ಗೌರವ ಡಾಕ್ಟರೇಟ್ ಪುರಸ್ಕೃತ ಡಾ.ಕಣಚೂರು ಮೋನುಗೆ ಅದ್ದೂರಿಯಾಗಿ ನಡೆದ ಹುಟ್ಟೂರ ನಾಗರಿಕ ಸನ್ಮಾನ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರಾದ ಡಾ.ಹಾಜಿ U.K.ಮೋನು ಅವರಿಗೆ ದೇರಳಕಟ್ಟೆ ಸಿಟಿ ಗ್ರೌಂಡ್‌ನಲ್ಲಿ ರವಿವಾರ ಹುಟ್ಟೂರ ನಾಗರಿಕ ಸನ್ಮಾನ ಮತ್ತು ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.
ಈ ಅದ್ದೂರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿಟ್ಟೆ ವಿವಿ ಕುಲಾಧಿಪತಿ ಎನ್.ವಿನಯ ಹೆಗ್ಡೆ, ಬಡ ಕುಟುಂಬದಲ್ಲಿ ಜನಿಸಿರುವ ಡಾ.ಕಣಚೂರು ಮೋನು, ಇಂದು ಇಂಥ ಉನ್ನತ ಸ್ಥಾನಕ್ಕೆ ಏರಿರುವುದು ಅವರ ಸಾಧನೆಯ ಜೊತೆಗೆ ಅವರು ತಮ್ಮ ಜೀವನದಲ್ಲಿ ಅಸಾಧ್ಯವನ್ನು ಸಾಧ್ಯವಾಗಿಸಿದ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಂಡಿದ್ದಾರೆ. ಮೋನು ಅವರ ಈ ಸಾಧನೆಗೆ ಅವರ ಪ್ರಾಮಾಣಿಕತೆ, ಸೇವಾ ಮನೋಭಾವ ಹಾಗೂ ಕಠಿಣ ಪರಿಶ್ರಮವೇ ಪ್ರಮುಖ ಕಾರಣ ಎಂದರು.
ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ, ಸರಳ, ಸಜ್ಜನಿಕೆಯಿಂದ ಕೂಡಿದ, ಹೃದಯ ಶ್ರೀಮಂತ ವ್ಯಕ್ತಿಯಾಗಿರುವ ಕಣಚೂರು ಮೋನು ಅವರಿಗೆ ಗೌರವ ಡಾಕ್ಟರೇಟ್ ಅರ್ಹವಾಗಿಯೇ ಸಂದಿದೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಪನೀರ್ ಚರ್ಚ್ ಧರ್ಮ ಗುರು ಫಾ.ವಿಕ್ಟರ್ ಡಿಮೆಲ್ಲೋ ಮಾತನಾಡಿ, ಶೂನ್ಯದಿಂದ ಮೇಲೆದ್ದು ಬಂದಂಥ ಕಣಚೂರು ಮೋನು ಅವರ ಜೀವನ ಇಂದು ನಮ್ಮ ಸಮಾಜಕ್ಕೆ ಬೆಳಕಿನ ಆಶಾಕಿರಣವಾಗಿದೆ ಎಂದು ಬಣ್ಣಿಸಿದರು.
ಕಣಚೂರು ಮೋನು ಸಾಧನೆ ಇಂದು ಎಲ್ಲರಿಗೂ ಮಾದರಿಯಾಗಿದೆ. ಇಷ್ಟೊಂದು ಎತ್ತರಕ್ಕೆ ಬೆಳೆದಿದ್ದರೂ ಅವರೂ ತಾನು ನಡೆದು ಬಂಡ ದಾರಿಯನ್ನು ಎಂದೂ ಮರೆತಿಲ್ಲ ಎಂದು ಡಾ.ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಹೇಳಿದರು.
ಹುಟ್ಟೂರ ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಹಾಜಿ ಕಣಚೂರು ಮೋನು, ನಾನೆಂದೂ ಜೇವನದಲ್ಲಿ ದೊಡ್ಡ ಸ್ಥಾನಮಾನವನ್ನು ಬಯಸಿದವನಲ್ಲ. ಇಂದು ನಾನು ಯಾವುದೇ ಸಾಧನೆ ಮಾಡಿದ್ದರೂ, ಯಾವುದೇ ಪದವಿ ಗಳಿಸಿದ್ದರೂ ಅದೆಲ್ಲವೂ ಭಗವಂತನ ಕೃಪೆಯಿಂದ ಬಂದದ್ದಾಗಿದೆ. ಮಂಗಳೂರು ವಿವಿಯಿಂದ ನನಗೆ ಸಿಕ್ಕಿರುವ ಡಾಕ್ಟರೇಟ್ ಪದವಿಯನ್ನು ತಂದೆ ತಾಯಿಗೆ ಅರ್ಪಿಸುತ್ತೇನೆ ಎಂದು ಅವರು ಘೋಷಣೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಮಾತನಾಡಿದ, ಕಣಚೂರು ಮೋನು ಬಂದ ದಾರಿಯ ಬಗ್ಗೆ ಗುಣಗಾನ ಮಾಡಿದರಲ್ಲದೆ, ನಮ್ಮ ಸಮಾಜಕ್ಕೆ ಮಾದರಿ ಎಂದರು.
ಸಮಾರಂಭದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು, ತಲಪಾಡಿ ದುರ್ಗಾಪರಮೇಶ್ವರಿ ಕ್ಷೇತ್ರದ ಅರ್ಚಕ ಗಣೇಶ್ ಭಟ್ ಸೇರಿದಂತೆ ಮತ್ತತರರು ಉಪಸ್ಥಿತರಿದ್ದರು.
ಸಾಮಾಜಿಕ ಮುಂದಾಳು ಹೈದರ್ ಪರ್ತಿಪ್ಪಾಡಿ ಅಭಿನಂದನಾ ಭಾಷಣ ಮಾಡಿದರೆ, ಕಣಚೂರು ಅಭಿನಂದನಾ ಸಮಿತಿಯ ಅಧ್ಯಕ್ಷ ರವೀಂದ್ರ ರೈ ಕಲ್ಲಿಮಾರು ಸ್ವಾಗತಿಸಿದರು. ಸಾಹಿತಿ ಅಬೂಬಕರ್ ಕೈರಂಗಳ ಸನ್ಮಾನ ಪತ್ರ ವಾಚಿಸಿದ್ದು, ಶಿಕ್ಷಣ ತಜ್ಞ ರಫೀಕ್ ಮಾಸ್ಟರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಕೊನೆಯಲ್ಲಿ ಚಂದ್ರಹಾಸ್ ಶೆಟ್ಟಿ ವಂದಿಸಿದರು.