ಕನ್ನಡ ಪಾಠ ಶಾಲೆ ದುಬೈಗೆ ಅಧಿಕೃತ ಸ್ಥಾನ: ಭರವಸೆ ನೀಡಿದ ಸಚಿವ ಸುನಿಲ್ ಕುಮಾರ್
ಕಾರ್ಕಳ: ಕನ್ನಡ ಮಿತ್ರರು ಯುಎಇ ಆಯೋಜನೆಯ ಕನ್ನಡ ಪಾಠ ಶಾಲೆ ದುಬೈನ 20 ಶಿಕ್ಷಕಿಯರೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ತರಬೇತಿ ಪಡೆದು, ಕನ್ನಡ ಭಾಷಾ ಬೋಧನೆಯನ್ನು ಉಚಿತವಾಗಿ ಮಾಡುತ್ತಿದ್ದು, ಶಾಲೆ ನೀಡುವ ಕನ್ನಡ ಪರಿಣಿತಿ ಪ್ರಮಾಣ ಪತ್ರಕ್ಕೆ ಅಧಿಕೃತ ಸ್ಥಾನಮಾನ ನೀಡಿ, 12ನೇ ತರಗತಿಯನ್ನು ವಿದೇಶದಲ್ಲಿ ಓದಿದ ಕನ್ನಡಿಗರ ಮಕ್ಕಳಿಗೆ CET ಪರೀಕ್ಷೆ ಬರೆಯಲು ಅವಕಾಶ ಕೋರಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರನ್ನು ಸೋಮವಾರ ಕಾರ್ಕಳದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಬೇಡಿಕೆ ಸರಿಯಾಗಿದೆ ಮತ್ತು ಕನ್ನಡ ಕಲಿತ ಅನಿವಾಸಿ ಮಕ್ಕಳಿಗೆ ಸಿಗಬೇಕಾದ ಉತ್ತೇಜನ ಆದುದ್ದರಿಂದ ಮನವಿಯನ್ನು ಶೀಘ್ರ ಕ್ರಮಕ್ಕೆ ಕಳಿಸುವ ಭರವಸೆ ನೀಡಿದರು.
ಯುಎಇ ದೇಶದಿಂದ ಭೇಟಿ ನೀಡಿದ್ದ ಕನ್ನಡ ಪಾಠ ಶಾಲೆ ದುಬೈನ ಮಹಾ ಪೋಷಕ ಪ್ರವೀಣ್ ಕುಮಾರ್ ಶೆಟ್ಟಿ, ಅಧ್ಯಕ್ಷ ಶಶಿಧರ್ ನಾಗರಾಜಪ್ಪ, ಉಪಾಧ್ಯಕ್ಷ ಸಿದ್ದಲಿಂಗೇಶ್ ಹಾಗು ಖಜಾಂಚಿ ನಾಗರಾಜ್ ರಾವ್ ಸಚಿವರಿಗೆ ವಿಸ್ತಾರವಾಗಿ ವಿಷಯದ ಬಗ್ಗೆ ಮಾಹಿತಿ ನೀಡಿದರು.
ಅದೇ ದಿನ ಅದ್ಧೂರಿಯಾಗಿ ಜರುಗಿದ ಶ್ರೀ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ದುಬೈನ ತಂಡ ವಿಶೇಷ ಅತಿಥಿಗಳಾಗಿ ಸತ್ಕಾರಗೊಂಡರು.