ಕೋಲ್ಕತ್ತಾದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಸಿಗರೇಟ್ ಸೇದಿ ಸಿಕ್ಕಿಬಿದ್ದ ಯುವತಿ! ಮುಂದೆ ಏನಾಯಿತು ನೋಡಿ...
ಬೆಂಗಳೂರು: ಕೋಲ್ಕತ್ತಾದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಇಂಡಿಗೊ ವಿಮಾನದಲ್ಲಿ ಯುವತಿಯೊಬ್ಬಳು ಸಿಗರೇಟ್ ಸೇದಿ ಆತಂಕ ಮೂಡಿಸಿದ ಘಟನೆ ಮಾರ್ಚ್ 5ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪಶ್ಚಿಮ ಬಂಗಾಳದ ಯುವತಿ ಪ್ರಿಯಾಂಕ ಚಕ್ರವರ್ತಿ (24) ಎಂಬಾಕೆ ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೊ ವಿಮಾನದ ಶೌಚಾಲಯದಲ್ಲಿ ಸಿಗರೇಟ್ ಸೇದಿದ್ದಾಳೆ. ಮಾ. 5ರಂದು 6ಇ716 ವಿಮಾನ ಬೆಂಗಳೂರಿಗೆ ಬಂದಿಳಿಯುವ ಅರ್ಧ ಗಂಟೆಗೂ ಮುನ್ನ ಸಿಗರೇಟ್ ಸೇದಿದ್ದಾಳೆ ಎಂದು ಹೇಳಲಾಗಿದೆ.
ಇದನ್ನು ಅರಿತ ವಿಮಾನದೊಳಗಿದ್ದ ಸಿಬ್ಬಂದಿಗಳು ತಕ್ಷಣವೇ ಶೌಚಾಲಯದ ಬಾಗಿಲು ತೆಗಿಸಿದ್ದಾರೆ. ಬಳಿಕ ಸಿಗರೇಟನ್ನು ಡಸ್ಟ್‌ಬಿನ್‌ಗೆ ಹಾಕಿ ನೀರು ಸುರಿದಿದ್ದಾರೆ ಎಂದು ಹೇಳಲಾಗಿದೆ.
ವಿಮಾನ ಬೆಂಗಳೂರಿನಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಪ್ರಿಯಾಂಕರನ್ನು ಭದ್ರತಾ ವಿಭಾಗಕ್ಕೆ ಒಪ್ಪಿಸಲಾಗಿದೆ. ಪ್ರಯಾಣಿಕರ ಜೀವ ಮತ್ತು ವಯಕ್ತಿಕ ಸುರಕ್ಷತೆಗೆ ಅಪಾಯ ಉಂಟು ಮಾಡಿದ ಆರೋಪದಡಿ ಪ್ರಿಯಾಂಕ ಚಕ್ರವರ್ತಿಯನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿ, ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.