ತಾಯಿ ಮಲಗಿದ್ದಾಳೆ ಎಂದು 2 ದಿನ ಶವದೊಂದಿಗೆ ಕಾಲ ಕಳೆದ ಬಾಲಕ..! ಮುಂದೆ ಏನಾಯಿತು ನೋಡಿ...
ಬೆಂಗಳೂರು: ತಾಯಿ ಮಲಗಿದ್ದಾರೆ ಅಂದುಕೊಂಡ 14 ವರ್ಷದ ಬಾಲಕ ತನ್ನ ಮೃತ ತಾಯಿಯ ಶವದೊಂದಿಗೆ 2 ದಿನ ಕಳೆದಿರುವ ಘಟನೆ ಬೆಂಗಳೂರಿನ ಆರ್.ಟಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಾಲಕನಿಗೆ ತನ್ನ ತಾಯಿ ಸತ್ತಿರುವುದು ಗೊತ್ತಿಲ್ಲದೇ, ಆಕೆ ತನ್ನೊಂದಿಗೆ ಕೋಪ ಮಾಡಿಕೊಂಡು ಮಲಗಿದ್ದಾಳೆ, ಹೀಗಾಗಿ ತನ್ನ ಜೊತೆ ಮಾತನಾಡುತ್ತಿಲ್ಲ ಎಂದು ಬಾಲಕ ಭಾವಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಆರ್.ಟಿ.ನಗರ ಠಾಣೆ ವ್ಯಾಪ್ತಿಯ ರೇಣುಕಾ ಯಲ್ಲಮ್ಮ ಗಂಗಮ್ಮ ದೇವಸ್ಥಾನ ಬಳಿ ಇರುವ ಮನೆಯಲ್ಲಿ ಈ ಘಟನೆ ನಡೆದಿದೆ. ಫೆಬ್ರವರಿ 26 ರಂದು ಲೋ ಬಿಪಿ ಮತ್ತು ಶುಗರ್ನಿಂದಾಗಿ 44 ವರ್ಷದ ಅಣ್ಣಮ್ಮ ಎಂಬ ಮಹಿಳೆ ಮಲಗಿದ್ದಲ್ಲೇ ಮೃತಪಟ್ಟಿದ್ದರು. ಫೆಬ್ರವರಿ 28ರ ವರೆಗೂ ಮನಾಗಿದ್ದಾಳೆ ಎಂದೇ ಭಾವಿಸಿ ಬಾಲಕ ತನ್ನ ತಾಯಿಯ ಶವದ ಜೊತೆಗೆ ಕಾಲ ಕಳೆದಿದ್ದಾನೆ.
ಬಾಲಕ ಮನೆಯಿಂದ ಹೊರಗೆ ಬಂದು ಊಟ, ತಿಂಡಿ ತೆಗೆದುಕೊಂಡು ಮತ್ತೆ ಮನೆ ಸೇರಿಕೊಳ್ಳುತ್ತಿದ್ದನಂತೆ. ರಾತ್ರಿ ಪೂರ್ತಿ ತಾಯಿಯ ಶವದ ಜೊತೆಯಲ್ಲೇ ಮಲಗಿ ಕಾಲ ಕಳೆಯುತ್ತಿದ್ದ. ತಾಯಿ ಸಾವನ್ನಪ್ಪಿರುವ ವಿಷಯ ತಿಳಿಯದ ಬಾಲಕ ಏರಿಯಾದ ಜನರಿಗೆ ತಾಯಿ ಸಾವಿನ ಬಗ್ಗೆ ಕೊಂಚವೂ ಮಾಹಿತಿ ನೀಡಿಲ್ಲ.
2 ದಿನ ಕಳೆದ ನಂತರ ತಂದೆ ಸ್ನೇಹಿತರಿಗೆ ತನ್ನ ತಾಯಿ ಮಾತನಾಡುತ್ತಿಲ್ಲ ಎಂದು ಬಾಲಕ ಹೇಳಿದ್ದಾನೆ. ಆಗ ತಂದೆಯ ಸ್ನೇಹಿತರು ಮನೆಗೆ ಬಂದು ನೋಡಿದಾಗ ಅಣ್ಣಮ್ಮ ಶವವಾಗಿದ್ದರು. ಕಳೆದ 1 ವರ್ಷದ ಹಿಂದೆಯಷ್ಟೇ ಕಿಡ್ನಿ ವೈಫಲ್ಯದಿಂದ ಅಣ್ಣಮ್ಮ ಪತಿ ಸಾವನ್ನಪ್ಪಿದ್ದರು. ಇದರಿಂದಾಗಿ ತಾಯಿ ಹಾಗು ಮಗ ಇಬ್ಬರೇ ಮನೆಯಲ್ಲಿ ವಾಸವಿದ್ದರು.ಈಗ ತಾಯಿ ಕೂಡ ಸಾವನ್ನಪ್ಪಿರುವುದು ಬಾಲಕನ ಪಾಲಿಗೆ ಯಾರೂ ಇಲ್ಲದಂತಾಗಿದೆ.