ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದಿಂದ ಸರಕಾರ ಮುಜುಗರಕ್ಕೀಡಾಗಿದೆ: ಸಚಿವ ಮಾಧುಸ್ವಾಮಿ
ಬೆಂಗಳೂರು(Headlines Kannada): ಕೆಲವು ದಿನಗಳ ಹಿಂದೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ 8 ಕೋಟಿ ರೂ. ವಶಪಡಿಸಿಕೊಂಡಿರುವ ಪ್ರಕರಣದಿಂದಾಗಿ ರಾಜ್ಯ ಸರ್ಕಾರಕ್ಕೆ ಮುಜುಗರವನ್ನು ಅನುಭವಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸಿಜೆ ಮಾಧುಸ್ವಾಮಿ ಹೇಳಿದ್ದಾರೆ.
ನಿನ್ನೆ ನಡೆದ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಂಚ ಪ್ರಕರಣಕ್ಕೆ ಸಂಬಂಧಿಸಿ ವಿರೂಪಾಕ್ಷಪ್ಪ ಅವರಿಗೆ ರಾಜ್ಯ ಬಿಜೆಪಿ ನೋಟಿಸ್ ಜಾರಿ ಮಾಡಿದ್ದು, ಅವರಿಂದ ಈ ಬಗ್ಗೆ ವಿವರಣೆ ಕೇಳಿದೆ. ಈ ಲಂಚ ಪ್ರಕರಣ ಮುಜುಗರದ ಸಂಗತಿಯಾಗಿದ್ದು, ಅದನ್ನು ನಾವು ನಿರಾಕರಿಸುವುದಿಲ್ಲ ಎಂದರು.
ಲಂಚ ಪ್ರಕರಣದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಶಾಸಕರ ಪುತ್ರ, ಬಿಡಬ್ಲ್ಯುಎಸ್‌ಎಸ್‌ಬಿ ಮುಖ್ಯ ಖಾತೆ ಅಧಿಕಾರಿ ಪ್ರಶಾಂತ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದರೂ, ಅವರನ್ನು ಅಮಾನತುಗೊಳಿಸದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಧುಸ್ವಾಮಿ, ಈ ಬಗ್ಗೆ ನನಗೆ ಗೊತ್ತಿಲ್ಲ, ಯಾವ ಅಧಿಕಾರಿ ಕೂಡ 48 ಗಂಟೆಗಳಿಗಿಂತ ಹೆಚ್ಚು ಕಾಲ ಸೆರೆಯಲ್ಲಿದ್ದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದರು.