದಲೇಬೇಕು....
✍️- ಡಿ. ಐ. ಅಬೂಬಕರ್ ಕೈರಂಗಳ
ಪೊಲೀಸರೆಂದರೆ ಕ್ರೂರಿಗಳು, ಕರುಣೆಯಿಲ್ಲದವರು ಎಂಬ ಭಯ. ಖಾಕಿ ಕಂಡರೆ ನಡುಗುವ ಜನರಿದ್ದಾರೆ. ಆದರೆ ಪೊಲೀಸರಲ್ಲೂ ಅಂತಃಕರಣ ಮಿಡಿಯುವವರಿದ್ದಾರೆ. ಅವರೂ ಕೂಡಾ ನಮ್ಮ ಹಾಗೆ ಮನುಷ್ಯರು. ಕೆಲವೊಮ್ಮೆ ಪರಿಸ್ಥಿತಿ ಅವರನ್ನು ನಿಷ್ಠುರಗೊಳಿಸುವುದೂ ಇದೆ.
ಇಲ್ಲಿ ವೀಡಿಯೋದಲ್ಲಿ ಕಾಣುತ್ತಿರುವುದು ಕೇರಳದ ಪಾಲಕ್ಕಾಡ್ ಜಿಲ್ಲೆಯ ಒಟ್ಟಪಾಲಂ ಪೊಲೀಸ್ ಸ್ಟೇಶನ್ನಿನ ದೃಶ್ಯ.
ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಕಷ್ಟದಿಂದ ಸಾಕುತ್ತಿರುವ ಓರ್ವ ಬಡ ವನಿತೆ ಅಖಿಲ. ಎರಡು ದಿನಗಳಿಂದ ಹೊಟ್ಟೆಗೆ ಆಹಾರವಿಲ್ಲದೆ ಚಡಪಡಿಸಿದಾಗ ಮಕ್ಕಳನ್ನು ಕೂಡಿಕೊಂಡು ಸೀದಾ ಒಟ್ಟಪಾಲಂ ಪೊಲೀಸ್ ಸ್ಟೇಶನಿಗೆ ಹೋಗಿ ಅಹವಾಲು ಹೇಳಿದ್ದಾಳೆ. ಗಲಾಟೆ, ದೊಂಬಿ, ವಂಚನೆ ಮುಂತಾದ ಅಪರಾಧಗಳಿಗೆ ದೂರು ಕೊಡಲು ಹೋಗುವಂತಹ ಪೊಲೀಸ್ ಸ್ಟೇಶನಿಗೆ ನಾವು ಎರಡು ದಿನದಿಂದ ಏನೂ ತಿಂದಿಲ್ಲ ಎಂದು ದೂರು ಕೊಡಲು ಹೋದ ಮಹಿಳೆ ಬಹುಶ ಇವಳೇ ಮೊದಲಿಗಳಾಗಿರಬೇಕು!!
ಎಸ್ಸೈ ಹೊರಹೋಗಿದ್ದ ಕಾರಣ, ಸ್ಟೇಶನ್ ನಲ್ಲಿ ಇದ್ದ ಬಿನು ಎಂಬ ಪೊಲೀಸ್ ಆಕೆಯ ಅಹವಾಲಿಗೆ ತಕ್ಕ ಸ್ಫಂದಿಸಿದರು. ಬೇರೆ ಕಡೆಯಾಗಿದ್ದರೆ ಇದೆಲ್ಲ ಪೊಲೀಸ್ ಸ್ಟೇಶನ್ ನಲ್ಲಿ ಹೇಳಬೇಕಾದ ವಿಷಯವಲ್ಲ ಎಂದು ಗದರಿಸಿ ಕಳುಹಿಸುತ್ತಿದ್ದರೋ ಏನೋ.
ಬಿನು ಪೊಲೀಸ್ ಮಾತ್ರ ತಾಯಿ ಮತ್ತು ಇಬ್ಬರು ಮಕ್ಕಳನ್ನು ಪೊಲೀಸ್ ಮೆಸ್ಸ್ ಗೆ ಕರಕೊಂಡು ಹೋಗಿ ತಾನೇ ಕೈಯ್ಯಾರೆ ಅನ್ನ ಬಡಿಸಿಕೊಟ್ಟರು. ಈಚೆ ಬಂದು ಉಳಿದ ಪೊಲೀಸರಿಗೆ ವಿಷಯ ತಿಳಿಸಿ ಹಣ ಸಂಗ್ರಹ ಮಾಡಿದರು. ಅವರು ಊಟ ಮುಗಿಸಿ ಬಂದಾಗ ಹಣವನ್ನೂ ಕೈಗಿತ್ತು ಅವಳ ನಂಬರ್ ಪಡಕೊಂಡು ಕಳುಹಿಸಿಕೊಟ್ಟರು. ಈ ವಿಷಯ ತಿಳಿದಾಗ ಮೇಲಧಿಕಾರಿಗಳೂ ಅಭಿನಂದಿಸಿದರು. ಹೊರಗಡೆ ಸುದ್ಧಿಯಾದಾಗ ಅನೇಕ ನಾಗರಿಕರು ಆ ಬಡ ಮಹಿಳೆಗೆ ಸಹಾಯ ಹಸ್ತ ಚಾಚಿದರು. ಆಕೆಯ ಪಕ್ಕದ ಮನೆಯವರು ಕೂಡಾ ಆಕೆಯ ಕಷ್ಟದ ವಿಷಯ ತಿಳಿದುದು ಆಗಲೇ ಅನ್ನುತ್ತಾರೆ.
ಇದೀಗ ಕತಾರ್ ನ ಒಂದು ಸೇವಾ ಸಮಿತಿ ಆ ಬಡ ಕುಟುಂಬಕ್ಕೆ ಹೊಸ ಮನೆ ನಿರ್ಮಿಸಿಕೊಡಲು ಮುಂದಾಗಿದೆ. ಒಟ್ಟಾರೆ ಓರ್ವ ಮಾನವೀಯತೆಯುಳ್ಳ ಪೊಲೀಸನ ಉದಾರ ಮನಸ್ಥಿತಿಯಿಂದ ಎರಡು ಅನಾಥ ಮಕ್ಕಳು ಮಕ್ಕಳು ಮತ್ತು ಬಡತಾಯಿಯ ಒಂದು ಕುಟುಂಬ ನೆಮ್ಮದಿಯ ಜೀವನ ನಡೆಸುವಂತಾಗಿದೆ.
ಬಿನು ಪೊಲೀಸ್ ಗೆ ನನ್ನ ಅಭಿನಂದನೆಗಳು....