ಕಲ್ಕಟ್ಟದ ಈ ಯುವಕರ ಸೇವೆ ನಿಜಕ್ಕೂ ಅದ್ಭುತ... ಮಾದರೀಯೋಗ್ಯ

ಕಲ್ಕಟ್ಟದ ಈ ಯುವಕರ ಸೇವೆ ನಿಜಕ್ಕೂ ಅದ್ಭುತ... ಮಾದರೀಯೋಗ್ಯ

-ಡಿ. ಐ. ಅಬೂಬಕರ್, ಕೈರಂಗಳ 

ದೇರಳಕಟ್ಟೆ - ಮಂಜನಾಡಿ ರಸ್ತೆಯಲ್ಲಿ ಸುಮಾರು ಎರಡು ಕಿ.ಮೀ. ಸಾಗಿದರೆ ಸಿಗುವ ಒಂದು ಜಂಕ್ಷನ್ ಕಲ್ಕಟ್ಟ. ಇದೀಗ ನನ್ನೂರು. 

ಇಲ್ಲಿನ " ಖಾಜಾ ಗರೀಬ್ ನವಾಝ್" ( KGN) ಎಂಬ ಒಂದು ಯುವಕರ ಒಕ್ಕೂಟ ನಡೆಸುತ್ತಿರುವ ಚಾರಿಟಿ ಚಟುವಟಿಕೆಗಳು ಅಚ್ಚರಿದಾಯಕ. ಚಾರಿಟಿ ಪ್ರವರ್ತಿಯ ಅದೆಷ್ಟೋ ಸಂಘಟನೆಗಳನ್ನು ಕಂಡಿದ್ದೇನೆ, ಶಾಮೀಲಾಗಿ ಕೆಲಸ ಮಾಡಿದ್ದೇನೆ, ಆದರೆ ಇಂತಹ ಒಂದು ಕ್ಷಿಪ್ರಗತಿಯ, ಪಾರದರ್ಶಕ ವೇಗದ, ಇಷ್ಟೊಂದು ಒಗ್ಗಟ್ಟು, ಪ್ರಾಮಾಣಿಕತೆ, ಅರ್ಪಣಾ ಪ್ರಜ್ಞೆಯ ಒಂದು ಸೇವಾ ಸಂಘವನ್ನು ನಾನು ಕಂಡಿಲ್ಲ.

ಹಲವು ವರ್ಷಗಳಿಂದ ಕ್ರಿಯಾಶೀಲವಾಗಿರುವ ಈ ಕೆಜಿನ್ ಫ್ರೆಂಡ್ಸ್ ಸರ್ಕಲ್ ನಿಂದ ನಡೆದ ಸೇವಾ ಕಾರ್ಯಗಳನ್ನು ವಿವರಿಸುವುದಾದರೆ ಒಂದು ಬೃಹತ್ ಗ್ರಂಥವೇ ಬೇಕಾದೀತು. 

ಇವರ ಸೇವಾವೃತ್ತಿ ಎಷ್ಟು ವೇಗಗತಿ ಹಾಗೂ ಅಮೋಘ  ಎನ್ನುವುದಕ್ಕೆ ನಿದರ್ಶನವಾಗಿರುವ ಒಂದು ಉದಾತ್ತ ಕ್ರಿಯಾಶೀಲತೆ ನಿನ್ನೆ ಮೊನ್ನೆಯಂತೆ ಇಲ್ಲಿ ನಡೆಯಿತು. ಇದನ್ನು ನೀವು ಅರಿತರೆ ಇದುವರೆಗೆ ನಾನು ಹೇಳಿಕೊಂಡು ಬಂದುದರಲ್ಲಿ ಯಾವುದೇ ಉತ್ಪೇಕ್ಷೆ  ಇಲ್ಲವೆಂಬುದನ್ನು ನೀವೇ ಹೇಳುತ್ತೀರಿ! 

ಕಲ್ಕಟ್ಟದ ಹಾರಿಸ್ ಎಂಬ ಯುವಕ ಈ ಪವಿತ್ರ ರಮಳಾನ್ ಮಾಸದಲ್ಲಿ ನಿಧನರಾದರು. ಇವರ ಬಗ್ಗೆ ; ಒಬ್ಬರು ಬರೆದ ಒಂದು ಬರಹವನ್ನು ಯಥಾವತ್ತಾಗಿ ಇಲ್ಲಿ ಕೊಡುತ್ತೇನೆ; 

" ರಮಳಾನಿನ ರಹ್ಮತ್ತಿನ ಹತ್ತರಲ್ಲಿ ಅಲ್ಲಾಹನ ಕಡೆಗೆ ಮರಳಿದ ಹಾರಿಸ್! ನೀನು ಭಾಗ್ಯವಂತ. ನಿನಗಾಗಿ  ನಿನ್ನ ಸ್ನೇಹಿತರು ಈ ರಮಳಾನಿನಲ್ಲಿ ಪವಿತ್ರ ಮಕ್ಕಾದಲ್ಲಿ ಉಮ್ರಾ ನಿರ್ವಹಿಸಿದರು‌. ನಿನಗಾಗಿ ಹಬೀಬರ ( ಸ) ಸನ್ನಿಧಿಯಲ್ಲಿ ದುಆ ಮಾಡಿದರು. ಖದೀಜಾ ಬೀವಿಯವರ ( ರ) ಸಾನ್ನಿಧ್ಯದಲ್ಲಿ ಪ್ರಾರ್ಥಿಸಿದರು. ನೀನು ಭಾಗ್ಯವಂತ ಗೆಳೆಯ. ಅಲ್ಲಾಹನು ಎಲ್ಲರ ದುಆ ಸ್ವೀಕರಿಸಿ  ನಿನಗೆ ಜನ್ನತುಲ್ ಫಿರ್ದೌಸ್ ನೀಡಿ ಅನುಗ್ರಹಿಸಲಿ, ಆಮೀನ್. 

ಚುರುಚುರುಕಿನ, ನಾಡಿನ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ ಹಾರಿಸ್ ಮಾರಕ ಕಾಯಿಲೆಗೆ ತುತ್ತಾಗಿ ತಿಂಗಳ ಹಿಂದೆಯೇ ಆಸ್ಪತ್ರೆಯಲ್ಲಿದ್ದಾಗ ಕೆಜಿಎನ್ ಸಂಘದವರು ಆರ್ಥಿಕ  ಸಹಾಯ ನೀಡುತ್ತಾ ಬಂದಿದ್ದರು.  ಕಾಯಿಲೆ ವಾಸಿಯಾಗುವ ಆಸೆ ಕೈಬಿಟ್ಟು ಮರಣವನ್ನು ಎದುರು ನೋಡುವ ಹಂತ ತಲುಪಿದಾಗ ಹಾರಿಸ್ ತನ್ನ ಪತ್ನಿಯೊಡನೆ; 

" ನಾನು ಮರಣ ಹೊಂದಿದರೆ ನೀನು ತವರು ಮನೆ ಉಳ್ಳಾಲಕ್ಕೆ ಹೋಗಬಾರದು‌.  ಕಲ್ಕಟ್ಟಾದಲ್ಕೇ ನನ್ನ ಮನೆಯಲ್ಲೇ ಇರಬೇಕು, ಕಲ್ಕಟ್ಟದ ನನ್ನ ಮಿತ್ರರು ನಿನ್ನ ಕೈ ಬಿಡಲಾರರು " ಅಂದಿದ್ದರಂತೆ. 

ಕೆಜಿಎನ್ ಗೆಳೆಯರು ಆ ಮಾತನ್ನು ಅಕ್ಷರಶ ಪಾಲಿಸಿದರು. ಮರಣದ ದಿನದಂದು ಹಾರಿಸ್ ರವರ ಅಂತ್ಯ ಸಂಸ್ಕಾರವನ್ನು ಬಹಳ ಭಾವುಕತೆಯಿಂದ ಮಾಡಿ ಮುಗಿಸಿದ ತಕ್ಷಣ ಊರಲ್ಲಿ ಮತ್ತು ಗಲ್ಫ್ ದೇಶಗಳಲ್ಲಿರುವ ಸಂಘದ ಸದಸ್ಯರಿಗೆ ಎಮರ್ಜೆನ್ಸಿ ಕಲೆಕ್ಷನ್ ಗೆ  ಸಹಾಯಧನ ನೀಡುವಂತೆ ಮೆಸೇಜು ತಲುಪಿದ್ದೇ ತಡ, ಒಬ್ಬೊಬ್ಬರು ಐದು, ಎರಡು, ಮೂರು ಸಾವಿರದಂತೆ ಅವರವರ ಶಕ್ತಿಯನುಸಾರ ಹಣ ಕಳುಹಿಸಿದರು. ಕೆಲವೇ ತಾಸಿನೊಳಗೆ ಒಂದೂವರೆ ಲಕ್ಷ ರೂಪಾಯಿ ಜಮೆಯಾಗಿತ್ತು. ಇದನ್ನು ಹಾರಿಸ್ ರವರ ಪತ್ನಿ ಮಕ್ಕಳಿಗೆ ಸದ್ಯದ ಸಹಾಯ ಎಂಬಂತೆ ಹಸ್ತಾಂತರಿಸಿದ ಸಂಘದವರು ಆ ವಿಧವೆ ಮತ್ತು ಅನಾಥ ಮಕ್ಕಳಿಗೊಂದು  ಮನೆ, ಮಕ್ಕಳ ಶಿಕ್ಷಣ, ಜೀವನ ಮಾರ್ಗವನ್ನೆಲ್ಲ ಒಳಗೊಂಡ ಒಂದು ಯೋಜನೆಗೆ ಅಡಿಪಾಯ ಹಾಕಿ ಕ್ರಿಯಾಶೀಲರಾದರು. ಸಂಘದವರು ನಡೆಸಿದ ಇನ್ನೊಂದು ಹೃದಯಸ್ಪರ್ಶಿ ಕಾರ್ಯವೇನೆಂದರೆ ಮರ್ಹೂಮ್  ಹಾರಿಸ್ ರವರು ಕೊಡಬೇಕಾಗಿದ್ದ ಸಾಲದ ಚುಕ್ತಾದ ವಿಚಾರ. ಮೃತನಿಗೆ ಸಾಲ ಬಾಕಿ ಇದ್ದರೆ ಪ್ರವಾದಿಯವರು ( ಸ) ಮಯ್ಯಿತ್ ನಮಾಝ್ ಮಾಡುತ್ತಿರಲಿಲ್ಲ, ಯಾರಾದರೂ ಸಹಾಬಿಗಳು ಮೃತನ ಸಾಲದ ಹೊಣೆ ವಹಿಸಿಕೊಂಡರೆ ಮಾತ್ರ ನಮಾಝ್ ಮಾಡುತ್ತಿದ್ದರು ಎಂಬ ಹದೀಸ್ ಸಾಲಬಾಧಿತನಾಗಿ ಮರಣ ಹೊಂದುವುದು ಮೃತನ ಪಾಲಿಗೆ ಪಾರತ್ರಿಕ ವಿಚಾರದಲ್ಲಿ ಭಾರೀ ಕಷ್ಟದ ವಿಷಯ ಎಂಬುದನ್ನು ಸೂಚಿಸುತ್ತಿದೆ. ಮೃತನ ಮೇಲೆ ನಿಜವಾದ ಪ್ರೀತಿ ಇದ್ದರೆ ಅವನ ಆತ್ಮಶಾಂತಿಗಾಗಿ ಸಾಲಮುಕ್ತ ಗೊಳಿಸುವ ಕಾರ್ಯವಿದೆಯಲ್ಲ? ಅದು ಎಲ್ಲಾ ವಿಧ ಐಹಿಕ ಸಹಾಯಗಳಿಗಿಂತ ಶ್ರೇಷ್ಠವಾಗಿದೆ. ಈ ಕಾರ್ಯವನ್ನು ಕಲ್ಕಟ್ಟದ  ಕೆಜಿಎನ್ ಸಂಘದವರು ಮಾಡಿದ್ದು ನಿಜಕ್ಕೂ ಮಾದರೀಯೋಗ್ಯ ಕ್ರಮವಾಗಿದೆ. ಹಾರಿಸ್ ಋಣಭಾರ ಹೊಂದಿರುವ ಪ್ರತಿಯೊಬ್ಬರನ್ನೂ ಭೇಟಿಯಾಗಿ ಸಾಲದ ಹೊಣೆಯನ್ನು ಸಂಘದವರು ವಹಿಸಿಕೊಂಡಾಗ  ಎಲ್ಲಾ  ಸಾಲಿಗರು ಬಂದು  ಸಾಲವನ್ನು ಮನ್ನಾ ಮಾಡುವ ಮೂಲಕ ನಾವು ಕೂಡಾ ಸೇವಾವಾಂಛೆಯಲ್ಲಿ ನಿಮಗಿಂತ ಕಡಿಮೆ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 

ಈ ವಿಷಯದಲ್ಲಿ ಕೆಜಿಎನ್ ಸಂಘದವರ ಹಾಗೆಯೇ ಸಾಲಮನ್ನಾ ಮಾಡಿದ ಸಹೃದಯರೂ ಕೂಡಾ ಪ್ರಶಂಸಾರ್ಹರಾಗಿದ್ದಾರೆ‌. ಇನ್ನು ಯಾರಾದರೂ ಬಾಕಿ ಇದ್ದರೆ ತಮ್ಮನ್ನು ಭೇಟಿಯಾಗಿ ಚುಕ್ತಾ ಮಾಡಬೇಕೆಂದು ಸಂಘದವರು ಯೋಜನೆಯನ್ನು ತೆರೆದೇ ಇಟ್ಟಿದ್ದಾರೆ.

ಕುಟುಂಬ ಪೋಷಣೆಯ ಭಾರದ ಜೊತೆಗೆ  ತೀವ್ರ ಅನಾರೋಗ್ಯ ಪೀಡಿತರಾದ ಹಾರಿಸ್ ರವರು ಗತ್ಯಂತರವಿಲ್ಲದೆ ಬ್ಯಾಂಕಲ್ಲಿ ಚಿನ್ನ ಅಡವಿಟ್ಟು ಸಾಲ ಪಡಕೊಂಡಿದ್ದನ್ನು ಕೂಡಾ ಕೆಜಿಎನ್ ಸಂಘ ಪರಿಗಣನೆಗೆ ತಂದು ಕೊಂಡು ಅದರ ಪರಿಹಾರವನ್ನು ಕೂಡಾ ಮಾಡಿದ್ದಾರೆ. 

ಈ ಸಂಘದವರು ಕೆಲ ವರ್ಷಗಳ ಹಿಂದೆ ಓರ್ವ ಅಸಹಾಯಕರಿಗೆ ಸ್ವಂತ ವೆಚ್ಚದಲ್ಲಿ  ಹೊಸ ಮನೆ ಕಟ್ಟಿಸಿಕೊಟ್ಟು ಗೃಹ ಪ್ರವೇಶದ ಕಾರ್ಯಕ್ರಮವನ್ನು ಕೂಡಾ ಸ್ವಂತ ಮನೆಯ ಹಾಗೇ ಉತ್ಸಾಹದಿಂದ ನೆರವೇರಿಸಿ ಕೊಟ್ಟಿದ್ದ ದೃಶ್ಯ ಕೂಡಾ ನನ್ನ ಕಣ್ಣ ಮುಂದೆ ಇದೆ. 

ಕೆಜಿಎನ್ ಸಂಘದವರು ಇಷ್ಟೆಲ್ಲ ಮಾಡುತ್ತಿರುವುದು ಪ್ರಚಾರ ಪ್ರಿಯತೆಯಿಂದಲ್ಲ. ನಾನೇ ಸ್ವಯಂ ಪ್ರೇರಿತನಾಗಿ, ಅವರ ಸೇವೆ ಕಂಡು ಭಾವುಕನಾಗಿ ಇದು ಬರೆದಿದ್ದೇನೆ. ಬರೆದುದರ ಬಗ್ಗೆ ಅವರಿಗೆ ಅಸಮಾಧಾನ ಇರಬಹುದೇನೋ ಎಂಬ ಅಳುಕು ನನ್ನನ್ನು ಕಾಡುತ್ತಿದ್ದರೂ ಉಳಿದವರಿಗೆ ಮಾದರಿಯಾಗಲಿ, ಚಾರಿಟಿ  ಪ್ರವರ್ತಿಗಳಲ್ಲಿ ಹೀಗೇ ಎಲ್ಲಾ ಅಂಶಗಳನ್ನೂ ಗಮನದಲ್ಲಿಟ್ಟು ಅರ್ಥಪೂರ್ಣ ಗೊಳಿಸುವಂತಾಗಲಿ ಎಂಬ ಏಕೈಕ ಉದ್ದೇಶದಿಂದ ಇದನ್ನು ಬರೆದಿರುತ್ತೇನೆ. 

ಕೆಜಿ ಎನ್ ಸಂಘದವರೊಡನೆ ಕ್ಷಮೆಯಾಚಿಸುತ್ತಾ ಅಲ್ಲಾಹು ಅವರ ಈ ಅಮೋಘ ಪುಣ್ಯಕಾರ್ಯವನ್ನು ಸ್ವೀಕರಿಸಿ ಪ್ರತಿಯೊಬ್ಬರಿಗೂ ಆಯುರಾರೋಗ್ಯ, ಬರಕತ್ ಕರುಣಿಸಲಿ, ಆಮೀನ್ ಎಂದು ಆತ್ಮಾರ್ಥವಾಗಿ ದುಆ ಮಾಡುತ್ತಿದ್ದೇನೆ.

Ads on article

Advertise in articles 1

advertising articles 2

Advertise under the article