ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿ ವಜಾ: ಯಾವುದೇ ಕ್ಷಣದಲ್ಲಿ ಬಂಧನವಾಗುವ ಸಾಧ್ಯತೆ
ಬೆಂಗಳೂರು: ಲಂಚ ಪ್ರಕರಣದ ಪ್ರಮುಖ ಆರೋಪಿಯಾಗಿರುವ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೋಮವಾರ ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿದ್ದು, ವಿರೂಪಾಕ್ಷಪ್ಪ ಯಾವುದೇ ಕ್ಷಣದಲ್ಲಿ ಬಂಧನವಾಗುವ ಸಾಧ್ಯತೆಯಿದೆ.
ಸೋಮವಾರ ಹೈಕೋರ್ಟ್ ವಿಚಾರಣೆಯ ವೇಳೆ ಲೋಕಾಯುಕ್ತ ಪರ ವಕೀಲರು ಜಾಮೀನು ಅರ್ಜಿಗೆ ಪ್ರಬಲವಾದ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಏಕಸದಸ್ಯ ಪೀಠ ವಿರೂಪಾಕ್ಷಪ್ಪರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
KSDL ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿಯಾಗಿರುವ BJP ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಮಾರ್ಚ್ 7 ರಂದು ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು.
ಪುತ್ರ ಪ್ರಶಾಂತ್ ಮಾಡಾಳ್ ಲಂಚ ಪಡೆಯುವ ವೇಳೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಬಳಿಕ ನಾಪತ್ತೆಯಾಗಿದ್ದ ವಿರೂಪಾಕ್ಷಪ್ಪ ಜಾಮೀನು ಸಿಕ್ಕಿದ ಬೆನ್ನಲ್ಲೇ ಮನೆಗೆ ವಾಪಸ್ ಆಗಿದ್ದರು. ಈ ವೇಳೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಅಭಿಮಾನಿಗಳು ಜಯಘೋಷ ಹಾಕಿ ವಿರೂಪಾಕ್ಷಪ್ಪರನ್ನು ಸ್ವಾಗತಿಸಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು.