
ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯ ಬೆನ್ನಲ್ಲೇ ಸಿಎಂ ಬೊಮ್ಮಾಯಿಯ ಎಲ್ಲ ಕಾರ್ಯಕ್ರಮ ರದ್ದು; ಸರ್ಕಾರಿ ಸವಲತ್ತುಗಳನ್ನು ತ್ಯಜಿಸಿದ ಸಚಿವರು
Thursday, March 30, 2023
ಬೆಂಗಳೂರು: ಕೇಂದ್ರ ಚುನಾವಣಾ ಆಯೋಗವು ಬುಧವಾರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆ ಮಾಡುತ್ತಿದ್ದು, ಅದರ ಬೆನ್ನಲ್ಲೇ ನೀತಿ ಸಂಹಿತೆ ಕೂಡ ಜಾರಿಯಾಗಿದೆ. ಇದರಿಂದಾಗಿ ಸಾಂವಿಧಾನಿಕ ಸ್ಥಾನಮಾನಗಳಲ್ಲಿರುವ ರಾಜಕೀಯ ನೇತಾರರು ಹಾಗೂ ಸರ್ಕಾರಿ ಸವಲತ್ತುಗಳನ್ನು ಹೊಂದಿರುವ ರಾಜಕೀಯ ನೇತಾರರು ಆ ಎಲ್ಲಾ ಸೌಲಭ್ಯಗಳನ್ನು ತ್ಯಜಿಸಬೇಕಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಪ್ಪಳ, ಹಾವೇರಿ ಮತ್ತು ಧಾರವಾಡಕ್ಕೆ ನಿನ್ನೆ ಕಾರ್ಯಕ್ರಮಕ್ಕಾಗಿ ತೆರಳಬೇಕಿತ್ತು. ಜೊತೆಗೆ ಇಂದು ನಡೆಯಬೇಕಿದ್ದ ವಿಜಯಪುರ ಮತ್ತು ಬಾಗಲಕೋಟೆ ಭೇಟಿ ಕೂಡಾ ನಿನ್ನೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ರದ್ಧು ಪಡಿಸಲಾಗಿದೆ.
ನೀತಿ ಸಂಹಿತೆ ಜಾರಿಯ ಬೆನ್ನಲ್ಲೇ ಬುಧವಾರ ಸಚಿವ ಸಂಪುಟದ ಸಚಿವರು ತಮ್ಮ ವಾಹನಗಳನ್ನು ಒಪ್ಪಿಸಿ, ಬೆಂಗಾವಲು ಮತ್ತು ಪೈಲಟ್ ವಾಹನಗಳಿಲ್ಲದೆ ತಮ್ಮ ಖಾಸಗಿ ವಾಹನಗಳಲ್ಲಿ ಬೊಮ್ಮಾಯಿ ಅವರ ನಿವಾಸಕ್ಕೆ ಆಗಮಿಸಿದರು.